ಕೇರಳ ಮೀನುಗಾರರ ಹತ್ಯೆ ಪ್ರಕರಣ: 10 ಕೋಟಿ ರೂ. ಪರಿಹಾರ ನೀಡಲು ಇಟಲಿ ಒಪ್ಪಿಗೆ

Update: 2021-04-10 04:04 GMT
ಇಟಲಿ ನೌಕಾಪಡೆ ಯೋಧರ ಫೈಲ್ ಫೋಟೊ (source: PTI)

ಹೊಸದಿಲ್ಲಿ, ಎ.10: ಕೇರಳದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಲ್ಲಿನ ನೌಕಾಪಡೆ ಸಿಬ್ಬಂದಿ ವಿರುದ್ಧದ ಅಪರಾಧ ಪ್ರಕರಣ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಹತ್ಯೆಗೀಡಾದ ಮೀನುಗಾರರ ಕುಟುಂಬಗಳಿಗೆ ಇಟಲಿ ಸರ್ಕಾರದಿಂದ ಒಟ್ಟು 10 ಕೋಟಿ ರೂಪಾಯಿಗಳ ಪರಿಹಾರ ದೊರಕಿಸಿಕೊಡಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

2012ರ ಫೆಬ್ರವರಿಯಲ್ಲಿ ಇಟಲಿ ನೌಕಾಪಡೆ ಯೋಧರಿದ್ದ ಎನ್‌ರಿಕಾ ಲೆಕ್ಸೀ ಹಡಗಿನಿಂದ ಗುಂಡು ಹಾರಿಸಿದಾಗ ಇಬ್ಬರು ಕೇರಳ ಮೀನುಗಾರರು ಮೃತಪಟ್ಟಿದ್ದರು.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಹಾಗೂ ವಿ.ರಾಮಸುಬ್ರಹ್ಮಣ್ಯನ್ ಅವರನ್ನು ಒಳಗೊಂಡ ಪೀಠಕ್ಕೆ ಈ ಬಗ್ಗೆ ಇಟಲಿ ಸರ್ಕಾರದ ಪರ ವಕೀಲ ಸುಹೈಲ್ ದತ್ ಮಾಹಿತಿ ನೀಡಿ, 2020ರ ಮೇ 21ರಂದು ವ್ಯಾಜ್ಯ ನ್ಯಾಯ ಮಂಡಳಿ, ವಿಶ್ವಸಂಸ್ಥೆಯ ಸಮುದ್ರ ಬಗೆಗಿನ ಕಾನೂನು ಒಪ್ಪಂದದ ಅನ್ವಯ ನೀಡಿದ ತೀರ್ಪಿನಂತೆ 10 ಕೋಟಿ ರೂಪಾಯಿ ಪರಿಹಾರವನ್ನು ಇಬ್ಬರು ಮೃತ ಮೀನುಗಾರರ ಕುಟುಂಬಗಳಿಗೆ ಹಾಗೂ ಹಾನಿಗೀಡಾಗಿರುವ ದೋಣಿಯ ಮಾಲಕರಿಗೆ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.

ಸುಪ್ರೀಂಕೋರ್ಟ್ ರಿಜಿಸ್ಟ್ರಿಯಲ್ಲಿ ಹಣವನ್ನು ಠೇವಣಿ ಮಾಡುವವರೆಗೂ ಇಟಲಿಯ ನೌಕಾಪಡೆ ಸಿಬ್ಬಂದಿ ವಿರುದ್ಧದ ವಿಚಾರಣೆ ಕೈಬಿಡಬಾರದು ಎಂದು ಕೇರಳ ಸರ್ಕಾರ ಹಿರಿಯ ವಕೀಲ ಜೈದೀಪ್ ಗುಪ್ತಾ ಮೂಲಕ ಮನವಿ ಮಾಡಿತ್ತು. ಇಟಲಿ ಸರ್ಕಾರದಿಂದ ಈ ಮೊತ್ತವನ್ನು ಪಡೆದು ಒಂದು ವಾರದ ಒಳಗಾಗಿ ಸುಪ್ರೀಂಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಮಾಡುವಂತೆ ನ್ಯಾಯಪೀಠ ಸೂಚಿಸಿತು. ಕೇಂದ್ರಕ್ಕೆ ಹಣ ಬಂದ ಮೂರು ದಿನಗಳ ಒಳಗಾಗಿ ಇದನ್ನು ಪಾವತಿಸುವುದಾಗಿ ಸಾಲಿಸಿಟರ್ ಜನರಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News