ಭಾರತದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಮಹಿಳೆಯರು

Update: 2021-04-02 05:43 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಹಿಳೆಗೆ ಅಸಾಮಾನ್ಯ ಸ್ಥಾನಮಾನವನ್ನು ನೀಡಲಾಗುತ್ತಿದೆ ಎಂದು ಶತಮಾನಗಳಿಂದ ಭಾರತ ತನ್ನ ಬೆನ್ನನ್ನು ತಾನೇ ತಟ್ಟುತ್ತಾ ಬಂದಿದೆ. ಆದರೆ, ಹೆಣ್ಣಿನ ಕುರಿತ ಸರ್ವ ಗೌರವವೂ ಶ್ಲೋಕಗಳಲ್ಲೇ ಉಳಿದುಕೊಂಡಿವೆ. ವಾಸ್ತವದಲ್ಲಿ ವಿಶ್ವದಲ್ಲೇ ಅತ್ಯಧಿಕ ಶೋಷಣೆ ಭಾರತೀಯ ಮಹಿಳೆಯರ ಮೇಲೆ ನಡೆಯುತ್ತಾ ಬಂದಿದೆ. ಒಂದೆಡೆ ಹೆಣ್ಣನ್ನು ಪೂಜನೀಯಳು ಎನ್ನುತ್ತಲೇ, ಮಗದೊಂದೆಡೆ ಆಕೆಗೆ ವಿಧವೆ ಪಟ್ಟ ಕಟ್ಟಿ ಅಮಾನವೀಯವಾಗಿ ಶೋಷಿಸಲಾಯಿತು. ಇಂದಿಗೂ ಭಾರತದ ವೃಂದಾವನದಲ್ಲಿ ವಿಧವೆಯರಿಗಾಗಿಯೇ ಒಂದು ಕೇರಿಯಿದೆ ಎನ್ನುವುದು ನಮಗೆ ಅವಮಾನವಾಗಿ ಕಂಡಿಲ್ಲ. ಆ ಕೇರಿಯನ್ನು ತೊಡೆದು ಹಾಕಲು ಸ್ವಾತಂತ್ರೋತ್ತರ ಭಾರತಕ್ಕೆ ಸಾಧ್ಯವಾಗಿಲ್ಲ. ದೇಶದ ವಿವಿಧೆಡೆಗಳಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಆ ಕೇರಿಗೆ ತಂದು ಬಿಡುವ ಕ್ರೌರ್ಯ ಈಗಲೂ ಜೀವಂತವಿದೆ.

ಬದುಕುವುದಕ್ಕಾಗಿ ಅವರು ಭಿಕ್ಷೆ ಬೇಡುವ ಸ್ಥಿತಿಯಿದೆ. ಹಾಗೆಯೇ, ಪತಿಯ ಚಿತೆಯಲ್ಲಿಟ್ಟು ಹೆಣ್ಣನ್ನು ಬರ್ಬರವಾಗಿ ಸುಟ್ಟು ಕೊಂದ ಹಿರಿಮೆಯೂ ನಮ್ಮದಾಗಿದೆ. ದೇವರ ಹೆಸರಲ್ಲಿ ದೇವದಾಸಿಯರನ್ನು ಸೃಷ್ಟಿಸಿ ಅವರನ್ನು ಉಳ್ಳವರ ತೊತ್ತಾಗಿಸಿದ್ದೂ ಈ ದೇಶದಲ್ಲೇ ಆಗಿದೆ. ಹುಟ್ಟಿಗೆ ಕಾರಣವಾಗುವ ಮುಟ್ಟಿನ ಹೆಸರಿನಲ್ಲಿ ಈಗಲೂ ಶೋಷಣೆ ಮುಂದುವರಿದಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಆಕೆಯ ಸ್ಥಿತಿಯಲ್ಲಿ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಆಧುನಿಕ ದಿನಗಳಲ್ಲಿ ಆಕೆ ಶಿಕ್ಷಣಕ್ಕೆ ತೆರೆದುಕೊಂಡಿದ್ದಾಳೆ ಎನ್ನುವುದು ಸಮಾಧಾನಕರ ವಿಷಯವಾದರೂ, ಉದ್ಯೋಗ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಆಕೆಯ ಪ್ರಾತಿನಿಧ್ಯ ಪರಿಣಾಮಕಾರಿಯಾಗಿ ಆಗಿಲ್ಲ. ವಿಪರ್ಯಾಸವೆಂದರೆ, ಜಾಗತಿಕ ಆರ್ಥಿಕ ವೇದಿಕೆಯ ಲಿಂಗ ಸಮಾನತೆ ಸೂಚ್ಯಂಕ ರ್ಯಾಂಕಿಂಗ್‌ನಲ್ಲಿ ಆಕೆಯ ಸ್ಥಾನ ಹಿಂದಕ್ಕೆ ಚಲಿಸುತ್ತಿದೆ. 2020ರಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಸಂಬಂಧಿಸಿ ಭಾರತ 112ನೇ ಸ್ಥಾನದಲ್ಲಿದ್ದರೆ, ಬರೇ ಒಂದು ವರ್ಷದಲ್ಲಿ ಈ ರ್ಯಾಂಕಿಂಗ್‌ನಲ್ಲಿ ಭಾರತ 28 ಸ್ಥಾನಗಳಿಗೆ ಕುಸಿತ ಕಂಡಿದೆ. ಅಂದರೆ, ಕಳೆದ ವರ್ಷಕ್ಕಿಂತ ಈ ವರ್ಷ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದಾರೆ.

