ಆ್ಯಸ್ಟ್ರಝೆನೆಕ ಲಸಿಕೆ ಬಳಕೆ: ಬ್ರಿಟನ್‌ನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ 7 ಸಾವು

Update: 2021-04-03 15:55 GMT

ಲಂಡನ್, ಎ. 3: ಆ್ಯಸ್ಟ್ರಝೆನೆಕ ಲಸಿಕೆಯನ್ನು ಸ್ವೀಕರಿಸಿದ ಬಳಿಕ ರಕ್ತ ಹೆಪ್ಪುಗಟ್ಟಿದ 30 ಮಂದಿಯ ಪೈಕಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಬ್ರಿಟನ್‌ನ ಔಷಧ ನಿಯಂತ್ರಣ ಸಂಸ್ಥೆ ಶನಿವಾರ ತಿಳಿಸಿದೆ.

ರಕ್ತಹೆಪ್ಪುಗಟ್ಟುವ ಅಪಾಯದ ಹಿನ್ನೆಲೆಯಲ್ಲಿ ಹಲವು ಯುರೋಪಿಯನ್ ದೇಶಗಳು ಆ್ಯಸ್ಟ್ರಝೆನೆಕ ಲಸಿಕೆ ಬಳಸುವುದನ್ನು ಸ್ಥಗಿತಗೊಳಿಸಿರುವ ನಡುವೆಯೇ ಬ್ರಿಟಿಶ್ ಸರಕಾರ ಈ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.

‘‘ಮಾರ್ಚ್ 24ರವರೆಗೆ, ರಕ್ತ ಹೆಪ್ಪುಗಟ್ಟಿರುವ 30 ಪ್ರಕರಣಗಳು ವರದಿಯಾಗಿವೆ. ದುರದೃಷ್ಟವಶಾತ್ 7 ಮಂದಿ ಮೃತಪಟ್ಟಿದ್ದಾರೆ’’ ಎಂದು ನಿಯಂತ್ರಣ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ನೆದರ್‌ಲ್ಯಾಂಡ್ಸ್‌ನಲ್ಲಿ, 60 ವರ್ಷಕ್ಕಿಂತ ಕೆಳಗಿನವರಿಗೆ ಆ್ಯಸ್ಟ್ರಝೆನೆಕ ಲಸಿಕೆ ನೀಡುವುದನ್ನು ಶುಕ್ರವಾರದಿಂದ ನಿಲ್ಲಿಸಲಾಗಿದೆ. ಲಸಿಕೆ ಸ್ವೀಕರಿಸಿದ ಬಳಿಕ, ಐವರು ಮಹಿಳೆಯರ ರಕ್ತ ಹೆಪ್ಪುಗಟ್ಟಿದ ಬಳಿಕ ಅದು ಈ ಕ್ರಮ ತೆಗೆದುಕೊಂಡಿದೆ. ಈ ಪೈಕಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಆ್ಯಸ್ಟ್ರಝೆನೆಕ ಲಸಿಕೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಜರ್ಮನಿ ಈ ವಾರದ ಆರಂಭದಲ್ಲಿ ಪ್ರಕಟಿಸಿದೆ.

ಈ ಲಸಿಕೆಯು ಬಳಕೆಗೆ ಸುರಕ್ಷಿತವಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಮ್‌ಎ) ಹೇಳಿವೆಯಾದರೂ, ಇಎಮ್‌ಎ ಈ ವಿಷಯದ ಬಗ್ಗೆ ಪರಿಷ್ಕೃತ ಸಲಹೆಯನ್ನು ಎಪ್ರಿಲ್ 7ರಂದು ಹೊರಡಿಸುವ ನಿರೀಕ್ಷೆಯಿದೆ.

ಬ್ರಿಟನ್‌ನಲ್ಲಿ ಈವರೆಗೆ 3.1 ಕೋಟಿಗಿಂತಲೂ ಅಧಿಕ ಜನರಿಗೆ ಕೊರೋನ ವೈರಸ್ ಲಸಿಕೆಗಳನ್ನು ನೀಡಲಾಗಿದೆ. ಲಸಿಕಾ ಅಭಿಯಾನದಲ್ಲಿ ಆಕ್ಸ್‌ಫರ್ಡ್-ಆ್ಯಸ್ಟ್ರಝೆನೆಕ ಮತ್ತು ಫೈಝರ್-ಬಯೋಎನ್‌ಟೆಕ್- ಈ ಎರಡೂ ಕಂಪೆನಿಗಳ ಲಸಿಕೆಗಳನ್ನು ಬಳಸಲಾಗುತ್ತಿದೆ. ಆದರೆ, ತಮಗೆ ಯಾವ ಲಸಿಕೆ ಬೇಕು ಎನ್ನುವುದನ್ನು ಜನರು ಆಯ್ಕೆ ಮಾಡುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News