"ಯಾವ ಗುಂಪೂ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿರಲಿಲ್ಲ, ಮತದಾನಕ್ಕೆ ಸಾಲಿನಲ್ಲಿ ನಿಂತವರ ಮೇಲೆ ಗುಂಡು ಹಾರಿಸಲಾಯಿತು"

Update: 2021-04-14 18:19 GMT

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್‌ ಬೆಹಾರ್‌ ನ ಸಿತಾಲ್ಕುಚಿಯಲ್ಲಿ ಮತದಾನದ ಬಳಿಕ ಉಂಟಾದ ಸಂಘರ್ಷದಲ್ಲಿ ಭದ್ರತಾ ಪಡೆಗಳ ಗುಂಡಿಗೆ ನಾಲ್ವರು ಬಲಿಯಾಗಿದ್ದರು. "ಭದ್ರತಾ ಪಡೆಗಳ ಮೇಲೆ ಯಾವುದೇ ಗುಂಪುಗಳು ದಾಳಿ ಮಾಡಿಲ್ಲ ಹಾಗೂ ಮತದಾನ ಮಾಡಲೆಂದು ನಿಂತವರ ಮೇಲೆ ವೃಥಾ ಗುಂಡು ಹಾರಿಸಲಾಯಿತು" ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ newslaundry.com ವರದಿ ಮಾಡಿದೆ. ಮೃತಪಟ್ಟವರ ಕುಟುಂಬಸ್ಥರ ಹಲವು ಆತಂಕಕಾರಿ ಆರೋಪಗಳನ್ನು ಯಾವ ಮಾಧ್ಯಮಗಳೂ ಪ್ರಕಟಿಸಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಾಧ್ಯಮದೊಂದಿಗೆ ಗುಂಡಿನ ದಾಳಿಯಲ್ಲಿ ಬಲಿಯಾದವರ ಕುಟುಂಬಸ್ಥರು, ನೆರೆಹೊರೆಯವರು, ಪ್ರತ್ಯಕ್ಷದರ್ಶಿಗಳು ಹಾಗೂ ಗ್ರಾಮಸ್ಥರು ಮಾತನಾಡಿದ್ದು, ಬೂತ್‌ ಸಂಖ್ಯೆ 126ರಲ್ಲಿ ನಡೆದಿದ್ದೇನು ಅನ್ನುವುದರ ಕುರಿತು ಮಾತನಾಡಿದ್ದಾರೆ. ಬೂತ್‌ 126ರಲ್ಲಿ ಕೇವಲ 900 ಮತದಾರರಿದ್ದು, ಅದರಲ್ಲಿ ಬಹುತೇಕ ಮುಸ್ಲಿಮರಾಗಿದ್ದಾರೆ. "ಮತದಾನದ ದಿನದಂದು ಬಾಲಕನೊಬ್ಬನನ್ನು ಭದ್ರತಾ ಪಡೆಗಳು ಥಳಿಸುತ್ತಿದೆ ಎಂಬ ವದಂತಿಗಳು ಬೂತ್‌ ನ ಸುತ್ತ ಹರಿದಾಡಿತ್ತು. ಇದು ಗುಂಡಿನ ದಾಳಿ ಮತ್ತು ಹತ್ಯೆಗಳಿಗೆ ಕಾರಣವಾಯಿತು" ಎನ್ನುವುದು ಅಧಿಕಾರಿಗಳು ಹೇಳುವ ಮಾತಾಗಿದೆ.

ಮತದಾನ ಕೇಂದ್ರದಲ್ಲಿ ಜನ ಸಮೂಹವು ಭದ್ರತಾ ಪಡೆಗಳನ್ನು ಆಕ್ರಮಿಸಿದಾಗ ಅವರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದರು ಎಂದು ಸಿಐಎಸ್‌ಎಫ್‌ನ ಮುಖ್ಯ ವಕ್ತಾರ ಡಿಐಜಿ ಅನಿಲ್ ಪಾಂಡೆ ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ. ಹೀಗಿದ್ದೂ, ಅಲ್ಲಿನ ಗ್ರಾಮಸ್ಥರು ಹೇಳುವ ವಿಚಾರ ಬೇರೆಯೇ ಆಗಿದೆ. ಅಂದು ಬೆಳಗ್ಗೆ ೯ ಗಂಟೆಯ ವೇಳೆ ಬಾಲಕನೋರ್ವನನ್ನು ಭದ್ರತಾ ಪಡೆಗಳು ಬಲವಾಗಿ ವಿಚಾರಣೆ ಮಾಡುತ್ತಿರುವುದನ್ನು ಕಂಡು ಅಲ್ಲಿ ಜನಸ್ತೋಮ ಸೃಷ್ಟಿಯಾಗಿತ್ತು. ಈ ವೇಳೆ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿತ್ತು ಮತ್ತು ಬಾಲಕನನ್ನು ಆಸ್ಪತ್ರೆಯ ಮುಂಭಾಗ ಇಳಿಸಿ ಹೋಗಿದ್ದರು ಎಂದು ಜನರು ಹೇಳಿದ್ದಾಗಿ ವರದಿ ತಿಳಿಸಿದೆ.

