ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೊಡಗಿನ ಯುವ ಕ್ರೀಡಾಪಟು ಆಯ್ಕೆ

Update: 2021-04-10 15:02 GMT

ಮಡಿಕೇರಿ, ಎ.10: ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೊಡಗಿನ ಯುವ ಕ್ರೀಡಾಪಟುವೊಬ್ಬರು ಆಯ್ಕೆಯಾಗುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಕೊಡಗಿನಿಂದ ಮತ್ತೊಂದು ಗರಿ ಮೂಡಿಸಿದ್ದಾರೆ.

ಮುಂದಿನ ಜೂನ್‍ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಸಾಹಸಮಯವಾದ ಸೈಲಿಂಗ್ ಎಂಬ ಕ್ರೀಡೆಯಲ್ಲಿ ಕೊಡಗಿನ ಕೇಳಪಂಡ ಗಣಪತಿ ಅವರು ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದುವರೆಗೆ ಕೊಡಗು ಮೂಲದ ಒಟ್ಟು 18 ಮಂದಿ ಭಾರತವನ್ನು ಪ್ರತಿನಿಧಿಸಿದ್ದು, ಇದೀಗ ಸೈಲಿಂಗ್ ಎಂಬ ಸಾಹಸಮಯವಾದ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಗಣಪತಿ ಅವರು ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಕೊಡಗಿನ 19ನೆ ಕ್ರೀಡಾಪಟುವಾಗಲಿದ್ದಾರೆ. ಮುಂಬರುವ ಜೂನ್‍ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಭಾರತದ ಪ್ರತಿಭಾವಂತ ಸೈಲಿಂಗ್ ಪಟು(ನಾವಿಕ)ವಾದ ಗಣಪತಿ ತಮ್ಮ ಜೋಡಿ ವರುಣ್ ಠಕ್ಕರ್ ಅವರೊಂದಿಗೆ ಡಬಲ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.

