ಎಸ್ಸಿ-ಎಸ್ಟಿ ಕೆನೆ ಪದರ ಮಹತ್ವದ್ದಲ್ಲ, ಅಸಮಾನತೆ ಇನ್ನೂ ನಿಚ್ಚಳವಾಗಿದೆ

Update: 2021-04-14 17:22 GMT

ಹೊಸದಿಲ್ಲಿ, ಎ.14: ಮೀಸಲು ವರ್ಗಗಳಲ್ಲಿ ಖಾಲಿ ಹುದ್ದೆಗಳು,ಹೆಚ್ಚುತ್ತಿರುವ ಸಾಮಾಜಿಕ ಅಸಮಾನತೆಗಳು ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯ ಅಗತ್ಯ;ಇದು ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಏಳಿಗೆಯ ಕುರಿತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸೂಚನೆಯ ಮೇರೆಗೆ ದಲಿತ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಡಿಐಸಿಸಿಐ)ಯು ಸಿದ್ಧಪಡಿಸಿರುವ ವರದಿಯಲ್ಲಿ ವ್ಯಕ್ತವಾಗಿರುವ ಕೆಲವು ಅಭಿಪ್ರಾಯಗಳು.

ಕೆನೆ ಪದರ ಪರಿಕಲ್ಪನೆಯನ್ನು ತಳ್ಳಹಾಕಿರುವ ವರದಿಯು, 200 ಮಿಲಿಯನ್ಗೂ ಅಧಿಕ ದಲಿತ ಜನಸಂಖ್ಯೆಯಲ್ಲಿ ಕೆನೆ ಪದರದ ಲಾಭವನ್ನು ಪಡೆದುಕೊಂಡವರ ಸಂಖ್ಯೆ ನಗಣ್ಯವಾಗಿದೆ ಎಂದು ಹೇಳಿದೆ.

ಎಸ್ಸಿ ಮತ್ತು ಎಸ್ಟಿಗಳ ನಿಖರ ಸ್ಥಿತಿ ಮತ್ತು ಕಳೆದ ಏಳು ದಶಕಗಳಲ್ಲಿ ಅವರು ಎಲ್ಲಿಗೆ ತಲುಪಿದ್ದಾರೆ ಎನ್ನುವುದರ ವಿಶ್ಲೇಷಣೆಯು ಈ ವರದಿಯ ಗುರಿಯಾಗಿದೆ. ಸರಕಾರವು ನೀತಿ ಬೆಂಬಲವನ್ನು ಸೃಷ್ಟಿಸುವಂತಾಗಲು ಡಿಐಸಿಸಿಐ ಕಳೆದ ಫೆಬ್ರವರಿಯಲ್ಲಿ ಕೆಲವು ಸಲಹೆಗಳೊಂದಿಗೆ ಕರಡು ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿತ್ತು. ಅಂತಿಮ ಕರಡನ್ನು ಶೀಘ್ರವೇ ಸಲ್ಲಿಸಲಾಗುವುದು ಎಂದು ಡಿಐಸಿಸಿಐನ ಸ್ಥಾಪಕಾಧ್ಯಕ್ಷ ಮಿಲಿಂದ ಕಾಂಬ್ಳೆ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

 ಸಚಿವಾಲಯವು ಕರಡು ವರದಿಯನ್ನು ಸ್ವೀಕರಿಸಿರುವುದನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯದರ್ಶಿ ಆರ್.ಸುಬ್ರಮಣ್ಯಂ ಅವರು ದೃಢಪಡಿಸಿದರು.

ಎಸ್ಸಿ,ಎಸ್ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯಿದ್ದರೂ ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಈ ಸ್ಥಾನಗಳನ್ನು ಸೂಕ್ತವಾಗಿ ಭರ್ತಿ ಮಾಡಲಾಗಿಲ್ಲ ಎಂದು ವರದಿಯು ಅಂಕಿಸಂಖ್ಯೆಗಳ ಸಹಿತ ವಿವರಿಸಿದೆ.

ಈ ಸಮುದಾಯಗಳ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕೆನೆ ಪದರ ಪರಿಕಲ್ಪನೆಯನ್ನು ತಿರಸ್ಕರಿಸಿರುವ ವರದಿಯು,ಇಂತಹ ಯಾವುದೇ ವಿಷಯವೇ ಇಲ್ಲ. ಸರಕಾರಿ ಹುದ್ದೆಗಳಲ್ಲಿರುವ ಪರಿಶಿಷ್ಟ ಜಾತಿಗಳಿಗೆ ಸೇರಿದ ಗ್ರೂಪ್ ಎ ಮತ್ತು ಗ್ರೂಪ್ ಬಿ ನೌಕರರ ಸಂಖ್ಯೆ ಸುಮಾರು 3,38,606ರಷ್ಟಿದೆ. ಸುಮಾರು ಒಂದು ಸಾವಿರ ದಲಿತರು ಶಾಸಕಾಂಗಗಳಲ್ಲಿ ಸ್ಥಾನಗಳನ್ನು ಹೊಂದಿದ್ದಾರೆ. ಇದು ಪರಿಶಿಷ್ಟ ಜಾತಿಗಳ ಕೆನೆಪದರ. 200 ಮಿಲಿಯನ್ ಜನಸಂಖ್ಯೆಗೆ ಇದು ನಗಣ್ಯವಾಗಿದೆ ಎಂದು ವರದಿಯು ತಿಳಿಸಿದೆ.

ಉದ್ಯೋಗಾವಕಾಶಗಳು ಮೀಸಲಾತಿಯ ಸಂಪೂರ್ಣ ಸಾಮರ್ಥ್ಯಕ್ಕೆ ಹೆಚ್ಚಿದರೂ ಅದು ಜನಸಂಖ್ಯೆಯ ಶೇ.1ಕ್ಕಿಂತ ಹೆಚ್ಚಾಗುವುದಿಲ್ಲ. ಇಡೀ ಜನಸಂಖ್ಯೆಗೆ ಲಾಭದಾಯಕವಾಗಲು ನಾವು ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿರುವ ಉದ್ಯಮಾವಕಾಶಗಳು ಏಕೈಕ ಮೂಲವಾಗಿವೆ ಎಂದು ಡಿಐಸಿಸಿಐ ಅಧ್ಯಕ್ಷ ರವಿಕುಮಾರ ನಾರಾ ಸುದ್ದಿಸಂಸ್ಥಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News