"ಬಂಗಾಳದ ಚುನಾವಣೆಯಲ್ಲಿ ಬ್ಯುಝಿಯಾಗಿರುವ ಮೋದಿಗೆ ಹೆಚ್ಚುತ್ತಿರುವ ಕೋವಿಡ್‌ ಸಮಸ್ಯೆ ಕುರಿತು ಚರ್ಚಿಸಲು ಸಮಯವಿಲ್ಲ"

Update: 2021-04-17 12:57 GMT

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯ ನಡುವೆ ಮೆಡಿಕಲ್ ಆಕ್ಸಿಜನ್ ಹಾಗೂ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ರೆಮ್ಡೆಸಿವಿರ್ ಔಷಧಿಯ ಕೊರತೆ ನೀಗಿಸಲು ಮನವಿ ಸಲ್ಲಿಸಲೆಂದು ಇಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯ ಕಚೇರಿಯನ್ನು ಸಂಪರ್ಕಿಸಿದ್ದರೂ ಪ್ರಧಾನಿ ಪಶ್ಚಿಮ ಬಂಗಾಳದಲ್ಲಿ ಪ್ರಚಾರದಲ್ಲಿ ವ್ಯಸ್ತರಾಗಿದ್ದಾರೆ ಎಂದು ಅವರಿಗೆ ತಿಳಿಸಲಾಯಿತು ಎಂಬ ವಿಚಾರ ಸಾಕಷ್ಟು ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಇನ್ನೂ ಈ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿಲ್ಲದೇ ಇದ್ದರೂ ಕೇಂದ್ರ ಸಚಿವ ಪಿಯುಷ್ ಗೋಯೆಲ್ ಅವರು ಮಹಾರಾಷ್ಟ್ರ ಸಿಎಂ ಕಾರ್ಯಾಲಯದ ಆರೋಪವನ್ನು ಅಲ್ಲಗಳೆದಿದ್ದಾರೆ. ಇದು 'ಆಕ್ಸಿಜನ್ ಕುರಿತಾದ ಗಿಮ್ಮಿಕ್' ಎಂದು ಅವರು ಆರೋಪಿಸಿದರಲ್ಲದೆ ಕೇಂದ್ರ ಎಲ್ಲಾ ರಾಜ್ಯ ಸರಕಾರಗಳೊಂದಿಗೆ ಸಂಪರ್ಕದಲ್ಲಿದ್ದು ಆದಷ್ಟು ಸಹಾಯಹಸ್ತ ಚಾಚಲು ಕ್ರಮ ಕೈಗೊಳ್ಳುತ್ತಿದೆ,  ಎಂದಿದ್ದಾರೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಅತ್ಯಧಿಕವಾಗಿರುವ ಮುಂಬೈ ನಗರವೊಂದಕ್ಕೇ ಸುಮಾರು 280 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆಯೆಂದು ತಿಳಿದು ಬದಿದೆ.

ಇನ್ನೊಂದೆಡೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಕೇಂದ್ರ ಸರಕಾರದ ವಿರುದ್ಧ ಇನ್ನೊಂದು ಆರೋಪ ಹೊರಿಸಿದ್ದಾರೆ. ರೆಮ್ಡೆಸಿವಿರ್ ಔಷಧಿಯನ್ನು ರಫ್ತುಗೊಳಿಸುವ 16 ಕಂಪೆನಿಗಳಿಗೆ ಅವುಗಳನ್ನು ಮಹಾರಾಷ್ಟ್ರಕ್ಕೆ ಪೂರೈಸದಂತೆ ಕೇಂದ್ರ ಸೂಚಿಸಿದೆ ಎಂದು ಅವರು ದೂರಿದ್ದಾರೆ. "ಮಹಾರಾಷ್ಟ್ರಕ್ಕೆ ಈ ಔಷಧಿ ಪೂರೈಸಿದರೆ ಅವರ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ" ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ. 

"ಇದೊಂದು ಅಪಾಯಕಾರಿ ಪ್ರವೃತ್ತಿ. ಇಂತಹ ಸನ್ನಿವೇಶದಲ್ಲಿ ಈ ರಫ್ತು ಕಂಪೆನಿಗಳ ಬಳಿಯಿರುವ ಸ್ಟಾಕ್ ವಶಪಡಿಸಿಕೊಂಡು ಅವುಗಳನ್ನು ಅಗತ್ಯವುಳ್ಳವರಿಗೆ ಪೂರೈಸುವುದು ಬಿಟ್ಟು ಅನ್ಯ ಮಾರ್ಗವಿಲ್ಲ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News