ಕೊರೋನಕ್ಕೆ ಸವಾಲು ಹಾಕುತ್ತಿರುವ ಹಸಿವು

Update: 2021-04-12 08:39 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದೆಡೆ ಮೋದಿಯ ಅಲೆ-ಇನ್ನೊಂದೆಡೆ ಕೊರೋನ ಅಲೆ. ಜನಸಾಮಾನ್ಯರು ಎರಡೆರಡು ಅಲೆಗಳ ಜೊತೆಗೆ ಸೆಣಸಾಡಬೇಕಾಗಿದೆ. ಮಾತೆತ್ತಿದರೆ ‘ಲಾಕ್‌ಡೌನ್’ ಎನ್ನುವ ಕೊಡುಗೆಯನ್ನು ಜನರಿಗೆ ನೀಡಲು ಅತ್ಯಾಸಕ್ತರಾಗಿರುವ ಪ್ರಧಾನಿಯ ವಿರುದ್ಧ ಜನಸಾಮಾನ್ಯರಿಗೆ ಮಾತನಾಡುವ ಸ್ಥೈರ್ಯವೂ ಇಲ್ಲವಾಗಿದೆ. ಒಂದು ವೇಳೆ ಮಾತನಾಡಿದರೆ ‘ಮೋದಿ ಅಲೆ’ಯ ಭಯ. ದೇಶದ್ರೋಹಿಗಳಾಗುವ ಆತಂಕ. ಜನಸಾಮಾನ್ಯರು ಆಹಾರಕ್ಕಾಗಿ ಹಾಹಾಕಾರ ಮಾಡುತ್ತಿದ್ದರೆ ಪ್ರಧಾನಿಯವರಿಗೆ ಅದು ‘ಲಸಿಕೆಗಾಗಿ ಮಾಡುವ ಹಾಹಾಕಾರ’ದಂತೆ ಕೇಳಿಸುತ್ತದೆ. ಕೊರೋನ ಮಾಧ್ಯಮಗಳ ಮೂಲಕ ಇಷ್ಟು ತೀವ್ರವಾಗಿ ಹರಡುತ್ತಿದ್ದರೂ, ಜನರಲ್ಲಿ ಲಸಿಕೆ ಹಾಕಿಸಿಕೊಳ್ಳುವ ಕುರಿತಂತೆ ಯಾವ ಆಸಕ್ತಿಯೂ ಇಲ್ಲ. ಅವರಿಗೆ ಕೊರೋನ ಚಿಂತೆಗಿಂತ ದಿನದ ಬದುಕು ಸಾಗಿಸುವುದೇ ಅತಿ ಮುಖ್ಯವಾಗಿದೆ.