ಬಳಿಕ ೧೦ ಗಂಟೆಯ ಸುಮಾರಿಗೆ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದ ಸ್ಥಳಕ್ಕೆ ಎರಡು ವಾಹನಗಳಲ್ಲಿ ಬಂದ ಭದ್ರತಾ ಪಡೆಗಳು ಮತದಾನಕ್ಕೆಂದು ಸರತಿ ಸಾಲಿನಲ್ಲಿ ನಿಂತಿದ್ದ ಯುವಕನನ್ನು ಥಳಿಸಲು ಪ್ರಾರಂಭಿಸಿದರು ಎಂದು 40ರ ಹರೆಯದ ಮಕ್ಷೀದುಲ್‌ ಮಿಯಾನ್‌ ಹೇಳುತ್ತಾರೆ.

ಮೃತಪಟ್ಟ ನಾಲ್ವರ ಸಮಾಧಿಗಳು

"ಒಂದೇ ಕ್ಷಣದಲ್ಲಿ ಗುಂಡಿನ ದಾಳಿ ಪ್ರಾರಂಭವಾಯಿತು. ನನ್ನ ಸಾಲಿನಲ್ಲಿ ನಿಂತ ಒಬ್ಬ ವ್ಯಕ್ತಿಗೆ ಗುಂಡು ಹಾರಿಸಲಾಯಿತು. ನನ್ನ ಮತ್ತು ಅವನ ನಡುವೆ ನಾಲ್ಕು ಜನರಿದ್ದರು. ನಾನು ಕಿರಿದಾದ ದಾರಿಯೊಂದರ ಮೂಲಕ ಅಲ್ಲಿಂದ ತಪ್ಪಿಸಿಕೊಂಡೆ. ಬಳಿಕ ನಾನು ಮತ ಚಲಾಯಿಸಲು ಹೋಗಿಲ್ಲ" ಎಂದು ಮಕ್ಷೀದುಲ್‌ ಹೇಳುತ್ತಾರೆ.

ಮಕ್ಷೀದುಲ್‌ ಮಿಯಾನ್

"ಅಲ್ಲಿ ಯಾವುದೇ ಗುಂಪುಗಳು ಇರಲಿಲ್ಲ. ಅಲ್ಲಿ ಹಿಂಸಾಚಾರವು ನಡೆದಿರಲಿಲ್ಲ. ನಾನು ಕಳೆದ ಎರಡು ದಿನಗಳಿಂದ ಇದನ್ನು ಮಾಧ್ಯಮಗಳಿಗೆ ಹೇಳುತ್ತಿದ್ದೇನೆ. ಆದರೆ ಯಾರೂ ಸತ್ಯವನ್ನು ಪ್ರಕಟಿಸಲಿಲ್ಲ" ಎಂದು 31ರ ಹರೆಯದ ಝಮೀಯುಲ್‌ ಹಖ್‌ ಹೇಳುತ್ತಾರೆ. ಅವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು ಸದ್ಯ, ಮಾತಭಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುಂಡಿನ ದಾಳಿಯಲ್ಲಿ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದು, ನಾಲ್ವರೂ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮತದಾನ ಮಾಡಲು ಬಂದ ವಿದ್ಯಾರ್ಥಿ ಶೈಮುಲ್‌ ಹಖ್‌ ಎಂಬಾತ ತನ್ನ ಸಹೋದರಿ ಮತ್ತು ಸಹೋದರನೊಂದಿಗೆ ಮತದಾನಕ್ಕೆ ಆಗಮಿಸಿದ್ದು ಆತ ಸ್ಥಳದಲ್ಲೇ ಗುಂಡಿಗೆ ಬಲಿಯಾಗಿದ್ದ. ದೂರದ ಗ್ಯಾಂಗ್ಟಾಕ್‌ ನಲ್ಲಿ ಕೆಲಸ ಮಾಡುತ್ತಿದ್ದ 28ರ ಹರೆಯದ ಮುನೀರುಲ್‌ ಜಮಾನ್‌ ರ ಪತ್ನಿ ಆರು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದು, ಮನೆಗೆ ಬರಲು ಹಣವಿಲ್ಲದ ಕಾರಣ ಇದುವರೆಗೂ ಮಗುವಿನ ಮುಖ ನೋಡಿಲ್ಲ ಮತ್ತು ಮಗುವನನು ನೋಡುವ ಮೊದಲೇ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಮುನೀರುಲ್‌ ಜಮಾನ್‌ ರ ಮಗು

