ಕೊರೋನ ಸೋಂಕಿಗೆ ತುತ್ತಾದ ಕುಮಾರಸ್ವಾಮಿಗೆ ಬೆಡ್ ಇಲ್ಲ ಎಂದ ಬೆಂಗಳೂರಿನ ಖಾಸಗಿ ಆಸ್ಪತ್ರೆ !

Update: 2021-04-17 07:50 GMT

ಬೆಂಗಳೂರು,ಎ,17: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಇಂದು ಕೊರೋನ ಸೋಂಕು ತಗಲಿದ್ದು, ಆದರೆ ಚಿಕಿತ್ಸೆ ಪಡೆಯಲು ಬೆಂಗಳೂರಿನ ಖಾಸಗಿ ಆಸ್ಪತ್ರೆ ಸೇರಲು ಬಯಸಿದ ಅವರಿಗೆ ಬೆಡ್ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ಹೋಗಿದ್ದ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಸಂಜೆಯೇ ದಣಿವು ಕಾಣಿಸಿಕೊಂಡಿದೆ. ಹೀಗಾಗಿ ಬೆಂಗಳೂರಿಗೆ ಮರಳಿ, ಮನೆಗೆ ಹೋಗದೆ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಗಾದ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಧೃಢಪಟ್ಟಿದೆ. ಬಳಿಕ ವೈದ್ಯರು ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಎಂದುಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ.

ಹೀಗಾಗಿ ಖಾಸಗಿ ಆಸ್ಪತ್ರೆಗೆ ಹೋಗಲು ನಿರ್ಧರಿಸಿದ ಅವರು ಸಂಬಂಧಿಸಿದವರನ್ನು ಸಂಪರ್ಕಿಸಿದರೆ, ಬೆಡ್ ಇಲ್ಲ ಎಂಬ ಉತ್ತರ ಸಿಕ್ಕಿದೆ. ಈ ಮಧ್ಯೆ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ಯತ್ನಿಸಿದ್ದಾರಾದರೂ ಅದು ಫಲ ಕೊಟ್ಟಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೊಂದು ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅಲ್ಲಿ ಬೆಡ್ ಸಿಕ್ಕಿದೆ ಎಂದು ಗೊತ್ತಾಗಿದೆ.

ಅದರೆ ಪ್ರಕರಣವೊಂದರ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲೇ ಬೇಕಿರುವುದರಿಂದ ಬೆಡ್ ಸಿಕ್ಕರೂ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿಲ್ಲ. ಕೊರೋನ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವ ಸಾಧ್ಯತೆಯೂ ಇಲ್ಲ ಎಂದು ಗೊತ್ತಾಗಿದೆ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ನ್ಯಾಯಾಲಯದ ವಿಚಾರಣೆ ಮುಗಿದ ನಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್ ಎಂ ರಮೇಶಗೌಡ ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News