ಗಂಭೀರ ಸ್ಥಿತಿಯಲ್ಲಿರುವ ಶಂಕಿತ ಕೋವಿಡ್ ರೋಗಿ ಮೃತಪಟ್ಟಿದ್ದಾರೆಂದು ʼಎರಡು ಬಾರಿʼ ಘೋಷಿಸಿದ ಆಸ್ಪತ್ರೆ

Update: 2021-04-17 08:51 GMT
ಸಾಂದರ್ಭಿಕ ಚಿತ್ರ

ಭೋಪಾಲ್: ಮಧ್ಯಪ್ರದೇಶದ ವಿದಿಶ ಎಂಬಲ್ಲಿನ ಸರಕಾರಿ ಮೆಡಿಕಲ್ ಕಾಲೇಜು ಸಿಬ್ಬಂದಿ 58 ವರ್ಷದ ಶಂಕಿತ ಕೋವಿಡ್ ರೋಗಿ  ಜೀವಂತವಿದ್ದರೂ ಆತ ಸಾವನ್ನಪ್ಪಿದ್ದಾನೆಂದು ಎರಡು ಬಾರಿ ಘೋಷಿಸಿದ ಘಟನೆ ನಡೆದಿದೆ. ಗೋರೆಲಾಲ್ ಕೋರಿ ಎಂಬ ಈ ಹೆಸರಿನ ವ್ಯಕ್ತಿಯನ್ನು ಅಟಲ್ ಬಿಹಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಎಪ್ರಿಲ್ 12ರಂದು ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿತ್ತು.

ಗೋರೆಲಾಲ್ ಮೃತಪಟ್ಟಿರುವುದಾಗಿ ಆಸ್ಪತ್ರೆ ಸಿಬ್ಬಂದಿ ತಮಗೆ ಗುರುವಾರ ಬೆಳಿಗ್ಗೆ ತಿಳಿಸಿದ್ದಾಗಿ ಆತನ ಮಗ ಕೈಲಾಶ್ ಕೋರಿ ತಿಳಿಸಿದ್ದಾರೆ. ಆದರೆ ನಂತರ ಆತ ಜೀವಂತವಿದ್ದಾರೆಂಬ ಮಾಹಿತಿ ನೀಡಲಾಯಿತು.

"ನಂತರ ಸಂಜೆ 4.30ಕ್ಕೆ ಮತ್ತೆ ಕರೆ ಬಂದು ತಂದೆಗೆ ತುರ್ತು ಶಸ್ತ್ರಕ್ರಿಯೆ ನೆರವೇರಿಸಲಾಗಿದೆಯೆಂದು ಹೇಳಲಾಯಿತು. ರಾತ್ರಿ 8.30ಕ್ಕೆ ಅವರು ಮೃತಪಟ್ಟಿದ್ದಾರೆ ಮೃತದೇಹ ಮರುದಿನ ಬೆಳಿಗ್ಗೆ ಹಸ್ತಾಂತರಿಸಲಾಗುವುದು ಎಂದು ಹೇಳಲಾಯಿತು. ನಂತರ ಕುಟುಂಬ ಅಂತ್ಯಕ್ರಿಯೆಗೆ ಏರ್ಪಾಟು ಮಾಡಿತ್ತು ಹಾಗೂ ಬೆಳಿಗ್ಗೆ ಮೃತದೇಹ ಕೊಂಡು ಹೋಗಲು ಬಂದಾಗ ರೋಗಿ ಜೀವಂತವಿದ್ದಾರೆ ಆದರೆ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಯಿತು" ಎಂದು ಕೈಲಾಶ್ ಆರೋಪಿಸಿದ್ದಾರೆ.

"ರೋಗಿ ವೆಂಟಿಲೇಟರ್ ಸಪೋರ್ಟ್‍ನಲ್ಲಿದ್ದಾಗ ಅವರ ಹೃದಯ ಬಡಿತ ನಿಂತಿತ್ತು. ಈ ಕುರಿತು ಕರ್ತವ್ಯದಲ್ಲಿದ್ದ ನರ್ಸ್ ಇತರ ಸಿಬ್ಬಂದಿಗೆ ಆತ ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿದರು. ನಂತರ ಆತನಿಗೆ ವೈದ್ಯರು ಸಿಪಿಆರ್ ಮಾಡಿದ್ದು ಆತ ಈಗಲೂ ವೆಂಟಿಲೇಟರ್ ಸಪೋರ್ಟ್‍ನಲ್ಲಿದ್ದಾರೆ" ಎಂದು ಆಸ್ಪತ್ರೆಯ ಡೀನ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News