ದಿನವೊಂದಕ್ಕೆ 300ರೂ. ಗಳಿಸುತ್ತಿದ್ದ ಹಮೀದುಲ್‌ ಹಖ್‌ ಮತದಾನಕ್ಕೆಂದು ಸರತಿ ಸಾಲಿನಲ್ಲಿ ನಿಂತ ವೇಳೆ ಗುಂಡಿಗೆ ಬಲಿಯಾಗಿದ್ದ. ಅವರ ರೋಗಪೀಡಿತ ತಂದೆ ಮಾಧ್ಯಮದವರನ್ನು ಕಂಡ ಕೂಡಲೇ ಜೋರಾಗಿ ಅಳಲು ಆರಂಭಿಸಿದರು ಎಂದು ವರದಿ ಉಲ್ಲೇಖಿಸಿದೆ. ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ 19ರ ಹರೆಯದ ನೂರ್‌ ಇಸ್ಲಾಂ ಕೂಡಾ ಗುಂಡಿಗೆ ಬಲಿಯಾಗಿದ್ದಾನೆ. ಮನೆಯ ಆಧಾರಸ್ತಂಭವಾಗಿದ್ದ ಮಗ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಕುರಿತು ಅವರು ಆಘಾತಕ್ಕೊಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.

ಹಮೀದುಲ್‌ ಹಖ್‌ ರ ತಂದೆ (ಓರ್ವ ಪುತ್ರ ಈ ಹಿಂದೆ ಹೃದಯ ಸಮಸ್ಯೆಯಿಂದ ಮೃತಪಟ್ಟಿದ್ದು, ಇನ್ನೋರ್ವ ಪುತ್ರ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ

ಏತನ್ಮಧ್ಯೆ, ಈ ಘಟನೆಯು ಈಗ ರಾಜಕೀಯ ಆಯಾಮಗಳನ್ನು ಪಡೆದುಕೊಂಡಿದೆ ಎಂದು ಸಿಐಎಸ್ಎಫ್ ವಕ್ತಾರರು newslaundry.comಗೆ ತಿಳಿಸಿದ್ದಾರೆ. “ನಾವು ಗ್ರಾಮಸ್ಥರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅವರು ಬಳಿಕ ಸಾಕಷ್ಟು ವಿಚಾರಗಳನ್ನು ಸೇರಿಸಬಹುದು. ಇದು ಜನಸಮೂಹ ಅಥವಾ ನಾಗರಿಕರಿಗೆ ಸೀಮಿತವಾಗಿಲ್ಲ, ಈಗ ಅದು ರಾಜಕೀಯ ವಿಷಯವಾಗಿದೆ. ಹೇಳಿಕೆಗಳನ್ನು ಎಷ್ಟರ ಮಟ್ಟಿಗೆ ಸರಿಹೊಂದಿಸಬಹುದು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬಹುದು, ”ಎಂದು ಅವರು ಹೇಳುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಸಾವಿರಾರು ಬೂತ್‌ ಗಳನ್ನು ನಿಯೋಜಿಸಲಾಗಿದೆ ಮತ್ತು ಕೇವಲ ಒಂದು ನಿರ್ದಿಷ್ಟ ಬೂತ್‌ನಲ್ಲಿ ಏಕೆ ಗುಂಡು ಹಾರಿಸಲಾಗಿದೆ" ಎಂಬುವುದನ್ನು ನೀವು ಅರ್ಥೈಸಿಕೊಳ್ಳಬೇಕೆಂದು ಅವರು ಹೇಳುತ್ತಾರೆ. ಇದು ಆ ಗ್ರಾಮದ ನಿವಾಸಿಗಳು ಸಹ ಕೇಳುತ್ತಿರುವ ಪ್ರಶ್ನೆ ಎಂದು ವರದಿಯಲ್ಲಿ ಹೇಳಲಾಗಿದೆ.

ನೂರುಲ್‌ ಇಸ್ಲಾಂರ ತಂದೆ ತಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News