ಹೊಸ ಕೊರೋನ ಪ್ರಕರಣ: ಮತ್ತೆ ಭಾರತ ದಾಖಲೆ

Update: 2021-04-07 04:10 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.7: ಹೊಸ ಕೋವಿಡ್-19 ಸೋಂಕು ಪ್ರಕರಣಗಳಲ್ಲಿ ಮಂಗಳವಾರ ಭಾರತ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ. ದೇಶದಲ್ಲಿ 1.07 ಲಕ್ಷ ಪ್ರಕರಣಗಳು ಮಂಗಳವಾರ ಸೇರ್ಪಡೆಯಾಗಿದ್ದು, ಮುಂದಿನ ನಾಲ್ಕು ವಾರಗಳು ಅತ್ಯಂತ ಪ್ರಮುಖ ಹಾಗೂ ಎರಡನೇ ಅಲೆಯ ನಿಯಂತ್ರಣಕ್ಕೆ ಜನತೆ ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.

ಕಳೆದ ವರ್ಷಕ್ಕಿಂತ ಹೆಚ್ಚು ವೇಗವಾಗಿ ಸೋಂಕು ಹರಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಎಚ್ಚರಿಕೆ ನೀಡಿದ್ದು, ಜನತೆ ಮಾಸ್ಕ್ ಧರಿಸುವಂಥ ರೋಗ ನಿಯಂತ್ರಣ ಕ್ರಮಗಳಿಗೆ ತಿಲಾಂಜಲಿ ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡಬೇಕು ಎಂಬ ಒತ್ತಾಯಗಳು ಹೆಚ್ಚುತ್ತಿರುವ ನಡುವೆಯೇ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವತ್ತ ಸರ್ಕಾರ ಒಲವು ತೋರಿದೆ. ಸದ್ಯ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದು.

ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ 5,100 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಈ ವರ್ಷದ ಅತ್ಯಧಿಕ. ಈ ಹಿನ್ನೆಲೆಯಲ್ಲಿ ಎಪ್ರಿಲ್ 30ರವರೆಗೆ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ದೇಶದಲ್ಲಿ ಮಂಗಳವಾರ ಹೊಸ ಪ್ರಕರಣಗಳ ಸಂಖ್ಯೆ 1.07 ಲಕ್ಷ ದಾಟಿದ್ದು, ಕಳೆದ ವರ್ಷದ ಜನವರಿ 30ರಂದು ಮೊದಲ ಪ್ರಕರಣ ಕಾಣಿಸಿಕೊಂಡ ಬಳಿಕ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ. ರವಿವಾರ ದೇಶದಲ್ಲಿ 1,03,558 ಪ್ರಕರಣ ದಾಖಲಾಗಿತ್ತು. ಮಹಾರಾಷ್ಟ್ರದಲ್ಲಿ ಒಂದೇ ದಿನ 55 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News