ಇದೀಗ ಮತ್ತೆ ಅಲ್ಲಲ್ಲಿ ಹೇರುತ್ತಿರುವ ಕರ್ಫ್ಯೂ, ಲಾಕ್‌ಡೌನ್ ಜನರ ಹಸಿವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಯಾವ ರೀತಿಯಲ್ಲೂ ಜನರು ನೆಮ್ಮದಿಯಿಂದ ಬದುಕು ನಡೆಸಲೇಬಾರದು ಎಂದು ಸರಕಾರ ಹಟ ತೊಟ್ಟಂತಿದೆ. ಜನರ ಹಸಿವು ಈ ದೇಶದ ಅಪೌಷ್ಟಿಕತೆ ಸಮಸ್ಯೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಿದೆ ಮತ್ತು ಈ ಅಪೌಷ್ಟಿಕತೆ ಜನರನ್ನು ಕ್ಷಯದಂತಹ ಮಾರಕ ರೋಗಗಳಿಗೆ ಈಡು ಮಾಡಲಿದೆ. ಭವಿಷ್ಯದ ಅತಿ ದೊಡ್ಡ ಸಮಸ್ಯೆಯಾಗಿ ಅಪೌಷ್ಟಿಕತೆ ಭಾರತವನ್ನು ಕಾಡಲಿದೆ. ಭಾರತದಲ್ಲಿ ಅಪೌಷ್ಟಿಕತೆಯ ಸಮಸ್ಯೆಯು ಸಾಮಾಜಿಕ,ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ತರದಲ್ಲಿ ಹಾಸುಹೊಕ್ಕಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)-4ರ ಪ್ರಕಾರ ದೇಶದಲ್ಲಿ ಸರಾಸರಿ ಐದು ವರ್ಷಗಳಿಗಿಂತ ಕೆಳವಯಸ್ಸಿನ ಶೇ.38.4 ಮಂದಿ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾದ ದೈಹಿಕ ಎತ್ತರವನ್ನು ಹೊಂದಿಲ್ಲ. ಇನ್ನು ಶೇ.21ರಷ್ಟು ಮಂದಿ ಮಕ್ಕಳಿಗೆ ಎತ್ತರಕ್ಕೆ ಅನುಗುಣವಾದ ದೇಹತೂಕವಿರುವುದಿಲ್ಲ. ಶೇ.35.8 ಮಂದಿ ಮಕ್ಕಳು ಕಡಿಮೆ ದೇಹತೂಕವುಳ್ಳವರಾಗಿದ್ದಾರೆ ಹಾಗೂ ಶೇ.58.6 ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಸರಕಾರದ ವಿವಿಧ ಯೋಜಿತ ಸೇವಾ ಹಾಗೂ ಕಲ್ಯಾಣ ಯೋಜನೆಗಳ ಅನುಷ್ಠಾನದ ಹೊರತಾಗಿಯೂ ದೇಶದಲ್ಲಿ ಅಪೌಷ್ಟಿಕತೆ 2019ರಲ್ಲಿ ಇನ್ನಷ್ಟು ಹದಗೆಟ್ಟಿತು. 2019ರಲ್ಲಿ ಆಯೋಜಿಸಲಾದ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಪಾಲ್ಗೊಂಡ 22 ರಾಜ್ಯಗಳು ಮತ್ತು ಕೇಂದ್ರಾಡಳಿತಗಳ ಪೈಕಿ 13 ರಾಜ್ಯಗಳಲ್ಲಿ ದೈಹಿಕ ಬೆಳವಣಿಗೆ ಕುಂಠಿತಗೊಂಡಿರುವ ಮಕ್ಕಳ ಸಂಖ್ಯೆಯಲ್ಲಿ ಹಾಗೂ 12 ರಾಜ್ಯಗಳಲ್ಲಿ ಕೃಶದೇಹದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಕಳವಳಕಾರಿ ಪರಿಸ್ಥಿತಿಯು ಕೋವಿಡ್-19 ಹಾವಳಿಯ ಬಳಿಕ ಇನ್ನಷ್ಟು ಉಲ್ಬಣಗೊಂಡಿದ್ದು, ಭಾರೀ ಸಂಖ್ಯೆಯ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುವ ಆತಂಕ ಎದುರಾಗಿದೆ.

ನೂತನ ರಾಷ್ಟ್ರೀಯ ಪೌಷ್ಟಿಕತಾ ಕಾರ್ಯಕ್ರಮಕ್ಕಾಗಿ 20,105 ಕೋಟಿ ರೂ. ಅನುದಾನದ ಬಿಡುಗಡೆಯೊಂದಿಗೆ ಕೇಂದ್ರ ಸರಕಾರವು ಪೌಷ್ಟಿಕತೆಯ ಸಮಸ್ಯೆಯನ್ನು ನಿಭಾಯಿಸಲು ಅಲ್ಪಸ್ವಲ್ಪ ಆಸಕ್ತಿಯನ್ನು ಪ್ರದರ್ಶಿಸಿದೆ. ಆದರೆ ಇದೇ ಸಂದರ್ಭದಲ್ಲಿ ಲಾಕ್‌ಡೌನ್ ಮೂಲಕ ಸರಕಾರ ಅಪೌಷ್ಟಿಕತೆಯನ್ನು ದುಪ್ಪಟ್ಟುಗೊಳಿಸುವ ಯೋಜನೆಯನ್ನೂ ಹಾಕಿಕೊಂಡಿದೆ. 2030ರೊಳಗೆ 5 ವರ್ಷದೊಳಗಿನ ಶಿಶುಗಳ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸುವ ಸುಸ್ಥಿರವಾದ ಗುರಿಯನ್ನು ಸಾಧಿಸಲು ಭಾರತವು ತನ್ನ ಕಾರ್ಯತಂತ್ರವನ್ನು ಪುನರ್‌ರೂಪಿಸುವ ಅಗತ್ಯವಿದೆ ಹಾಗೂ ತೀವ್ರತರದ ಅಪೌಷ್ಟಿಕತೆಯ ಸಮಸ್ಯೆ ವಿರುದ್ಧ ಹೋರಾಡಲು ನೂತನ ಕಾರ್ಯವಿಧಾನಗಳ ಅಗತ್ಯವಿದೆ.2015ರಲ್ಲಿ ಒಡಿಶಾ ಸರಕಾರವು 5 ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳ ಸಾವಿನಪ್ರಮಾಣವು ಅತ್ಯಧಿಕವಾಗಿರುವ ಬುಡಕಟ್ಟು ಪ್ರಾಬಲ್ಯದ ಕಂಧಮಾಲ್ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯ ಸಾಮುದಾಯಿಕ ನಿರ್ವಹಣೆ (ಸಿಎಂಎಎಂ) ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯಡಿ ಬುಡಕಟ್ಟು ಸಮುದಾಯದ ವಸತಿಸ್ಥಳಗಳಿಗೆ ಅತ್ಯಂತ ಹತ್ತಿರದಲ್ಲಿರುವ ಸ್ಥಳಗಳಲ್ಲಿ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ, ಪೌಷ್ಠಿಕ ಆಹಾರ ಪೂರೈಕೆ , ಬಿಸಿಯೂಟ ಹಾಗೂ ಪಡಿತರ ವಿತರಣೆಯಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು.

