ಕಾಶ್ಮೀರದ ವಿಶೇಷ ಮಹಿಳಾ ಪೊಲೀಸ್‌ ಅಧಿಕಾರಿ ಶೈಮಾ ಅಖ್ತರ್‌ ಯುಎಪಿಎ ಕಾಯ್ದೆಯಡಿ ಬಂಧನ

Update: 2021-04-17 09:43 GMT
ಸಾಂದರ್ಭಿಕ ಚಿತ್ರ

ಜಮ್ಮು: ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಫ್ರಿಸಲ್ ಗ್ರಾಮದಲ್ಲಿನ ತನ್ನ ಮನೆ ಮೇಲೆ ಆಗಾಗ ನಡೆಯುವ ಸೇನೆಯ ದಾಳಿಗಳನ್ನು ವಿಶೇಷ ಪೊಲೀಸ್ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಕ್ಷೇಪಿಸುತ್ತಿರುವ ವೀಡಿಯೋ ಒಂದು ವೈರಲ್ ಆದ ಬೆನ್ನಲ್ಲೇ ಆಕೆಯನ್ನು ಪೊಲೀಸರು  ಬಂಧಿಸಿದ್ದಾರೆ.  ಬಂಧಿತ ಅಧಿಕಾರಿಯನ್ನು ಸೈಮಾ ಅಖ್ತರ್ ಎಂದು ಗುರುತಿಸಲಾಗಿದ್ದು ಆಕೆಯ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಲಾಗಿದೆಯಲ್ಲದೆ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಆಕೆ ಉಗ್ರವಾದವನ್ನು ವೈಭವೀಕರಿಸಿದ್ದಾರೆ ಹಾಗೂ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಕುಲ್ಗಾಂ ಪೊಲೀಸರು ಆರೋಪಿಸಿದ್ದಾರೆ.

ರಮಝಾನ್ ತಿಂಗಳಲ್ಲೂ ತನ್ನ  ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೆನ್ನಲಾದ ಸೇನಾ ಸಿಬ್ಬಂದಿಯನ್ನು ಮಹಿಳೆ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಹಾಗೂ ತನ್ನ ತಾಯಿಗೆ ಅಸೌಖ್ಯವಿದೆ ಎಂದು ಹೇಳಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ. ವೀಡಿಯೋದಲ್ಲಿ ಆಕೆಯ ಮುಖ ಕಾಣಿಸುವುದಿಲ್ಲ. ಆದರೆ "ಏಕೆ ಮತ್ತೆ ಮತ್ತೆ ಬರುತ್ತಿದ್ದೀರಿ?" ಎಂದು ಆಕೆ ಪ್ರಶ್ನಿಸುತ್ತಿರುವುದು ಕೇಳಿಸುತ್ತದೆ. "ಉಗ್ರವಾದಿಗಳಿರುವ ಮನೆಗಳಿಗೆ ಹೋಗಿ, ನೀವು ನಮಗೆ ಸೆಹ್ರಿ ಕೂಡ ತೆಗೆದುಕೊಳ್ಳಲು ಬಿಡುವುದಿಲ್ಲ, ಮನೆ ಶೋಧಿಸಬೇಕಿದ್ದರೆ ಮೊದಲು ಶೂ ತೆಗೆಯಿರಿ" ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ಆ ಮಹಿಳಾ ಅಧಿಕಾರಿಯ ಮನೆಯನ್ನು ಎಪ್ರಿಲ್ 14ರಂದು ಶೋಧಿಸಲಾಗಿತ್ತು, ಆದರೆ ಆಗ ಆಕೆ ಅಧಿಕಾರಿಗಳ ವಿರುದ್ಧವೇ ಹರಿಹಾಯ್ದು ತನ್ನ ಫೋನಿನಿಂದ ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಆಕೆಯ ಬಂಧನ ಹಾಗೂ ಆಕೆಯ  ಮೇಲೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಿರುವುದನ್ನು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಕೂಡ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News