ಜಾತಿ ಆಧಾರಿತ ತಾರತಮ್ಯ ಮುಚ್ಚುಮರೆಯಿಲ್ಲದೆ ವ್ಯವಸ್ಥೆಯಲ್ಲೇ ಬೇರುಬಿಟ್ಟಿದೆ: ನ್ಯಾ ಡಿ.ವೈ ಚಂದ್ರಚೂಡ್

Update: 2021-04-15 16:54 GMT

ಹೊಸದಿಲ್ಲಿ, ಎ.15: ಅಸ್ಪಶ್ಯತೆ ಮತ್ತಿತರ ಕೆಟ್ಟ ಆಚರಣೆಗಳನ್ನು ಕಾನೂನುಬಾಹಿರ ಎಂದು ಘೋಷಿಸಿದ್ದರಿಂದ ಸಂವಿಧಾನ ರಚನೆಯಾಗಿ 70ಕ್ಕೂ ಹೆಚ್ಚು ವರ್ಷ ಕಳೆದ ಬಳಿಕ ದೇಶದಲ್ಲಿ ಜಾತಿ ಆಧಾರಿತ ತಾರತಮ್ಯ ಅಸ್ತಿತ್ವದಲ್ಲಿಲ್ಲ ಎಂದು ಕೆಲವರು ವಾದಿಸಬಹುದು. ಆದರೆ ಮುಚ್ಚುಮರೆಯಿಲ್ಲದ, ಪ್ರತ್ಯಕ್ಷ ತಾರತಮ್ಯವು ಈಗ ನಮ್ಮ ಸಮಾಜದ ವ್ಯವಸ್ಥೆಯಲ್ಲೇ ಬೇರುಬಿಟ್ಟಿದೆ ಎಂದು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.

ಬಹಿರಂಗ ತಾರತಮ್ಯವು ಈಗ ವ್ಯವಸ್ಥಿತ ರೂಪದಲ್ಲಿದೆ. ಜಾತಿವಾದಿ, ಸಮರ್ಥರ ಪರವಾಗಿರುವ, ಲಿಂಗವಾದಿ ಶ್ರೇಣಿ ವ್ಯವಸ್ಥೆ ನೆಲೆಸಿದೆ ಎಂದವರು ಹೇಳಿದ್ದಾರೆ. ನ್ಯಾಯವಾದಿಗಳು, ಕಾನೂನು ಸಂಸ್ಥೆಗಳು, ನ್ಯಾಯಾಧೀಶರು ಹಾಗೂ ದೇಶದ ಕಾನೂನು ವೃತ್ತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವವರ ಜಾಲಬಂಧ(ನೆಟ್ವರ್ಕ್) ‘ಕಮ್ಯುನಿಟಿ ಫಾರ್ ದಿ ಇರಾಡಿಕೇಷನ್ ಆಫ್ ಡಿಸ್ಕ್ರಿಮಿನೇಷನ್ ಇನ್ ಎಜುಕೇಶನ್ ಆ್ಯಂಡ್ ಎಂಪ್ಲಾಯ್ಮೆಂಟ್(ಸಿಇಡಿಇ)’ನ ಉದ್ಘಾಟನಾ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರು ಕೆಲವು ಕೆಲಸಗಳಿಗೆ ಸಮರ್ಥರಲ್ಲ ಎಂದು ಗ್ರಹಿಸಿ ಕೆಳದರ್ಜೆಯ ಹುದ್ದೆ ನೀಡುವುದು, ಕಡಿಮೆ ವೇತನ, ಹೆಚ್ಚುವರಿ ಕೆಲಸ ನೀಡುವುದು ಮತ್ತಿತರ ಪ್ರಕ್ರಿಯೆಗಳು ಈಗಲೂ ಮುಂದುವರಿದಿದೆ. ಸೇನಾಪಡೆಯಲ್ಲಿ ಮಹಿಳೆಯರನ್ನು ಖಾಯಂ ಸೇವೆಯ ಹುದ್ದೆಗಳಿಗೆ ಪ್ರತಿಬಂಧಿಸಿರುವ ಬಗ್ಗೆ ಸುಪ್ರೀಂಕೋರ್ಟ್ ಕಳೆದ ವರ್ಷ ಬಬಿತಾ ಪೂನಿಯಾ ಪ್ರಕರಣದಲ್ಲಿ ಪ್ರಶ್ನಿಸಿ ಈ ತಾರತಮ್ಯವನ್ನು ಕೊನೆಗೊಳಿಸುವಂತೆ ಸೂಚಿಸಿದೆ ಎಂದು ಚಂದ್ರಚೂಡ್ ಉಲ್ಲೇಖಿಸಿದರು.  

