ಮಕ್ಕಳ ಮೇಲಿನ ಪ್ರಯೋಗ ಸ್ಥಗಿತಗೊಳಿಸಿದ ಆ್ಯಸ್ಟ್ರಝೆನೆಕ

Update: 2021-04-07 18:08 GMT

ಲಂಡನ್, ಎ. 7: ಆ್ಯಸ್ಟ್ರಝೆನೆಕ ಕೊರೋನ ವೈರಸ್ ಲಸಿಕೆಯ ಮಕ್ಕಳ ಮೇಲಿನ ಪ್ರಯೋಗವನ್ನು ನಿಲ್ಲಿಸಲಾಗಿದೆ ಎಂದು ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮಂಗಳವಾರ ತಿಳಿಸಿದೆ. ಲಸಿಕೆಗೂ ರಕ್ತಹೆಪ್ಪುಗಟ್ಟುವಿಕೆಗೂ ನಡುವಿನ ಸಂಭಾವ್ಯ ನಂಟಿನ ಬಗ್ಗೆ ಪರಿಣತರು ಅಧ್ಯಯನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.

‘‘ಬ್ರಿಟನ್‌ನಲ್ಲಿ ಮಕ್ಕಳ ಮೇಲೆ ಲಸಿಕೆಯ ಪ್ರಯೋಗವನ್ನು ಮಾಡಲಾಗುತ್ತಿದೆ. ಲಸಿಕೆಯು ಸುರಕ್ಷತಗೆ ಅಪಾಯವೊಡ್ಡುತ್ತಿರುವ ಯಾವುದೇ ಲಕ್ಷಣಗಳು ಇಲ್ಲದಿದ್ದರೂ, ಕೆಲವು ಅಪರೂಪದ ಪ್ರಕರಣಗಳಲ್ಲಿ ವಯಸ್ಕರಲ್ಲಿ ಕಂಡುಬಂದಿರುವ ರಕ್ತಹೆಪ್ಪುಗಟ್ಟುವಿಕೆ ಬಗ್ಗೆ ಈಗ ತಜ್ಞರಿಂದ ವಿಶ್ಲೇಷಣೆ ನಡೆಯುತ್ತಿದೆ. ನಾವೀಗ ಅದರ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಅಲ್ಲಿಯವರೆಗೆ ಮಕ್ಕಳ ಮೇಲಿನ ಪ್ರಯೋಗವನ್ನು ತಡೆಹಿಡಿಯಲಾಗಿದೆ’’ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ರಂಗಕ್ಕಿಳಿದ ಮೋಡರ್ನಾ ಲಸಿಕೆ

ಆ್ಯಸ್ಟ್ರಝೆನೆಕ ಕೊರೋನ ವೈರಸ್ ಲಸಿಕೆಯ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿರುವಂತೆಯೇ, ಬ್ರಿಟನ್ ಬುಧವಾರ ಅಮೆರಿಕದ ಮೋಡರ್ನಾ ಕಂಪೆನಿಯ ಕೋವಿಡ್-19 ಲಸಿಕೆಗೆ ಚಾಲನೆ ನೀಡಿದೆ.

ಇದು ಬ್ರಿಟನ್‌ನ ಮೂರನೇ ಕೋವಿಡ್-19 ಲಸಿಕೆಯಾಗಿದೆ. ಅದು ಈಗಾಗಲೇ ಆ್ಯಸ್ಟ್ರಝೆನೆಕ ಮತ್ತು ಫೈಝರ್ ಕಂಪೆನಿಯ ಲಸಿಕೆಗಳನ್ನು ಬಳಸುತ್ತಿದೆ.

ಮೋಡರ್ನಾ ಲಸಿಕೆಯನ್ನು ಈಗ ಯುರೋಪ್ ಮತ್ತು ಅಮೆರಿಕಗಳಲ್ಲಿ ಬಳಕೆಗೆ ವಿತರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News