ಗುರುವಾರ ಓಮನ್‍ನಲ್ಲಿ ನಡೆದ ಏಷ್ಯಾ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಗಣಪತಿ ಹಾಗೂ ವರುಣ್ ಜೋಡಿ ಅರ್ಹತೆ ಪಡೆದುಕೊಂಡಿದ್ದು, ಇದರೊಂದಿಗೆ ಭಾರತದ ನಾಲ್ವರು ನಾವಿಕರು ಟೋಕಿಯೋ ಒಲಂಪಿಕ್ಸ್ ಗೆ ಅರ್ಹತೆ ಗಳಿಸಿಕೊಂಡಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಇದುವರೆಗೆ ಒಟ್ಟು ಏಳು ಮಾದರಿಯ ವಿವಿಧ ಕ್ರೀಡೆಗಳಲ್ಲಿ ಕೊಡಗಿನ 18 ಒಲಿಂಪಿಯನ್‍ ಗಳಿದ್ದಾರೆ. ಹಾಕಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಟೆನ್ನಿಸ್, ಸ್ಕ್ವಾಶ್, ಬ್ಯಾಡ್‍ಮಿಂಟನ್‍ನಲ್ಲಿ ಈ ತನಕ ಕೊಡಗಿನ ಕ್ರೀಡಾಪಟುಗಳು ಸಾಧನೆ ತೋರಿದ್ದು, ಇದೀಗ ಈ ಸಾಲಿಗೆ ಸೈಲಿಂಗ್ ಕೂಡಾ ಸೇರ್ಪಡೆಯಾಗಿದ್ದು, ಇದರಲ್ಲಿ ಕೇಳಪಂಡ ಗಣಪತಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಕೇಳಪಂಡ ಗಣಪತಿ ಅವರು ಮೂಲತಃ ಕೊಡಗಿನ ಗೋಣಿಕೊಪ್ಪ ಸಮೀಪದ ಹಾತೂರು ಗ್ರಾಮದ ಕೇಳಪಂಡ ಚಂಗಪ್ಪ ಅವರ ಪುತ್ರರಾಗಿದ್ದು, 2018ರಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗಳಿಸಿದವರಾಗಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಕೊಡಗಿನವರು
ಈ ಹಿಂದೆ ಹಾಕಿಯಲ್ಲಿ ಕೊಡಗಿನ ಡಾ. ಮೊಳ್ಳೆರ ಪಿ. ಗಣೇಶ್, ಮನೆಯಪಂಡ ಎಂ. ಸೋಮಯ್ಯ, ಬಾಳೆಯಡ ಕೆ. ಸುಬ್ರಮಣಿ, ಬಿ.ಪಿ. ಗೋವಿಂದ, ಚೆಪ್ಪುಡಿರ ಎಸ್. ಪೂಣಚ್ಚ, ಡಾ.ಅಂಜಪರವಂಡ ಬಿ. ಸುಬ್ಬಯ್ಯ, ಅರ್ಜುನ್ ಹಾಲಪ್ಪ, ಒಕ್ಕಲಿಗರ ಆರ್. ರಘುನಾಥ್, ಎಸ್.ವಿ. ಸುನಿಲ್, ಸಣ್ಣುವಂಡ ಕೆ. ಉತ್ತಪ್ಪ ಹಾಗೂ ಚೇಂದಂಡ ನಿಕಿನ್ ತಿಮ್ಮಯ್ಯ ಸೇರಿದಂತೆ 11 ಮಂದಿ ಒಲಿಂಪಿಯನ್‍ಗಳಿದ್ದಾರೆ. ಇವರಲ್ಲದೆ, ಅಥ್ಲೆಟಿಕ್ಸ್ ನಲ್ಲಿ  ಅಶ್ವಿನಿ ನಾಚಪ್ಪ, ಮಾಚೆಟ್ಟಿರ ಆರ್. ಪೂವಮ್ಮ, ಗುಡ್ಡಂಡ ಜಿ. ಪ್ರಮೀಳಾ, ಸ್ಕ್ವಾಶ್‍ನಲ್ಲಿ  ಕುಟ್ಟಂಡ ಜ್ಯೋತ್ಸ್ನಾ ಚಿಣ್ಣಪ್ಪ, ಬಾಕ್ಸಿಂಗ್‍ನಲ್ಲಿ ಚೇನಂಡ ಸಿ. ಮಾಚಯ್ಯ, ಟೆನ್ನಿಸ್‍ನಲ್ಲಿ ಮಚ್ಚಂಡ ರೋಹನ್ ಬೋಪಣ್ಣ ಹಾಗೂ ಬ್ಯಾಡ್‍ಮಿಂಟನ್‍ನಲ್ಲಿ ಮಾಚಿಮಂಡ ಅಶ್ವಿನಿ ಪೊನ್ನಪ್ಪ ಅವರು ಒಲಿಂಪಿಯನ್‍ಗಳಾಗಿದ್ದಾರೆ. ಇವರುಗಳ ಪೈಕಿ 1980ರ ಮಾಸ್ಕೋ ಒಲಿಂಪಿಕ್ಸ್ ನಲ್ಲಿ ಎಂ.ಎ.ಸೋಮಯ್ಯ ಚಿನ್ನದ ಪದಕ ಹಾಗೂ 1972ರ ನ್ಯೂನಿಚ್ ಒಲಿಂಪಿಕ್ಸ್ ನಲ್ಲಿ ಮೊಳ್ಳೆರ ಪಿ. ಗಣೇಶ್ ಅವರು ಕಂಚಿನ ಪದಕ ಗಳಿಸಿದ ಹೆಗ್ಗಳಿಕೆ ಪಡೆದಿದ್ದಾರೆ.  

''ಪುಟ್ಟ ಜಿಲ್ಲೆಯಾದ ಕೊಡಗು 19 ಒಲಿಂಪಿಯನ್‍ಗಳನ್ನು ದೇಶಕ್ಕೆ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಅದರಲ್ಲೂ 19 ಮಂದಿಯ ಪೈಕಿ ಅತ್ಯಲ್ಪ ಜನಸಂಖ್ಯೆ ಹೊಂದಿರುವ ಕೊಡವ ಜನಾಂಗದ ಒಟ್ಟು 15 ಮಂದಿ ಈ ಸಾಧನೆ ಮಾಡಿರುವುದು ಈ ಜನಾಂಗಕ್ಕೂ ಕೂಡ ಭಾರೀ ಹೆಮ್ಮೆಯ ವಿಷಯವಾಗಿದೆ. ಈ ರೀತಿಯ ಸಾಧನೆ ದೇಶದಲ್ಲೇ ಅಪರೂಪದ್ದು'' ಎಂದು ಹಾಕಿಪಟು ಹಾಗೂ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News