ಸರಕಾರಿ ವೈದ್ಯಕೀಯ ಕಾಲೇಜು, ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 1,000 ಹಾಸಿಗೆಗಳು ಕಾಯ್ದಿರಿಸಲು ಕ್ರಮ

Update: 2021-04-16 06:58 GMT
Photo credit: twitter@CMofKarnataka

ಬೆಂಗಳೂರು, ಎ.16: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸಾಂಕ್ರಾಮಿಕ ನಿಯಂತ್ರಣ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ತಮ್ಮ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದೆಲ್ಲೆಡೆ ಹರಡುತ್ತಿರುವ ಕೊರೋನ ವೈರಸ್ ಅನ್ನು ತಡೆಗಟ್ಟಲು ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

1. ಕಾರ್ಪೊರೇಟ್ ವಲಯದ ಆಸ್ಪತ್ರೆಗಳು ತಮ್ಮ ಹತ್ತಿರದ ಹೋಟೆಲ್ ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಡಿಮೆ ರೋಗ ಲಕ್ಷಣಗಳುಳ್ಳ ರೋಗಿಗಳಿಗೆ ನೋಡಿಕೊಳ್ಳಲು ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸಲು ಕ್ರಮ ವಹಿಸುವುದು.

2. ಹೆಚ್ಚು ರೋಗ ಲಕ್ಷಣಗಳುಳ್ಳ ಅಗತ್ಯವಿರುವ ರೋಗಿಗಳನ್ನು ಮಾತ್ರ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲು ಕ್ರಮ ವಹಿಸುವುದು. 

3. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರದಿಂದ ದಾಖಲಿಸುವ ರೋಗಿಗಳಿಗೆ ಕಾಯ್ದಿರಿಸಲು ಕೂಡಲೇ ಕ್ರಮ ಕೈಗೊಳ್ಳುವುದು.

4. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1,000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸುವುದು.

5. ಸರ್ಕಾರಿ ಆಸ್ಪತ್ರೆಗಳಲ್ಲಿ 1,000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸುವುದು.

6. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5,000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸುವುದು.

7. ಅಗತ್ಯವಿರುವ ರೋಗಿಗಳಿಗೆ ಕೂಡಲೇ ಚಿಕಿತ್ಸೆ ನೀಡಲು ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಐ.ಪಿ.ಎಸ್. ಮತ್ತು ಐ.ಎ.ಎಸ್. ಅಧಿಕಾರಿಗಳನ್ನು ಹಾಗೂ ಬಿ.ಡಬ್ಲ್ಯು.ಎಸ್.ಎಸ್.ಬಿ., ಬೆಸ್ಕಾಂ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸುವುದು. 

8. ಕೊರೋನ ವೈರಸ್ ನಿಂದ ತೀವ್ರತರವಾಗಿ ಬಳಲುತ್ತಿರುವ ರೋಗಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು. ಉಳಿದಂತೆ ಕೊರೋನ ಲಕ್ಷಣಗಳಿಲ್ಲದ ರೋಗಿಗಳಿಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವುದು ಹಾಗೂ ಅಗತ್ಯವಿರುವಷ್ಟು ದಿನಗಳು ಮಾತ್ರ ರೋಗಿಗಳನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದ ಕೂಡಲೇ ಆಸ್ಪತ್ರೆಯಿಂದ  ಬಿಡುಗಡೆಗೊಳಿಸುವುದು.

9. ರಾಜ್ಯದಲ್ಲಿ ಸದ್ಯಕ್ಕೆ ರೆಮಿಡೆಸ್ವಿರ್ ಕೊರತೆ ಇರುವುದಿಲ್ಲ. ಆದಾಗ್ಯೂ ಹೆಚ್ಚುವರಿ ಡೋಸ್ ಗಳನ್ನು ಖರೀದಿ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದನ್ನು ಅಂತಿಮಗೊಳಿಸಿ ಹೆಚ್ಚುವರಿ ಡೋಸ್ ಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳುವುದು.

10. ಪ್ರಸಕ್ತ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರುವುದಿಲ್ಲ. ಆದಾಗ್ಯೂ 5,000 ಆಕ್ಸಿಜನ್ ಸಿಲಿಂಡರ್ ಗಳ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು.

11. ಪದೇ ಪದೇ ಆಕ್ಸಿಜನ್ ಸಿಲಿಂಡರ್ ಗಳ ಬದಲಾವಣೆ ತಪ್ಪಿಸಲು ಜಂಬೋ ಸಿಲಿಂಡರ್ ಗಳನ್ನು ಖರೀದಿಸಲು ಕೂಡಲೇ ಕ್ರಮ ಕೈಗೊಳ್ಳುವುದು.

