ಯುವ ಜನತೆ ಆರ್ಥಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲಿ: ಡಾ.ಸಿದ್ದಲಿಂಗಯ್ಯ

Update: 2021-04-04 18:35 GMT

ಬೆಂಗಳೂರು, ಎ.4: ಯುವ ಜನತೆ ಆರ್ಥಿಕವಾಗಿ ಮುಂದೆ ಬರುತ್ತಲೇ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಬೇಕೆಂದು ಎಂದು ಡಾ. ಸಿದ್ದಲಿಂಗಯ್ಯ ಅಭಿಪ್ರಾಯಿಸಿದ್ದಾರೆ.

ರವಿವಾರ ಕರ್ನಾಟಕ ಅಂಧರ ವಿಮೋಚನಾ ವೇದಿಕೆ, ಆಶ್ರಯ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಕಲ್ಯಾಣ ಸಂಸ್ಥೆಯಿಂದ ನಗರದ ಗಾಂಧಿಭವನದಲ್ಲಿ ಆಯೋಜಿಸಿದ ಮುದಿಗೆರೆ ರಮೇಶ್ ಕುಮಾರ್ ಅವರ ಕವನ ಸಂಕಲನ ಬಟಾಬಯಲು ಲೋಕಾರ್ಪಣೆ, ರಾಜ್ಯ ಮಟ್ಟದ ಅಂಧ ಹಾಗೂ ಇತರೆ ಬರಹಗಾರರ ಸಮನ್ವಯ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಜಾತಿ ವ್ಯವಸ್ಥೆ ಪಿರಮಿಡ್‍ನಂತಿದೆ. ಕೆಳಗಿನ ಜಾತಿಯವರು ಮೇಲ್ಜಾತಿಯಾಗಲು ಹಾಗೂ ಮೇಲ್ಜಾತಿಯವರು ಕೆಳಜಾತಿಗೆ  ಬದಲಾಗಲು ಸಾಧ್ಯವಿಲ್ಲ. ಆದರೆ, ವರ್ಗ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಿದೆ. ಕಷ್ಟಪಟ್ಟು ದುಡಿದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿಯೂ ಮುಂದೆ ಬರಬೇಕು. ಇದರ ಜತೆಗೆ ಜಾತಿ ನಿರ್ಮೂಲನೆ ಕಡೆಗೆ ಹೆಜ್ಜೆ ಹಾಕಬೇಕೆಂದು ಅವರು ಆಶಿಸಿದ್ದಾರೆ.

ವಿದೇಶಗಳಲ್ಲಿ ಅಂಧರ ಬಗ್ಗೆ ಸಾರ್ವಜನಿಕರಲ್ಲಿ ಕಾಳಜಿಯಿದೆ. ಅಮೆರಿಕಾದಂತಹ ಮುಂದುವರಿದ ಹಾಗೂ ಇನ್ನಿತರ ದೇಶಗಳಲ್ಲಿ ಅಂಧರು ರಸ್ತೆ ದಾಟಲು ಮುಂದಾದರೆ, ವಾಹನ ಸವಾರರು ಹಾಗೂ ಸಾರ್ವಜನಿಕರು ಅವರಿಗೆ ಅನುವು ಮಾಡಿಕೊಡುತ್ತಾರೆ. ಇಂತಹ ಮಾನವೀಯ ಮೌಲ್ಯಗಳನ್ನು ನಾವು ಬೆಳೆಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ರಮೇಶ್ ಕವಿಯಾದರೂ, ಅವರಲೊಬ್ಬ ವಿಚಾರವಾದಿ ಅಡಗಿದ್ದಾನೆ. ಹಿರಿಯ ಸಾಹಿತಿಗಳಿಗೂ ದಕ್ಕದ ಸಾಹಿತ್ಯ, ಕಾವ್ಯ ಪ್ರೌಡಿಮೆಯನ್ನು ಇವರು ಸಿದ್ದಿಸಿಕೊಂಡಿದ್ದಾರೆ. ತನ್ನ ಅಂತರಾಳ ನೋಟದಿಂದಲೇ ಸಮಾಜವನ್ನು ಅರಿತು ಅದಕ್ಕೆ ಅಕ್ಷರ ರೂಪ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಗಾಯಕ ಎಚ್.ಜನಾರ್ಧನ್‍ಗೆ ಡಾ.ಪುಟ್ಟರಾಜ ಗವಾಯಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಟಿ.ಎಸ್. ನಾಗಭರಣ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News