ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಶೋಷಿತರಿಗಾಗಿ ನೀಡಿದ ಮೂರು ಮಂತ್ರಗಳು: ಯಡಿಯೂರಪ್ಪ

Update: 2021-04-14 07:11 GMT

ಬೆಂಗಳೂರು, ಎ.14: ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆ ನವ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಸಮಾನತೆಯ ಸಮಾಜಕ್ಕಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದಂತ ಮೂರು ಮಂತ್ರಗಳನ್ನು ಅವರು ಶೋಷಿತರ ವರ್ಗಕ್ಕೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಿಸಿದ್ದಾರೆ.

ಬುಧವಾರ ಬೆಳಗ್ಗೆ ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಬಳಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂವಿಧಾನಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಚಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.

ಅಂಬೇಡ್ಕರ್ ತಮ್ಮ ಇಡಿ ಬದುಕನ್ನು ದೀನದಲಿತರ ರಕ್ಷಣೆಗಾಗಿ ಮುಡುಪಾಗಿಟ್ಟಿದ್ದರು, ಸಾಮಾಜಿಕ ಸಮಾನತೆಗಾಗಿ ಹೋರಾಟ ರೂಪಿಸಿ ದಮನಿತರ ಆಶಾಕಿರಣವಾಗಿದ್ದರು. ಯಾವುದೇ ಸಮುದಾಯ ಅಭಿವೃದ್ಧಿಯಾಗಲು ಶಿಕ್ಷಣವೊಂದೆ ಮುಖ್ಯ ಅಸ್ತ್ರ ಎಂದು ಪ್ರತಿಪಾದಿಸಿದವರು ಅವರು ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 ಕೋವಿಡ್-19 ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ಸಮವಸ್ತ್ರ ಮತ್ತು ಸುರಕ್ಷತಾ ಧಿರಿಸುಗಳನ್ನು ಮುಖ್ಯಮಂತ್ರಿ ವಿತರಿಸಿದರು. ಬೆಂಗಳೂರಿನ ಒಟ್ಟು 18,000 ಪೌರ ಕಾರ್ಮಿಕರಿಗೆ ಈ ನೂತನ ಸಮವಸ್ತ್ರ ಮತ್ತು ಸುರಕ್ಷತಾ ಧಿರಿಸು ವಿತರಿಸುವ ಯೋಜನೆಯನ್ನು ಬಿಬಿಎಂಪಿ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News