ಭಿಕ್ಷಾಟನೆ ಮಾಡುವ ಮಕ್ಕಳಿಗಾಗಿ ಮೊಬೈಲ್ ಶಾಲಾ ಬಸ್‍ಗೆ ಚಾಲನೆ

Update: 2021-04-17 15:49 GMT

ಬೆಂಗಳೂರು, ಎ.17: ಮನೆ ಬಾಗಿಲಿಗೆ ಶಾಲೆ ಕಾರ್ಯಕ್ರಮದಡಿಯಲ್ಲಿ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಭಿಕ್ಷಾಟನೆ ಮತ್ತು ವಸ್ತುಗಳ ಮಾರಾಟದಲ್ಲಿ ತೊಡಗಿರುವ ಮಕ್ಕಳಿಗಾಗಿ ಮೊಬೈಲ್ ಶಾಲಾ ಬಸ್‍ಗೆ ಇಂದು ಚಾಲನೆ ನೀಡಲಾಗಿದೆ.

ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹೈಕೋರ್ಟ್‍ನ ಸೆಂಟ್ರಲ್ ಪೋರ್ಟಿಕೊ ಸಮೀಪ ಮನೆ ಬಾಗಿಲಿಗೆ ಶಾಲೆ ವಾಹನಗಳಿಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಆರ್.ವಿ.ರವೀಂದ್ರನ್  ಹಾಗೂ ಹೈಕೋರ್ಟ್ ನ್ಯಾಯಾಧೀಶ ಅರವಿಂದ್‍ಕುಮಾರ್, ಬಿಬಿಎಂಪಿ ಆಯುಕ್ತ ಗೌರವ್‍ಗುಪ್ತ ಚಾಲನೆ ನೀಡಿದ್ದಾರೆ.

ನಗರದ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಭಿಕ್ಷಾಟನೆ ಮತ್ತು ವಸ್ತುಗಳ ಮಾರಾಟದಲ್ಲಿ ತೊಡಗಿರುವ ಮಕ್ಕಳಿಗಾಗಿ ಮೊಬೈಲ್ ಶಾಲೆಗಳನ್ನು ತೆರೆಯುವ ಸಲುವಾಗಿ ಬಿಬಿಎಂಪಿ ವ್ಯವಸ್ಥಾಪಕರು ನಿರ್ದೇಶಕರು ಬಿಎಂಟಿಸಿಗೆ 10 ಬಸ್‍ಗಳನ್ನು ಮೊಬೈಲ್ ಶಾಲೆಗಳಾಗಿ ಪರಿವರ್ತಿಸಿ ನೀಡುವಂತೆ ಕೋರಿದ್ದರು. ಅದರಂತೆ ಮಾ.22ರಂದು ಹತ್ತು ಮೊಬೈಲ್ ಬಸ್‍ಗಳನ್ನು ಬಿಬಿಎಂಪಿ ಸ್ವೀಕರಿಸಿದೆ.

ನಗರದ ಹೊಸಕೆರೆಹಳ್ಳಿ ಸ್ಲಂ(ದಕ್ಷಿಣ ವಲಯ) ಮತ್ತು ದೊಡ್ಡಗೊಲ್ಲರಹಟ್ಟಿ(ಆರ್.ಆರ್.ನಗರ ವಲಯ) ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೊಬೈಲ್ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಪ್ರತಿ ಬಸ್‍ಗೆ ಇಬ್ಬರು ಶಿಕ್ಷಕಿಯರು ಹಾಗೂ ಒಬ್ಬರು ಆಯಾ(ಗ್ರೂಪ್-ಡಿ) ನೌಕರರನ್ನು ನಿಯೋಜಿಸಲಾಗಿದೆ.

ಈ ಮೊಬೈಲ್ ಶಾಲಾ ಬಸ್‍ಗಳಲ್ಲಿ ಮಕ್ಕಳ ಸ್ನೇಹಿ ಚಿತ್ರಗಳನ್ನು ಕಲಿಕಾ ದೃಷ್ಟಿಯಿಂದ ಅಳವಡಿಸಲಾಗಿದೆ. ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಕಲಿಕೆಗೆ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ಒಳಗೊಂಡಿದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News