ಕೊರೋನ ಲಸಿಕೆ ವ್ಯರ್ಥ ಪ್ರಮಾಣ ಹೆಚ್ಚಳ: ಕೇಂದ್ರ ಸರಕಾರ

Update: 2021-04-10 17:31 GMT

ಹೊಸದಿಲ್ಲಿ, ಎ.10: ದೇಶದಲ್ಲಿ ಪ್ರತೀ ದಿನ ಸರಾಸರಿ 34,30,502 ಡೋಸ್ ಕೊರೋನ ಸೋಂಕಿನ ವಿರುದ್ಧದ ಲಸಿಕೆ ನೀಡಲಾಗುತ್ತಿದ್ದು ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ಆದರೆ ಲಸಿಕೆ ವ್ಯರ್ಥವಾಗುವ ಪ್ರಮಾಣವೂ ಹೆಚ್ಚಿರುವುದು ಕಳವಳದ ವಿಷಯವಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

 ಲಸಿಕೆಯ ಕೊರತೆಯಿದೆ ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರ ಸರಕಾರ 5 ಲಕ್ಷ ಡೋಸ್ ಲಸಿಕೆಯನ್ನು ವ್ಯರ್ಥಗೊಳಿಸಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಅತ್ಯಂತ ಹೆಚ್ಚು ಲಸಿಕೆ ವ್ಯರ್ಥವಾಗಿರುವ ರಾಜ್ಯಗಳಲ್ಲಿ ತಮಿಳುನಾಡು(12.4%), ಹರ್ಯಾನ(10%) ಮತ್ತು ಬಿಹಾರ(8.1%) ಅಗ್ರ 3 ಸ್ಥಾನದಲ್ಲಿವೆ. ಪಂಜಾಬ್ (8%), ಆಂಧ್ರಪ್ರದೇಶ(7.3%), ಅಸ್ಸಾಂ(7.3%) ಮಣಿಪುರ(7.2%) ಮತ್ತು ದಿಲ್ಲಿ(7%) ಆ ಬಳಿಕದ ಸ್ಥಾನದಲ್ಲಿವೆ.

ಆದರೆ ಗೋವಾ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಮಿಝೊರಾಂನಲ್ಲಿ ಲಸಿಕೆ ವ್ಯರ್ಥ ಪ್ರಮಾಣ ಶೂನ್ಯವಾಗಿದೆ. ಮಹಾರಾಷ್ಟ್ರಕ್ಕೆ ಪೂರೈಸಿರುವ ಒಟ್ಟು ಲಸಿಕೆಯಲ್ಲಿ 1.9% ಡೋಸ್ ಲಸಿಕೆ ವ್ಯರ್ಥವಾಗಿದೆ.ರಾಜ್ಯದಲ್ಲಿ 11,078,500 ಜನರಿಗೆ ಲಸಿಕೆ ನೀಡಲಾಗಿದೆ. ‘ಲಸಿಕೆ ವ್ಯರ್ಥವಾಗುತ್ತಿರುವುದು ಅತ್ಯಂತ ಕಳವಳದ ವಿಷಯವಾಗಿದೆ . ಇದನ್ನು ತಪ್ಪಿಸಲು ಸಣ್ಣ ಲಸಿಕಾ ಕೇಂದ್ರಗಳನ್ನು ಕ್ರೋಢೀಕರಿಸಿ ದೊಡ್ಡ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಲಸಿಕೆಯನ್ನು ಯಾರು ಅಪೇಕ್ಷಿಸುತ್ತಾರೋ ಅವರಿಗೆ ನೀಡುವುದಲ್ಲ, ಯಾರಿಗೆ ಅಗತ್ಯವಿದೆಯೋ ಅವರಿಗೆ ನೀಡಬೇಕು. ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಹೊಣೆಯನ್ನು ರಾಜ್ಯ ಸರಕಾರ ಮತ್ತು ಸ್ಥಳೀಯ ಆಡಳಿತಕ್ಕೆ ವಹಿಸಬೇಕು’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ ರಾಮ್‌ಸೇವಕ್ ಶರ್ಮ ಸಲಹೆ ನೀಡಿದ್ದಾರೆ.

 ಕೊರೋನ ಸೋಂಕಿನ ವಿರುದ್ಧದ ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ. ಅದೃಷ್ಟವಶಾತ್ ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನೆಯಾಗುತ್ತಿದೆ. ಆದರೆ ಇದರರ್ಥ ನಾವು ಲಸಿಕೆಯನ್ನು ವ್ಯರ್ಥಮಾಡಬಹುದು ಎಂದಲ್ಲ. ಲಸಿಕೆ ವ್ಯರ್ಥವಾಗದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬಹುದು. ಲಸಿಕೆ ಪಡೆಯಲು ಹೆಸರು ನೋಂದಾಯಿಸಿದವರು ನಿಗದಿತ ದಿನದಂದು ಲಸಿಕಾ ಕೇಂದ್ರಗಳಿಗೆ ತೆರಳದಿದ್ದರೆ ಲಸಿಕೆ ವ್ಯರ್ಥವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಬಹುದು ಎಂದು ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News