 ರಾಜಕೀಯ ಸಬಲೀಕರಣ ಕುರಿತ ಉಪಸೂಚ್ಯಂಕದಲ್ಲಿ ಬಹುತೇಕ ಕುಸಿತ ಉಂಟಾಗಿದ್ದು, ಭಾರತವು 13.5 ಶೇ. ಅಂಕಗಳಷ್ಟು ಹಿನ್ನಡೆ ಸಾಧಿಸಿದೆ. 2019ರಲ್ಲಿ ಶೇ. 23.1ರಷ್ಟಿದ್ದ ಮಹಿಳಾ ಸಚಿವರ ಸಂಖ್ಯೆ 2021ರ ಸಾಲಿನಲ್ಲಿ ಶೇ. 9.1ಕ್ಕೆ ಕುಸಿದಿದೆ ಎಂದು ವರದಿ ಹೇಳಿದೆ. ಮಾತು ಮಾತಿಗೆ ಹೆಣ್ಣು, ಸಂಸ್ಕೃತಿ ಎಂದು ಮಾತನಾಡುವ ಬಿಜೆಪಿಯ ಅಧಿಕಾರಾವಧಿಯಲ್ಲೇ ಮಹಿಳೆಯರ ಸ್ಥಾನಮಾನದಲ್ಲಿ ತೀವ್ರ ಕುಸಿತ ಕಂಡು ಬಂದಿರುವುದು ಕಾಕತಾಳೀಯವಲ್ಲ. ಹೆಣ್ಣಿನ ಕುರಿತಂತೆ ಸಂಘಪರಿವಾರದ ನಾಯಕರು ಈ ಹಿಂದೆ ತಳೆದುಕೊಂಡು ಬಂದ ನಿರ್ಧಾರಗಳಿಗೂ, ಈ ಇಳಿಕೆಗೂ ನೇರ ಸಂಬಂಧವಿದೆ. ಬಾಲಗಂಗಾಧರ ತಿಲಕರು, ಹೆಣ್ಣು ಪಾಶ್ಚಿಮಾತ್ಯ ಶಿಕ್ಷಣ ಪಡೆಯುವುದರ ವಿರುದ್ಧವಿದ್ದರು. ಗೋಳ್ವಾಲ್ಕರ್ ಸಹಿತ ಹಲವು ಮನುವಾದಿ ನಾಯಕರು ಹೆಣ್ಣಿನ ಕುರಿತಂತೆ ತುಚ್ಛ ಭಾವವನ್ನು ತಳೆದಿದ್ದರು. ಗೋಳ್ವಾಲ್ಕರ್ ಒಂದು ಹೆಜ್ಜೆ ಮುಂದೆ ಹೋಗಿ, ಕೇರಳದಲ್ಲಿ ಮದುವೆಯಾಗುವ ಕೆಳಜಾತಿಯ ಈಳವ ಮಹಿಳೆಯರು ತಮ್ಮ ಮೊದಲ ರಾತ್ರಿಯನ್ನು ನಂಬೂದಿರಿ ಬ್ರಾಹ್ಮಣರ ಜೊತೆಗೆ ಕಳೆಯುವುದನ್ನು ಸಮರ್ಥಿಸಿಕೊಂಡಿದ್ದರು.

ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಸಂದರ್ಭದಲ್ಲೇ ಮಗದೊಂದೆಡೆ, ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚುತ್ತಿರುವುದು ವರದಿಯಾಗುತ್ತಿವೆ. ಯೋಗಿಯೆಂದು ಕರೆಯಲ್ಪಡುವ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದಲ್ಲಿ ಹೆಣ್ಣಿನ ಮೇಲಿನ ಅತ್ಯಾಚಾರಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವುದು ಮಾತ್ರವಲ್ಲ, ನ್ಯಾಯಕ್ಕಾಗಿ ಧ್ವನಿಯೆತ್ತುವ ಸಂತ್ರಸ್ತ ಮಹಿಳೆಯರು ಮತ್ತು ಅವರ ಕುಟುಂಬದ ಮೇಲೆ ರಾಜಕೀಯ ದಾಳಿಗಳು ನಡೆಯುತ್ತಿವೆ. ‘ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ’ ಎಂಬ ಅಂತರ್‌ರಾಷ್ಟ್ರೀಯ ವರದಿಯನ್ನು ಪುಷ್ಟೀಕರಿಸುವಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಲಾಕ್‌ಡೌನ್ ಬಳಿಕದ ದಿನಗಳಲ್ಲಿ ವಲಸೆ ಕಾರ್ಮಿಕರ ಸ್ಥಿತಿಗತಿಗಳು ಚರ್ಚೆಯಾದವು. ಇದೇ ಸಂದರ್ಭದಲ್ಲಿ ಮಹಿಳೆಯರ ಬದುಕು ಬೀದಿಗೆ ಬಿದ್ದುದನ್ನು ಪ್ರತ್ಯೇಕವಾಗಿ ಚರ್ಚಿಸುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಭಾರತದಲ್ಲಿ ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆ ಇರುವುದೇ ಶೇ. 24.8ರಷ್ಟು. ಲಾಕ್‌ಡೌನ್ ಸಂದರ್ಭದಲ್ಲಿ ಮಹಿಳೆಯರ ಪ್ರಾತಿನಿಧ್ಯ ವಿವಿಧ ಕ್ಷೇತ್ರಗಳಲ್ಲಿ ವಿಪರೀತ ಇಳಿಕೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಮೊದಲು ಕೆಲಸ ಕಳೆದುಕೊಂಡವರು ಮಹಿಳೆಯರೇ ಆಗಿದ್ದರು. ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸುತ್ತಿದ್ದ ಮಹಿಳೆಯರ ಮೇಲೆ ಲಾಕ್‌ಡೌನ್ ಇನ್ನಷ್ಟು ಸಮಸ್ಯೆಗಳ ಬರೆಗಳನ್ನು ಎಳೆಯಿತು. ಮಹಿಳೆಯರ ಮೇಲೆ ಹೆಚ್ಚಾದ ಕೌಟುಂಬಿಕ ದೌರ್ಜನ್ಯಗಳನ್ನು ಕೆಲವು ವರದಿಗಳು ಬಹಿರಂಗ ಪಡಿಸಿವೆ.

ಆದರೆ, ಇದೇ ಸಂದರ್ಭದಲ್ಲಿ ಕುಟುಂಬದ ಆರ್ಥಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡ ಮಹಿಳೆಯರ ಮೇಲೆ ಇದು ಮಾಡಿರುವ ಹಾನಿಗಳನ್ನು ಪ್ರತ್ಯೇಕವಾಗಿ ಪರಿಗಣಿಸುವ ಪ್ರಯತ್ನ ನಡೆಯಬೇಕಾಗಿದೆ. ಮಹಿಳೆಯರ ಪ್ರಾತಿನಿಧ್ಯ ಇಳಿಮುಖವಾಗುವುದರ ಹಿಂದೆ ಲಾಕ್‌ಡೌನ್ ಕೂಡ ತನ್ನದೇ ಕೊಡುಗೆಗಳನ್ನು ನೀಡಿದೆ. ಕೃಷಿ ವಲಯದಲ್ಲಿ ಮಹಿಳೆಯರ ಪಾತ್ರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕೃಷಿ ಕಾಯ್ದೆಗಳೇನಾದರೂ ಜಾರಿಗೆ ಬಂದರೆ, ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಮೇಲೆ ಅದು ತೀವ್ರ ದುಷ್ಪರಿಣಾಮವನ್ನು ಬೀರಲಿವೆ. ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾತಿನಿಧ್ಯ ಸಿಗುವುದಕ್ಕಾಗಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಬೇಕು ಎನ್ನುವ ಆಗ್ರಹ ಬರೇ ಒಣ ಚರ್ಚೆಯಾಗಿಯೇ ಉಳಿದಿದೆ. ಈ ಮಧ್ಯೆ, ಶೇ. 33 ಮೀಸಲಾತಿಯನ್ನು ಕೇವಲ ಮಹಿಳೆಯರಿಗೆಂದು ಮೀಸಲಾಗಿಟ್ಟರೆ ಅದರ ಲಾಭವೆಲ್ಲ ಮೇಲ್‌ಜಾತಿಗಳು ತಮ್ಮದಾಗಿಸಬಹುದು. ಆದುದರಿಂದ, ಜಾತಿವಾರು ಮೀಸಲಾತಿಯನ್ನು ವಿಂಗಡಿಸಬೇಕು ಎನ್ನುವ ಬೇಡಿಕೆ ಮೀಸಲಾತಿ ಜಾರಿಯಾಗುವುದಕ್ಕೆ ದೊಡ್ಡ ತೊಡಕಾಯಿತು. ಆದರೆ ಈ ಆಗ್ರಹವನ್ನೂ ನಿರಾಕರಿಸಲಾಗುವುದಿಲ್ಲ. ಇಂದು ಶಿಕ್ಷಣ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಮುಂದುವರಿದ ಜಾತಿಗಳ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಶೇ. 33 ಮೀಸಲಾತಿ ಮಸೂದೆಯನ್ನು ಯಥಾವತ್ ಜಾರಿಗೊಳಿಸಿದರೆ, ಮೇಲ್ ಜಾತಿಯು ರಾಜಕೀಯವಾಗಿ ಇನ್ನಷ್ಟು ಪ್ರಾತಿನಿಧ್ಯವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತದೆ. ಇದು ಹಿಂದುಳಿದ ವರ್ಗ ಮತ್ತು ಕೆಳಜಾತಿಯ ಮಹಿಳೆಯರನ್ನು ಇನ್ನಷ್ಟು ಹಿಂದಕ್ಕೆ ತಳ್ಳುತ್ತದೆ.