ಕಾನೂನು ಶಾಲೆಗಳಿಗೆ ಸೇರುವ ಮುನ್ನವೇ ತಾರತಮ್ಯ ಆರಂಭವಾಗುತ್ತದೆ. ಪ್ರವೇಶ ಪರೀಕ್ಷೆ ಇಂಗ್ಲಿಷ್ನಲ್ಲಿ ಮಾತ್ರ ಇರುತ್ತದೆ. ಉನ್ನತ ಗುಣಮಟ್ಟದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆಯಲು ಶಕ್ತರಾದ ಅನುಕೂಲಸ್ತರ, ಸ್ಥಿತಿವಂತರ ಮಕ್ಕಳು ಮಾತ್ರ ಅರ್ಹತೆ ಪಡೆಯಲಿ ಎಂಬುದು ಇದರ ಉದ್ದೇಶವಾಗಿರುತ್ತದೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆಯಲು ಸಾಧ್ಯವಾಗದ, ಸರಕಾರಿ ಶಾಲೆಯಲ್ಲಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಮುಂದುವರಿಸಿದ ಬಡ, ಮಧ್ಯಮವರ್ಗದ ವಿದ್ಯಾರ್ಥಿಗಳು ಉನ್ನತ ಕಾನೂನು ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗದ ವ್ಯವಸ್ಥೆಯಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇರುವುದಕ್ಕೆ ಇದೂ ಪ್ರಮುಖ ಕಾರಣವಾಗಿದೆ.

ಉದ್ಯೋಗ, ಶಿಕ್ಷಣಕ್ಕೆ ಸೇರುವಾಗ ಸಂದರ್ಶನದಲ್ಲಿ ಮಹಿಳೆಯರಲ್ಲಿ ಮದುವೆಯ ಬಗ್ಗೆ, ಮಕ್ಕಳ ಪಾಲನೆ, ಪೋಷಣೆಯ ಬಗ್ಗೆ ಪದೇಪದೇ ಪ್ರಶ್ನಿಸಲಾಗುತ್ತದೆ. ಕಾನೂನು ಪದವಿಯನ್ನು ವೃತ್ತಿಯನ್ನಾಗಿಸಲು ಬಯಸುತ್ತೀರಾ ಅಥವಾ ಕೆಲ ಸಮಯದವರೆಗಿನ ಹವ್ಯಾಸವೆಂದು ಪರಿಗಣಿಸುತ್ತೀರಾ ಎಂದು ಪ್ರಶ್ನಿಸಲಾಗುತ್ತದೆ. ಪುರುಷರನ್ನು ಈ ರೀತಿ ಯಾರೂ ಪ್ರಶ್ನಿಸುವುದಿಲ್ಲ. ಸುಪ್ರೀಂಕೋರ್ಟ್ನಲ್ಲಿ ಕೂಡಾ ಆದಿವಾಸಿಗಳ, ಬಹುಜನರ, ದಲಿತರ, ಮಹಿಳೆಯರ ಅಥವಾ ಅಂಗವಿಕಲರ ಪ್ರಾತಿನಿಧ್ಯ ಅತ್ಯಲ್ಪವಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News