ರೈತರಿಗೆ ಡೀಸೆಲ್ ಬಳಿಕ ಈಗ ರಸಗೊಬ್ಬರಗಳ ಬೆಲೆ ಏರಿಕೆಯ ಬಿಸಿ

Update: 2021-04-08 16:24 GMT

ಹೊಸದಿಲ್ಲಿ,ಎ.8: ಪ.ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಮತ್ತು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಮುಂದುವರಿಸಿರುವ ಪ್ರತಿಭಟನೆಗಳ ನಡುವೆಯೇ ದೇಶದ ಬೃಹತ್ ರಸಗೊಬ್ಬರ ಮಾರಾಟ ಸಂಸ್ಥೆಯಾಗಿರುವ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋಆಪರೇಟಿವ್ (ಇಫ್ಕೋ) ತನ್ನ ಉತ್ಪನ್ನಗಳ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸಿದೆ.

ದೇಶದಲ್ಲಿ ಯೂರಿಯಾದ ಬಳಿಕ ಅತ್ಯಂತ ಹೆಚ್ಚು ಬಳಕೆಯಾಗುವ ಡೈ-ಅಮೋನಿಯಂ ಫಾಸ್ಫೇಟ್(ಡಿಎಪಿ)ನ 50 ಕೆ.ಜಿ.ಯ ಚೀಲಕ್ಕೆ ಈಗ ರೈತರು 1,900 ರೂ.ಗಳನ್ನು ಪಾವತಿಸಬೇಕಿದೆ. ಪ್ರತಿ ಚೀಲಕ್ಕೆ 1,200 ರೂ.ಗಳ ಹಾಲಿ ಬೆಲೆಗೆ ಹೋಲಿಸಿದರೆ ಇದು ಶೇ.58ಕ್ಕೂ ಹೆಚ್ಚಿನ ಏರಿಕೆಯಾಗಿದೆ.

ಇಫ್ಕೋ ವಿವಿಧ ಎನ್‌ಕೆಪಿಎಸ್ (ನೈಟ್ರೋಜನ್,ರಂಜಕ,ಪೊಟ್ಯಾಷ್,ಗಂಧಕ) ಅನುಪಾತಗಳ ಇತರ ಜನಪ್ರಿಯ ಸಂಕೀರ್ಣ ರಸಗೊಬ್ಬರಗಳ ಬೆಲೆಗಳನ್ನೂ ಗಣನೀಯವಾಗಿ ಹೆಚ್ಚಿಸಿದೆ. 10:26:26 (ಪ್ರತಿ ಚೀಲಕ್ಕೆ 1,175 ರೂ.ನಿಂದ 1,775 ರೂ.ಗೆ),12:32:16 (1,185 ರೂ.ನಿಂದ 1,800 ರೂ.ಗೆ) ಮತ್ತು 20:20:0:13 (925 ರೂ.ನಿಂದ 1,350 ರೂ.ಗೆ) ಅನುಪಾತಗಳ ರಸಗೊಬ್ಬರಗಳು ಇವುಗಳಲ್ಲಿ ಸೇರಿವೆ. ನೂತನ ಬೆಲೆಗಳು ಎ.1ರಿಂದಲೇ ಜಾರಿಗೊಂಡಿವೆ.

ಯೂರಿಯಾ ಹೊರತುಪಡಿಸಿ ಇತರ ಎಲ್ಲ ರಸಗೊಬ್ಬರಗಳು ಈಗಾಗಲೇ ನಿಯಂತ್ರಣಮುಕ್ತಗೊಂಡಿವೆ. ಇತರ ರಸಗೊಬ್ಬರ ಕಂಪನಿಗಳು ಮಾರ್ಚ್‌ನಲ್ಲಿ ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಇಫ್ಕೋ ತನ್ನ ಬೆಲೆಗಳನ್ನು ಪರಿಷ್ಕರಿಸಿದ್ದು,ಇದಕ್ಕೆ ಮತ್ತು ಯಾವುದೇ ರಾಜಕೀಯ ಪಕ್ಷ ಅಥವಾ ಸರಕಾರಕ್ಕೆ ಸಂಬಂಧವಿಲ್ಲ ಎಂದು ಕಂಪನಿಯ ವಕ್ತಾರರು ತಿಳಿಸಿದರು.

