ತ್ರಿಪುರ ಬುಡಕಟ್ಟು ಮಂಡಳಿ ಚುನಾವಣೆ: ಬಿಜೆಪಿ,ಮೈತ್ರಿಪಕ್ಷ ಐಪಿಎಫ್ ಟಿಗೆ ಆಘಾತಕಾರಿ ಸೋಲು

Update: 2021-04-10 12:32 GMT
ಪ್ರದ್ಯೋತ್ ಮಾಣಿಕ್ಯ ದೇಬ್ ಬರ್ಮನ್ 

ಅಗರ್ತಲ: ತ್ರಿಪುರದಲ್ಲಿ ಬುಡಕಟ್ಟು ಮಂಡಳಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಶನಿವಾರ ಭಾರೀ ಸೋಲು ಕಂಡಿದೆ, ಈ ರಾಜ್ಯದಲ್ಲಿ ಬಿಜೆಪಿ ಪಕ್ಷವು ಐಪಿಎಫ್‌ಟಿ (ಇಂಡೀಜನಸ್ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ) ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

ನಿರ್ಣಾಯಕ ತ್ರಿಪುರ ಸ್ವಾಯತ್ತ ಜಿಲ್ಲಾ ಮಂಡಳಿ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ 18 ಸ್ಥಾನಗಳನ್ನು  ಹೊಸ ಸಂಘಟನೆ ಟಿಪ್ರಾ (ಸ್ಥಳೀಯ ಪ್ರಗತಿಶೀಲ ಪ್ರಾದೇಶಿಕ ಒಕ್ಕೂಟ)ಗೆದ್ದುಕೊಂಡಿದೆ. ಬಿಜೆಪಿ ಹಾಗೂ  ಅದರ ಮಿತ್ರ ಪಕ್ಷ ಕೇವಲ ಒಂಭತ್ತು ಸ್ಥಾನಗಳನ್ನು ಗೆದ್ದಿದ್ದು, ಇನ್ನೊಂದು ಸ್ಥಾನ ಸ್ವತಂತ್ರ ಅಭ್ಯರ್ಥಿಯ ಪಾಲಾಗಿದೆ. ಹಿಂದಿನ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಎಡರಂಗ ಹಾಗೂ ಕಾಂಗ್ರೆಸ್ ಪಕ್ಷಗಳು ಯಾವುದೇ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿವೆ.

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗಳನ್ನು ಪಕ್ಷ ನಿರ್ವಹಿಸಿರುವ ವಿಚಾರದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದಾಗಿ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ತ್ರಿಪುರ ರಾಜ ಕುಟುಂಬದ ಪ್ರದ್ಯೋತ್ ಮಾಣಿಕ್ಯ ದೇಬ್ ಬರ್ಮನ್ ಅವರು ಟಿಪ್ರಾ ಸಂಘಟನೆಯ ನೇತೃತ್ವ ವಹಿಸಿದ್ದಾರೆ.

ಪರಿಷತ್ತು 30 ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ 28 ಸ್ಥಾನಗಳನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಎರಡು ಸ್ಥಾನವನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡುತ್ತಾರೆ. ಈ 30 ಸ್ಥಾನಗಳು 20 ವಿಧಾನಸಭಾ ಕ್ಷೇತ್ರಗಳಲ್ಲಿ ಹರಡಿವೆ. ಮೇ 2015 ರಲ್ಲಿ ನಡೆದ ಕೊನೆಯ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಡರಂಗವು 25 ಸ್ಥಾನಗಳನ್ನು ಗೆದ್ದಿತ್ತು.

ಎಪ್ರಿಲ್ 6 ರಂದು ಚುನಾವಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News