ಬೆಂಗಳೂರು: ಇನ್ನು ಮುಂದೆ ನಿಮ್ಮ ವಾಹನಗಳಲ್ಲಿ ಮಿರರ್, ಇಂಡಿಕೇಟರ್ ಕಡ್ಡಾಯ

Update: 2021-04-10 13:24 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.10: ದ್ವಿಚಕ್ರ ವಾಹನಗಳ ಎರಡು ಬದಿಗಳಲ್ಲಿ ಕನ್ನಡಿ ಮತ್ತು ಇಂಡಿಕೇಟರ್ ಗಳು ಇಲ್ಲದಿದ್ದರೆ 500 ರೂ. ದಂಡ ವಿಧಿಸಲು ಸಂಚಾರ ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ದಿನೇ ದಿನೇ ನಗರ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಈ ಅಪಘಾತಗಳ ಬಗ್ಗೆ ಅಧ್ಯಯನ ನಡೆಸಿದಾಗ ದ್ವಿಚಕ್ರ ವಾಹನ ಸವಾರರು ಕನ್ನಡಿ, ಇಂಡಿಕೇಟರ್ ಗಳನ್ನು ಬಳಸದೆ ಅಡ್ಡಾದಿಡ್ಡಿ ಚಲಾಯಿಸುತ್ತಿದ್ದಾರೆ. ಇದರಿಂದ ಬೇರೆ ವಾಹನಗಳಿಗೆ ಢಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿರುವ ಅಂಶ ಗೊತ್ತಾಗಿದೆ. ಅಷ್ಟೇ ಅಲ್ಲದೆ, ಬೈಕ್ ಚಾಲನೆ ವೇಳೆ ಎಡ ಅಥವಾ ಬಲಗಡೆ ತಿರುವು ಪಡೆಯಲು ಹಿಂದೆ ತಲೆ ತಿರುಗಿಸಿ ನೋಡುವುದು ಅಥವಾ ನೋಡದೆ ಏಕಾಏಕಿ ತಿರುವು ಪಡೆಯುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

ಇಂಡಿಕೇಟರ್ ಬಳಸದೆ ಏಕಾಏಕಿ ತಿರುವು ಪಡೆದಾಗ ಹಿಂಬದಿಯಲ್ಲಿ ಬರುತ್ತಿರುವ ವಾಹನಗಳು ದಿಕ್ಕು ತೋಚದೆ ಮುಂದಿನ ವಾಹನಕ್ಕೆ ಗುದ್ದಿ ಪ್ರಾಣಹಾನಿ ಉಂಟಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ದ್ವಿಚಕ್ರ ವಾಹನಗಳಿಗೆ ಕನ್ನಡಿ(ಸೈಡ್ ಮಿರರ್) ಮತ್ತು ಇಂಡಿಕೇಟರ್ ಕಡ್ಡಾಯಗೊಳಿಸಿದ್ದು, ಇವುಗಳನ್ನು ಹೊಂದಿರದ ವಾಹನಗಳ ಸವಾರರಿಗೆ ದಂಡ ವಿಧಿಸುವುದಾಗಿ ಸಂಚಾರ ಜಂಟಿ ಪೊಲೀಸ್ ಆಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News