ಈ ಯೋಜಿತ ಕಾರ್ಯಕ್ರಮವು ಚಿಕಿತ್ಸೆಯ ಬಳಿಕ ಮಕ್ಕಳು ಯೋಗ್ಯವಾದ ದೇಹತೂಕವನ್ನು ಪಡೆಯುವಂತೆ ಮಾಡುವಲ್ಲಿ ಹಾಗೂ ಕಂಧಮಾಲ್ ಜಿಲ್ಲೆಯ ಮಕ್ಕಳ ಪೌಷ್ಟಿಕತೆಯ ಸ್ಥಿತಿಗತಿಯಲ್ಲಿ ಸುಧಾರಣೆಯಾಗಲು ಕಾರಣವಾಯಿತು. ವಿಪತ್ತು ನಿರ್ವಹಣೆ, ಅರಣ್ಯ ನಿರ್ವಹಣೆ ಹಾಗೂ ತಾಜ್ಯ ನಿರ್ವಹಣೆ ಸೇರಿದಂತೆ ಹಲವಾರು ಸಾಮುದಾಯಿಕ ನೇತೃತ್ವದ ಪ್ರಾಯೋಗಿಕ ಕಲ್ಯಾಣ ಕಾರ್ಯಕ್ರಮದಲ್ಲಿ ಒಡಿಶಾ ಸಾಧಿಸಿರುವ ಯಶಸ್ಸು ದಂತಕತೆಯಾಗಿ ಬಿಟ್ಟಿದೆ. ಈ ನಿಟ್ಟಿನಲ್ಲಿ ಒಡಿಶಾಗೆ ಪ್ರಬಲ ಸ್ಪರ್ಧೆ ನೀಡುತ್ತಿರುವ ಏಕೈಕ ರಾಜ್ಯವೆಂದರೆ ಕೇರಳ.

ಸದ್ಯದಲ್ಲಿ ಕೊರೋನ ಮತ್ತು ಲಾಕ್‌ಡೌನ್ ಅಪೌಷ್ಟಿಕತೆಗೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ತಲೆಕೆಳಗು ಮಾಡಿ ಬಿಟ್ಟಿದೆ. ಶಾಲೆಯೇ ತೆರೆಯುತ್ತಿಲ್ಲವಾದುದರಿಂದ, ಬಿಸಿಯೂಟದ ಒಲೆಯೂ ಉರಿಯುತ್ತಿಲ್ಲ. ಇದೇ ಸಂದರ್ಭದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲೂ ಅಸ್ತವ್ಯಸ್ತವಾಗಿದೆ. ಬಡತನದ ವೇಗ ಹೆಚ್ಚುತ್ತಿದೆ. ಸರಕಾರದ ಯೋಜನೆಗಳ ವೇಗ ಇಳಿಯುತ್ತಿದೆ. ಆರ್ಥಿಕವಾಗಿ ಹದಗೆಟ್ಟು ಕೂತಿರುವ ಸರಕಾರ ಎಲ್ಲವನ್ನೂ ಖಾಸಗಿಗೆ ವಹಿಸಿ ‘ಉದ್ಯಮ ನಡೆಸುವುದು ನನ್ನ ಕೆಲಸವಲ್ಲ’ ಎಂದು ಕೈತೊಳೆದುಕೊಳ್ಳಲು ಹೊರಟಿದೆ. ಖಾಸಗೀಕರಣದ ಅಂತಿಮ ಪರಿಣಾಮವೆಂದರೆ, ಈ ದೇಶದಲ್ಲಿ ಉಳ್ಳವರು ಇನ್ನಷ್ಟು ಶ್ರೀಮಂತರಾಗಿ ಬಡವರು ಇನ್ನಷ್ಟು ಬಡವರಾಗುವುದು. ಕೊರೋನವನ್ನು ಶಾಶ್ವತವಾಗಿ ಓಡಿಸುವುದು ಸಾಧ್ಯವಿಲ್ಲ. ಕೊರೋನದ ಜೊತೆಗೇ ಬದುಕುವುದು ನಮಗೆ ಸಾಧ್ಯವಾಗಬೇಕು. ಆದರೆ ಹಸಿವಿನ ಜೊತೆಗೆ ಬದುಕುವುದು ಅಷ್ಟು ಸುಲಭದ ಕೆಲಸವಲ್ಲ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News