ಇತ್ತೀಚೆಗೆ ಬೇರೆ ಬೇರೆ ಪ್ರಬಲ ಜಾತಿಗಳು ಮೀಸಲಾತಿಗಾಗಿ ಬೀದಿಗಿಳಿದಿವೆ. ಯಾವುದೇ ಹೋರಾಟಗಳಿಲ್ಲದೆ ಮೇಲ್ಜಾತಿಯ ಬಡವರು ಶೇ. 10 ಮೀಸಲಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದಲಿತ ಸಮುದಾಯ ಒಳಮೀಸಲಾತಿಗಾಗಿ ಧ್ವನಿಯೆತ್ತಿವೆ. ಇದೇ ಸಂದರ್ಭದಲ್ಲಿ ದುರ್ಬಲ ವರ್ಗಕ್ಕೆ ನೀಡಿದ ಮೀಸಲಾತಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆದ್ಯತೆಯನ್ನು ನೀಡುವುದು ಅತ್ಯಗತ್ಯ ಎನ್ನುವ ಅಂಶವನ್ನು ನಾವು ಮರೆತಿದ್ದೇವೆ. ಮಹಿಳಾ ಪ್ರಾತಿನಿಧ್ಯ ಹೆಚ್ಚಬೇಕಾದರೆ, ದುರ್ಬಲ ವರ್ಗದ ಮೀಸಲಾತಿಗಳಲ್ಲಿ ಮಹಿಳೆಯರಿಗೆ ಸಮಪಾಲನ್ನು ನೀಡಬೇಕಾಗಿದೆ. ಮೀಸಲಾತಿಯೇ ಅಪಾಯಕ್ಕೆ ಸಿಲುಕಿಕೊಂಡಿರುವ ಈ ಸಂದರ್ಭದಲ್ಲಿ, ಶೋಷಿತರು ಇನ್ನಷ್ಟು ಶೋಷಣೆಗೆ ಈಡಾಗುತ್ತಿರುವಾಗ ಅದರ ದುಷ್ಪರಿಣಾಮಕ್ಕೆ ಮೊದಲು ಮಹಿಳೆಯರು ಬಲಿಯಾಗುತ್ತಾರೆ. ಸರಕಾರದ ಖಾಸಗೀಕರಣದ ಪ್ರಯತ್ನದ ಬಲಿ ಪಶುಗಳೂ ಮಹಿಳೆಯರೇ. ಕೋಮು ಉದ್ವಿಗ್ನತೆಯ ಮೊದಲ ಬಲಿಪಶುಗಳೂ ಮಹಿಳೆಯರೇ. ಜಾತೀಯತೆಯ ಉರುಳಿಗೆ ಮೊದಲು ಬೀಳುವವರೂ ಮಹಿಳೆಯರೇ. ವಿವಿಧ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮಹಿಳೆಯರ ಪ್ರಾತಿನಿಧ್ಯ ಇಳಿಮುಖವಾಗಲು ಸರಕಾರದ ನೀತಿಗಳೇ ಕಾರಣ. ಮುಂದಿನ ದಿನಗಳಲ್ಲಿ ಮಹಿಳೆಯರ ಸ್ಥಿತಿ ಇನ್ನೂ ಶೋಚನೀಯವಾಗಲಿದೆ ಎನ್ನುವ ಎಚ್ಚರಿಕೆಯನ್ನು ಲಿಂಗ ಸಮಾನತೆಯ ಸೂಚ್ಯಂಕ ರ್ಯಾಂಕಿಂಗ್ ನಮಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News