"ಬೇರೆ ದೇಶಗಳಿಗೆ ಕೋವಿಡ್ ಲಸಿಕೆ ರಫ್ತು ಮಾಡಿದ ಮೋದಿ ಸರಕಾರವೇ ದೇಶದಲ್ಲಿನ ಲಸಿಕೆ ಕೊರತೆಗೆ ಕಾರಣ"

Update: 2021-04-10 12:55 GMT

ಹೊಸದಿಲ್ಲಿ: ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಿ ಅಲ್ಲಿನ ಆಡಳಿತಗಳು ಈ ಸಮಸ್ಯೆಯನ್ನು ಹೇಗೆ ನಿರ್ವಹಿಸುತ್ತಿವೆ ಎಂಬುದನ್ನು ಅವಲೋಕಿಸಲು ಇಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವರ್ಚುವಲ್ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು.

ಟೆಸ್ಟ್, ಟ್ರ್ಯಾಕ್, ವ್ಯಾಕ್ಸಿನೇಟ್ ಆದ್ಯತೆಯ ವಿಚಾರವಾಗಿರಬೇಕು ಎಂದು ಹೇಳಿದ ಸೋನಿಯಾ "ಸರಕಾರಗಳು ಪಾರದರ್ಶಕತೆ ಕಾಪಾಡಬೇಕು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿರಲಿ, ಇತರ ರಾಜ್ಯಗಳಿರಲಿ ಕೋವಿಡ್ ಪ್ರಕರಣಗಳು ಹಾಗೂ ಸಾವುಗಳ ನಿಖರ ಅಂಕಿಅಂಶಗಳನ್ನು ಬಿಡುಗಡೆ ಮಾಡಬೇಕು" ಎಂದು ತಿಳಿಸಿದರು.

"ಮೋದಿ ಸರಕಾರ ಪರಿಸ್ಥಿತಿಯನ್ನು ಕೆಟ್ಟದ್ದಾಗಿ ನಿರ್ವಹಿಸಿದೆ, ಕೋವಿಡ್ ಲಸಿಕೆ ರಫ್ತುಗೊಳಿಸಿ ಈಗ ದೇಶದಲ್ಲಿ ಕೋವಿಡ್ ಲಸಿಕೆ ಕೊರತೆ ಎದುರಾಗುವಂತೆ ಮಾಡಿದೆ" ಎಂದು ಸೋನಿಯಾ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

"ಚುನಾವಣಾ ರ್ಯಾಲಿಗಳಲ್ಲಿ ದೊಡ್ಡ ಸಂಖ್ಯೆಯ ಜನರು ಸೇರುವುದು ಹಾಗೂ ಧಾರ್ಮಿಕ ಸಮಾರಂಭಗಳು ಕೋವಿಡ್ ಪರಿಸ್ಥಿತಿಯನ್ನು ಬಿಗಡಾಯಿಸಿದೆ, ನಾವೆಲ್ಲರೂ ಇದಕ್ಕೆ ಸ್ವಲ್ಪ ಮಟ್ಟಿಗೆ ಜವಾಬ್ದಾರರು. ನಾವು ಇದನ್ನು ಒಪ್ಪಬೇಕು ಹಾಗೂ ನಮ್ಮ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿಗೆ ಹೆಚ್ಚು ಗಮನ ನೀಡಬೇಕು" ಎಂದು ಸೋನಿಯಾ ಹೇಳಿದರು.

ಕೋವಿಡ್ ಲಸಿಕೆ ರಫ್ತು ಸ್ಥಗಿತಗೊಳಿಸಿ, ಇತರ ಲಸಿಕೆಗಳಿಗೆ ತ್ವರಿತ ಅನುಮೋದನೆ ನೀಡಿ, ದೇಶದ ಸರ್ವ ನಾಗರಿಕರಿಗೂ ಲಸಿಕೆ ಒದಗಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿಗೆ ಪತ್ರ ಬರೆದ ಮರುದಿನ ಈ ವರ್ಚುವಲ್ ಸಭೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News