ನಿಘಂಟು ತಜ್ಞ, ಸಂಶೋಧಕ ಪದ್ಮಶ್ರೀ ಪ್ರೊ.ಜಿ.ವೆಂಕಟಸುಬ್ಬಯ್ಯ ನಿಧನ

Update: 2021-04-19 11:59 GMT

ಬೆಂಗಳೂರು, ಎ. 19: ಪದ್ಮಶ್ರೀ ಪುರಸ್ಕೃತ ಹಿರಿಯ ವಿದ್ವಾಂಸ, ಸಂಶೋಧಕ, ಭಾಷಾ ತಜ್ಞ, ಶತಾಯುಷಿ, ನಿಘಂಟು ತಜ್ಞರೆಂದು ಖ್ಯಾತಿ ಗಳಿಸಿದ್ದ ಪ್ರೊ.ಜಿ.ವೆಂಕಟಸುಬ್ಬಯ್ಯ(108) ಅವರು ನಿಧನರಾಗಿದ್ದಾರೆ.

ಸೋಮವಾರ ಬೆಳಗಿನಜಾವ 1.15ರ ಸುಮಾರಿಗೆ ವೆಂಕಟಸುಬ್ಬಯ್ಯ ಅವರು ವಯೋಸಹಜ ಕಾರಣದಿಂದ ಅಸುನೀಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ ಅವರನ್ನು ಒಂದು ವಾರದ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾಗಿದ್ದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಯಾಗುವುದಕ್ಕಿದ್ದರು. ಆದರೆ, ಬೆಳಗಿನಜಾವ ಅಸ್ವಸ್ಥರಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿ ವೆಂಕಟಸುಬ್ಬಯ್ಯ ಅನೇಕ ಕೃತಿಗಳನ್ನು ರಚಿಸಿದ್ದರು. ಕನ್ನಡ ಭಾಷೆ ಅಥವಾ ಪದಗಳ ಅರ್ಥವಿವರಣೆಗೆ ಹಾಗೂ ಭಾಷೆಗೆ ಸಂಬಂಧಿಸಿದ ಗೊಂದಲಗಳ ನಿವಾರಣೆಗೆ ಇಂದಿಗೂ ವೆಂಕಟಸುಬ್ಬಯ್ಯ ರಚಿಸಿದ ಕೃತಿಗಳನ್ನೇ ಆಧಾರವಾಗಿ ಬಳಸಲಾಗುತ್ತದೆ.

ಕನ್ನಡ ಭಾಷೆಗೆ ಶ್ರೀಯುತರು ನೀಡಿದ ಕೊಡುಗೆಗಾಗಿ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು. ಬೆಂಗಳೂರಿನಲ್ಲಿ 2011ರ ಫೆಬ್ರವರಿ 4ರಿಂದ 6ರವರೆಗೆ ನಡೆದ 77ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸುವರ್ಣ ಪದಕದೊಡನೆ ಎಂ.ಎ.ಪದವಿ, ನಂತರ ಬಿ.ಟಿ.ಪದವಿ ಗಳಿಸಿದ್ದರು. ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿ, ನಂತರ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ನಡೆದಾಡುವ ನಿಘಂಟು, ಶಬ್ದ ಬ್ರಹ್ಮ ಎಂದು ಜನಜನಿತರಾಗಿರುವ ವೆಂಕಟಸುಬ್ಬಯ್ಯ ಅವರು ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. 70 ಪುಸ್ತಕಗಳನ್ನು, 14 ನಿಘಂಟುಗಳನ್ನು ಪ್ರಕಟಗೊಳಿಸಿದ್ದಾರೆ. ನಿಘಂಟು ಪರಿವಾರ, ಅಕ್ರೂರ ಚರಿತ್ರೆ, ಇಗೋ ಕನ್ನಡ (ನಿಘಂಟು), ಗತಿ ಪ್ರಜ್ಞೆ, ಕನ್ನಡವನ್ನು ಉಳಿಸಿ ಬೆಳೆಸಿದವರು, ಅನುಕಲ್ಪನೆ, ಕರ್ಣ ಕರ್ಣಾಮೃತ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಶ್ರೀಯುತರ ಪಾಂಡಿತ್ಯಕ್ಕೆ ವಿದ್ಯಾಲಂಕಾರ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾಯಕ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಹಂಪಿ ವಿಶ್ವ ವಿದ್ಯಾನಿಲಯದ ನಾಡೋಜ ಪ್ರಶಸ್ತಿಗಳೂ ಸಂದಿವೆ. ಅಂತರ್‍ರಾಷ್ಟ್ರೀಯ ನಿಘಂಟು ಸಮ್ಮೇಳನಗಳಿಗೆ ಆಹ್ವಾನ ಪಡೆದ ಹೆಗ್ಗಳಿಕೆ ಅವರದು. ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ದಕ್ಷಿಣ ಭಾರತ ವಿಭಾಗಕ್ಕೆ ನೀಡಲಾಗುವ 2016-17ನೆ ಸಾಲಿನ ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದಿದ್ದರು ಎಂಬುದು ಅವರ ಭಾಷಾ ಪ್ರಾವಿಣಿತ್ಯತೆ ಮತ್ತು ಹಿರಿಮೆಗೆ ಸಾಕ್ಷಿಯಾಗಿದೆ.

