ಕೊರೋನ ಸೋಂಕಿನ ಪರಿಣಾಮ: ಇಂಧನ ಬೇಡಿಕೆ ಕುಸಿತ

Update: 2021-04-12 17:27 GMT

ಹೊಸದಿಲ್ಲಿ, ಎ.12: ವಿವಿಧ ಕ್ಷೇತ್ರಗಳ ಆರ್ಥಿಕ ಚಟುವಟಿಕೆಯ ಮೇಲೆ ಕೊರೋನ ಸೋಂಕಿನ ಪರಿಣಾಮ ಇದೀಗ ನಿಚ್ಚಳವಾಗುತ್ತಿದ್ದು ಎರಡು ದಶಕಗಳಲ್ಲೇ ಇದೇ ಮೊದಲ ಬಾರಿಗೆ ಇಂಧನ ಬೇಡಿಕೆ ಕುಸಿದಿದೆ ಎಂದು ವರದಿ ತಿಳಿಸಿದೆ.

2020-21ರ ಆರ್ಥಿಕ ವರ್ಷದಲ್ಲಿ ಸೋಂಕಿಗೆ ಸಂಬಂಧಿಸಿದ ಲಾಕ್‌ಡೌನ್ ಆರ್ಥಿಕ ಚಟುವಟಿಕೆಯನ್ನು ನಿಗ್ರಹಿಸಿದೆ ಮತ್ತು ದೇಶದಾದ್ಯಂತ ಸರಕು ಮತ್ತು ಸೇವೆಗಳ ಸಂಚಾರವನ್ನು ಮೊಟಕುಗೊಳಿಸಿದೆ. ಆದ್ದರಿಂದ ಅರ್ಥವ್ಯವಸ್ಥೆಯ ಸಶಕ್ತತೆಯ ಮಾನದಂಡವಾಗಿರುವ ಇಂಧನ ಬಳಕೆ ಈ ಆರ್ಥಿಕ ವರ್ಷದಲ್ಲಿ 9%ಕ್ಕೂ ಅಧಿಕ ಕುಸಿತ ದಾಖಲಿಸಿದೆ.

2019-20ರಲ್ಲಿ ದೇಶದಲ್ಲಿ ಒಟ್ಟು 214 ಮಿಲಿಯನ್ ಟನ್ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಾಗಿದ್ದರೆ 2020-21ರಲ್ಲಿ ಇದು 195 ಮಿಲಿಯನ್ ಟನ್‌ಗೆ ಕುಸಿದಿದೆ ಎಂದು ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಪ್ಲಾನಿಂಗ್ ಆ್ಯಂಡ್ ಅನಾಲಿಸೀಸ್ ಸೆಲ್(ಪಿಪಿಎಸಿ) ಹೇಳಿದೆ. 1998-99ರ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಕುಸಿದಿದ್ದು ಕೊರೋನ ಸೋಂಕಿನಿಂದ ದೇಶದ ಅರ್ಥವ್ಯವಸ್ಥೆಯ ಮೇಲೆ ಉಂಟಾಗಿರುವ ಪರಿಣಾಮದ ಸಂಕೇತ ಇದಾಗಿದೆ. ಆದರೆ, ಮಾರ್ಚ್‌ನಲ್ಲಿ ದೇಶದ ಇಂಧನ ಬಳಕೆಯ ಪ್ರಮಾಣ 18% ಹೆಚ್ಚಿರುವುದು ಕುತೂಹಲದ ವಿಷಯವಾಗಿದೆ.

ಇಂಧನಗಳಲ್ಲಿ ಡೀಸೆಲ್ ಬಳಕೆಯ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದ್ದು ಸುಮಾರು 6 ತಿಂಗಳು ಪ್ರಯಾಣಿಕರ ವಾಹನ ಸಂಚಾರ ಮೊಟಕುಗೊಂಡಿರುವುದು ಇದಕ್ಕೆ ಕಾರಣವಾಗಿದೆ. ಡೀಸೆಲ್ ಬಳಕೆಯಲ್ಲಿ 12% ಮತ್ತು ಪೆಟ್ರೋಲ್ ಬಳಕೆಯಲ್ಲಿ 7% ಕುಸಿತವಾಗಿದೆ. 2020-21ರ ಆರ್ಥಿಕ ವರ್ಷದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಎಲ್‌ಪಿಜಿ (ಅಡುಗೆ ಅನಿಲ)ಯ ಬಳಕೆ ಮಾತ್ರ ಹೆಚ್ಚಿದೆ. ಈ ಅವಧಿಯಲ್ಲಿ ಸರಕಾರದ ಉಜ್ವಲ ಯೋಜನೆಯಡಿ 1 ಕೋಟಿ ಹೆಚ್ಚುವರಿ ಕುಟುಂಬಗಳನ್ನು ಸೇರ್ಪಡೆಗೊಳಿಸಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಏವಿಯೇಷನ್ ಟರ್ಬೈನ್ ಆಯಿಲ್(ವಿಮಾನದಲ್ಲಿ ಬಳಸುವ ಇಂಧನ) ಮತ್ತು ನಾಫ್ತ ತೈಲಗಳ ಬಳಕೆಯ ಮೇಲೂ ವ್ಯತಿರಿಕ್ತ ಪರಿಣಾಮವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News