12. ಈಗಾಗಲೇ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದು, ಅದೇರೀತಿಯಾಗಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಟೆಂಡರ್ ಕರೆದಿದ್ದು, ಕೂಡಲೇ ಅದನ್ನು ಅಂತಿಮಗೊಳಿಸಿ ಘಟಕ ಸ್ಥಾಪಿಸಲು ತ್ವರಿತ ಕ್ರಮ ಕೈಗೊಳ್ಳುವುದು.

13. ಫ್ರಂಟ್ ಲೈನ್ ವರ್ಕರ್ ಗಳಾದ ವೈದ್ಯರು, ನರ್ಸ್ ಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕೂಡಲೇ ಕ್ರಮ ಕೈಗೊಳ್ಳುವುದು. 

14. ರಾಜ್ಯಾದ್ಯಂತ ಕಾಟ್ಯಾಂಕ್ಟ್  ಟ್ರೇಸಿಂಗ್ ಗಳನ್ನು  ತ್ವರಿತಗೊಳಿಸುವುದು. 

15. ಹೋಂ ಐಸೋಲೇಶನ್ ಇರುವ ರೋಗಿಗಳಿಗೆ ಮುದ್ರೆ ಹಾಕಲು ಕ್ರಮ ಕೈಗೊಳ್ಳುವುದು.

16. ಪ್ರತಿದಿನ ನಡೆಸುವ ಕೋವಿಡ್ ಟೆಸ್ಟ್ ಫಲಿತಾಂಶವು (ಟೆಸ್ಟ ರಿಪೋರ್ಟ್) 24 ಗಂಟೆಯೋಳಗಾಗಿ ತಪ್ಪದೇ ಲಭ್ಯವಾಗುವಂತೆ ಕ್ರಮ ವಹಿಸಲಾವುದು ಮತ್ತು ಟೆಸ್ಟಿಂಗ್ ಅವಧಿಯನ್ನು ಇನ್ನೂ ಕಡಿಮೆಗೊಳಿಸಲು ಕೂಡಲೇ ಅಗತ್ಯ ಕ್ರಮ ವಹಿಸುವುದು.

17. ಕಂಟೈನ್ಮೆಂಟ್ ಝೋನ್ ಗಳನ್ನು ಮತ್ತು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. 

18. ಅನಗತ್ಯವಾಗಿ ಜನ ಗುಂಪು ಸೇರುವುದನ್ನು ತಡೆಗಟ್ಟಲು ಎಲ್ಲಾ ಕ್ರಮ ಕೈಗೊಳ್ಳುವುದು.

19. ಬೇಡಿಕೆಗನುಗುಣವಾಗಿ ಉಚಿತವಾಗಿ 108 ಸೇರಿದಂತೆ ಅಗತ್ಯ ಆ್ಯಂಬುಲೆನ್ಸ್ ಗಳನ್ನು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲೂ ಲಭ್ಯವಿರುವಂತೆ ನೋಡಿಕೊಳ್ಳುವುದು.

20. ಬೆಂಗಳೂರು ನಗರದಲ್ಲಿ ಒಟ್ಟಾರೆಯಾಗಿ 400 ಆ್ಯಂಬುಲೆನ್ಸ್ ಗಳನ್ನು ಕೋವಿಡ್ ರೋಗಿಗಳಿಗೋಸ್ಕರ ಉಚಿತವಾಗಿ ಸೇವೆ ಒದಗಿಸಲು ಮೀಸಲಿರಿಸುವುದು. 

21. ಬೆಂಗಳೂರು ನಗರದಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟವರ ಮೃತದೇಹಗಳನ್ನು ಸಾಗಿಸಲು 49 ಆ್ಯಂಬುಲೆನ್ಸ್ ಗಳನ್ನು ಉಚಿತವಾಗಿ ಸೇವೆ ಒದಗಿಸಲು ಮೀಸಲಿರಿಸುವುದು. 

22. ಚಿತಾಗಾರಗಳಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸುವುದು.

23. ಬಿಬಿಎಂಪಿಯು ತನ್ನ ಎಲ್ಲ ವಲಯಗಳ ಮತ್ತು ನಿಯಂತ್ರಣ ಕೊಠಡಿಗಳನ್ನು ಸಜ್ಜುಗೊಳಿಸಿ ಕೋವಿಡ್ ರೋಗಿಗಳ ಸಹಾಯಕ್ಕೆ ಸದಾ ಬದ್ಧರಾಗಿರುವಂತೆ ಕ್ರಮ ವಹಿಸುವುದು ಹಾಗೂ ಸಹಾಯವಾಣಿಗಳಿಗೆ ನುರಿತ ವ್ಯಕ್ತಿಗಳನ್ನು ನೇಮಿಸಿ ಸದೃಢಗೊಳಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News