ಪರಿಶಿಷ್ಟ ಜಾತಿ ಕುರಿತ ಹೇಳಿಕೆ: ಟಿಎಂಸಿ ನಾಯಕಿಗೆ ಚುನಾವಣಾ ಆಯೋಗದ ನೋಟಿಸ್

Update: 2021-04-17 14:56 GMT
photo : twitter(@kavita_tewari)
 

 ಕೋಲ್ಕತಾ,ಎ.17: ರಾಜ್ಯದಲ್ಲಿಯ ಪರಿಶಿಷ್ಟ ಜಾತಿ ಸಮುದಾಯದ ಕುರಿತು ಹೇಳಿಕೆಗಾಗಿ ಟಿಎಂಸಿ ನಾಯಕಿ ಸುಜಾತಾ ಮಂಡಲ್ ಖಾನ್ ಅವರಿಗೆ ಚುನಾವಣಾ ಆಯೋಗವು ನೋಟಿಸನ್ನು ಹೊರಡಿಸಿದೆ. ಖಾನ್ ಪ.ಜಾ.ಸಮುದಾಯಕ್ಕೆ ಸೇರಿದವರನ್ನು ‘ಸ್ವಭಾವದಿಂದ ಭಿಕ್ಷುಕರು’ ಎಂದು ಕರೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ತನಗೆ ದೂರು ಸಲ್ಲಿಸಿದ್ದಾರೆ ಎಂದು ಆಯೋಗವು ಹೇಳಿದೆ.

‘ಪ.ಜಾ.ಕುಟುಂಬಗಳಲ್ಲಿ ಸಂಪನ್ಮೂಲಗಳ ಕೊರತೆಯಿರುವುದರಿಂದ ಮಮತಾ ಬ್ಯಾನರ್ಜಿಯವರು ಎಷ್ಟೇ ನೆರವು ನೀಡಿದರೂ ಅವರ ಕೊರತೆ ನೀಗುವುದಿಲ್ಲ. ಕೆಲವರು ಸ್ವಭಾವದಿಂದಲೇ ಭಿಕ್ಷುಕರಾಗಿರುತ್ತಾರೆ ಎಂಬ ಮಾತಿನಂತೆ ಇಲ್ಲಿಯ ಪ.ಜಾ.ಸಮುದಾಯದವರು ಸ್ವಭಾವತಃ ಭಿಕ್ಷುಕರಾಗಿದ್ದಾರೆ. ಬ್ಯಾನರ್ಜಿ ಅವರಿಗೆ ಅಷ್ಟೆಲ್ಲ ನೆರವೂ ನೀಡುತ್ತಿದ್ದರೂ ಅವರು ಜುಜುಬಿ ಮೊತ್ತಕ್ಕೆ ತಮ್ಮನ್ನು ಬಿಜೆಪಿಗೆ ಮಾರಿಕೊಂಡಿದ್ದಾರೆ ಮತ್ತು ಈಗ ನಮಗೆ ಹಿಂಸೆ ನೀಡುತ್ತಿದ್ದಾರೆ’ ಎಂದು ಖಾನ್ ಹೇಳಿದ್ದನ್ನು ಆಯೋಗವು ತನ್ನ ನೋಟಿಸಿನಲ್ಲಿ ಉಲ್ಲೇಖಿಸಿದೆ.

ಬಿಜೆಪಿ ಎ.10ರಂದು ವೀಡಿಯೊವೊಂದನ್ನು ಟ್ವೀಟಿಸಿದ್ದು,ಖಾನ್ ಅವರ ಈ ಹೇಳಿಕೆಯು ಅದರಲ್ಲಿ ಕೇಳಿಬಂದಿತ್ತು. ಖಾನ್ ಹೇಳಿಕೆಯು ಮಾದರಿ ನೀತಿ ಸಂಹಿತೆಯನ್ನು ಹಾಗೂ ಐಪಿಸಿಯ ಕಲಂ 153ಎ(1)(ದ್ವೇಷಕ್ಕೆ ಉತ್ತೇಜನ) ಮತ್ತು ಕಲಂ 505(2)(ಸಾರ್ವಜನಿಕ ಕುಚೇಷ್ಟೆ) ಅನ್ನು ಉಲ್ಲಂಘಿಸಿದೆ ಎಂದು ನೋಟಿಸಿನಲ್ಲಿ ತಿಳಿಸಿರುವ ಆಯೋಗವು,ಈ ಬಗ್ಗೆ ವಿವರಣೆಯನ್ನು ನೀಡುವಂತೆ ಅವರಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News