ಕಳೆದ ಐದಾರು ತಿಂಗಳುಗಳಿಂದ ರಸಗೊಬ್ಬರಗಳ ಅಂತರ್ರಾಷ್ಟ್ರೀಯ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿರುವುದು ದೇಶಿಯ ಬೆಲೆಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಅಕ್ಟೋಬರ್‌ನಲ್ಲಿ ಪ್ರತಿ ಟನ್‌ಗೆ 400 ಡಾ.ಗಿಂತ ಕಡಿಮೆಯಿದ್ದ ಡಿಎಪಿಯ ಆಮದು ಬೆಲೆ ಈಗ ಸುಮಾರು 540 ಡಾ.ಗೇರಿದೆ. ಇದೇ ರೀತಿ ಅಮೋನಿಯಾ ಮತ್ತು ಗಂಧಕಗಳಂತಹ ಕಚ್ಚಾ ಸರಕುಗಳ ಬೆಲೆಗಳು ಪ್ರತಿ ಟನ್‌ಗೆ ಅನುಕ್ರಮವಾಗಿ 280 ಡಾ.ನಿಂದ 500 ಡಾ.ಗೆ ಮತ್ತು 85 ಡಾ.ನಿಂದ 220 ಡಾ.ಗೇರಿವೆ. ಯೂರಿಯಾ ಮತ್ತು ಪೊಟ್ಯಾಷ್ ಮ್ಯುರಿಯೇಟ್‌ಗಳೂ ದುಬಾರಿಯಾಗಿದ್ದು,ಪ್ರತಿ ಟನ್‌ಗೆ ಅನುಕ್ರಮವಾಗಿ 275 ಡಾ.ನಿಂದ 380 ಡಾ.ಗೆ ಮತ್ತು 230 ಡಾ.ನಿಂದ 280 ಡಾ.ಗೆ ಏರಿಕೆಯಾಗಿವೆ ಎಂದರು.

ಪೆಟ್ರೋಲ್,ಡೀಲ್ ಮತ್ತು ಎಲ್‌ಪಿಜಿಯ ಬಳಿಕ ಈಗ ರಸಗೊಬ್ಬರಗಳ ಬೆಲೆಗಳಲ್ಲಿಯೂ ಏರಿಕೆಯಾಗಿರುವುದು ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳನ್ನು ಬೀರಬಹುದು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೆಚ್ಚಿನ ಹಂತಗಳು ಇನ್ನಷ್ಟೇ ಪೂರ್ಣಗೊಳ್ಳಬೇಕಿವೆ. ಅತ್ತ ದಿಲ್ಲಿಯ ಸಿಂಘು,ಟಿಕ್ರಿ ಮತ್ತು ಘಾಝಿಪುರ ಗಡಿಗಳಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ರೈತರ ಸಂಖ್ಯೆ ಕಡಿಮೆಯಾಗಿದ್ದರೂ ಗೋಧಿ ಕೊಯ್ಲು ಮತ್ತು ಕಬ್ಬು ಬಿತ್ತನೆಯ ಬಳಿಕ ಪ್ರತಿಭಟನೆಯು ಇನ್ನಷ್ಟು ಕಾವು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಹೆಚ್ಚಿನ ರಸಗೊಬ್ಬರ ಬೆಲೆಗಳು ಬಡ್ಡಿದರವನ್ನು ಕಡಿಮೆ ಮಟ್ಟದಲ್ಲಿ ಕಾಯ್ದುಕೊಳ್ಳುವ ಆರ್‌ಬಿಐನ ಪ್ರಯತ್ನವನ್ನು ಇನ್ನಷ್ಟು ಜಟಿಲಗೊಳಿಸಬಹುದು. ರೈತರಿಗೆ ಇಂಧನ ಮತ್ತು ರಸಗೊಬ್ಬರಗಳ ಹೆಚ್ಚಿನ ವೆಚ್ಚವನ್ನು ಭರಿಸಲು ಜೂನ್‌ನಿಂದ ಆರಂಭಗೊಳ್ಳುವ ಮುಂಗಾರು ಋತುವಿನಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸುವ ಒತ್ತಡಕ್ಕೆ ಮೋದಿ ಸರಕಾರವು ಸಿಲುಕಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News