ಅಂತ್ಯಕ್ರಿಯೆ: ಆಸ್ಪತ್ರೆಯಿಂದ ಬೆಳಗ್ಗೆಯೇ ಇಲ್ಲಿನ ಜಯನಗರ 7ನೆ ಬ್ಲಾಕ್‍ನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಚಾಮರಾಜಪೇಟೆಯ ಚಿತಾಗಾರದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಂಡು ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿಎಂ ಸೇರಿ ಗಣ್ಯರ ಕಂಬನಿ: ನಾಡಿನ ಹಿರಿಯ ಸಾಹಿತಿ, ಭಾಷಾತಜ್ಞ, ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ.ಅಶ್ವತ್ಥ ನಾರಾಯಣ ಸೇರಿದಂತೆ ಸಚಿವರು, ಶಾಸಕರು ಸೇರಿದಂತೆ ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ಅಪೂರ್ವ ರತ್ನ ಕಣ್ಮರೆ

ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ತಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಇಗೋ ಕನ್ನಡ ಸಾಮಾಜಿಕ ನಿಘಂಟು ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಅಪೂರ್ವ ಸಾಧನೆಗೈದವರು. ಕೊನೆಯವರೆಗೂ ಬರವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಬೆರಗು ಮೂಡಿಸುತ್ತದೆ. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ಅಪೂರ್ವ ರತ್ನವೊಂದು ಮರೆಯಾಯಿತು'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ತುಂಬಲಾರದ ನಷ್ಟ

'ಶಬ್ದಬ್ರಹ್ಮ'ನೆಂದೇ ಖ್ಯಾತಿ ಪಡೆದಿರುವ ಹಿರಿಯ ಸಾಹಿತಿ, ಭಾಷಾ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿಕೊರುವೆ. ಪ್ರೊ.ವೆಂಕಟಸುಬ್ಬಯ್ಯ ಅವರ ಕುಟುಂಬ ಮತ್ತು ಸಮಸ್ತ ಕನ್ನಡಿಗರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ'

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಶ್ರೇಷ್ಠ ವಿದ್ವಾಂಸ

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಕೆ. ಕಸಾಪ ಅಧ್ಯಕ್ಷರಾಗಿ, ಕಸಾಪಗೆ ಅಖಿಲ ಕರ್ನಾಟಕ ವ್ಯಾಪ್ತಿ ತಂದುಕೊಟ್ಟ ಹಿರಿಮೆ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ಸಲ್ಲುತ್ತದೆ. ನಾಡು-ನುಡಿಗೆ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು. ಅವರ ನಿಧನದಿಂದ ನಾಡು-ನುಡಿ ಶ್ರೇಷ್ಠ ವಿದ್ವಾಂಸರೊಬ್ಬರನ್ನು ರಾಜ್ಯ ಕಳೆದುಕೊಂಡಂತಾಗಿದೆ'

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News