ಬಿಜೆಪಿ ಸಂಸದ ಭಾಗಿಯಾಗಿರುವುದು ತಿಳಿದಾಗ ನಕಲಿ ಖಾತೆಗಳನ್ನು ತೆಗೆದುಹಾಕುವ ಯೋಜನೆ ಫೇಸ್ಬುಕ್ ಕೈಬಿಟ್ಟಿತ್ತು: ವರದಿ

Update: 2021-04-19 15:59 GMT

ಹೊಸದಿಲ್ಲಿ, ಎ.19: ಬಳಕೆದಾರರಿಗೆ ಪರಸ್ಪರ ತೊಡಗಿಕೊಳ್ಳಲು ಮತ್ತು ಸಂಬಂಧಗಳನ್ನು ರೂಪಿಸಿಕೊಳ್ಳುವ ವೇದಿಕೆಯಾಗಿ ಆರಂಭಗೊಂಡಿದ್ದ ಸಾಮಾಜಿಕ ಮಾಧ್ಯಮವು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚು ಸಂಕೀರ್ಣಗೊಂಡಿದೆ. ಇಂದು ಹಿಂದೆಂದೂ ಇಲ್ಲದಷ್ಟು ಶಕ್ತಿಶಾಲಿಯಾಗಿದ್ದು, ವಿಶ್ವಾದ್ಯಂತ ನಾಯಕರು ಸಾಮಾಜಿಕ ಮಾಧ್ಯಮವನ್ನು ಅಂಕೆಯಲ್ಲಿಡಲು ಪ್ರಯತ್ನಿಸುತ್ತಿದ್ದಾರೆ. ಅವರ ಈವರೆಗಿನ ಪ್ರಯತ್ನಗಳು ವಿಫಲಗೊಂಡಿವೆ. 

ಸಾಮಾಜಿಕ ಜಾಲತಾಣಗಳಲ್ಲಿ ಅಗ್ರಸ್ಥಾನದಲ್ಲಿರುವ ಫೇಸ್ಬುಕ್ ಕೆಲವು ಸಮಯದಿಂದ ಕಾನೂನು ರೂಪಕರ ನಿಗಾದಲ್ಲಿದೆ ಮತ್ತು ಈ ವರದಿಯು ಫೇಸ್ಬುಕ್ನ ಕಪಟ ನಾಟಕವನ್ನು ಬಯಲಿಗೆಳೆದಿದೆ. ಭಾರತದ ಆಡಳಿತಾರೂಢ ಬಿಜೆಪಿ ಸರಕಾರದ ಸಚಿವರು ಮತ್ತು ನಾಯಕರ ಜನಪ್ರಿಯತೆಯನ್ನು ಹೆಚ್ಚಿಸುವ ದಾಳವಾಗಿ ಫೇಸ್ಬುಕ್ ಕಾರ್ಯವೆಸಗುತ್ತಿದೆ ಎಂಬ ಆರೋಪವು ಕೇಳಿಬಂದಿದೆ. ಪ್ರತಿಷ್ಠಿತ ಸುದ್ದಿ ಮಾಧ್ಯಮ ‘ದಿ ಗಾರ್ಡಿಯನ್ ’ ಪ್ರಕಟಿಸಿರುವ ವರದಿಯಂತೆ ಫೇಸ್ಬುಕ್ನಲ್ಲಿಯ ನಕಲಿ ಖಾತೆಗಳ ಜಾಲಗಳ ಮೂಲಕ ಹಲವಾರು ಬಿಜೆಪಿ ಸಂಸದರ ಜನಪ್ರಿಯತೆಯನ್ನು ಹೆಚ್ಚಿಸಲಾಗುತ್ತಿದೆ.

ತನ್ನ ವೇದಿಕೆಯಲ್ಲಿ ನಕಲಿ ಖಾತೆಗಳ ಜಾಲವನ್ನು ಗಮನಿಸಿದ್ದ ಫೇಸ್ಬುಕ್ ಅವುಗಳನ್ನು ತೆಗೆದುಹಾಕಲು ಉದ್ದೇಶಿಸಿತ್ತು, ಆದರೆ ಬಿಜೆಪಿಯ ಸಂಸದರೋರ್ವರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಗೊತ್ತಾದ ಬಳಿಕ ಅದು ತನ್ನ ಉದ್ದೇಶದಿಂದ ಹಿಂದೆ ಸರಿದಿದೆ ಎಂದು ಫೇಸ್ಬುಕ್ನ ಮಾಜಿ ಡಾಟಾ ಸೈಂಟಿಸ್ಟ್ ಸೋಫಿಯಾ ಝಾಂಗ್ ಅವರನ್ನು ಉಲ್ಲೇಖಿಸಿ ವರದಿಯು ಹೇಳಿದೆ.

ದುರುದ್ದೇಶಪೂರಿತ ಜಾಲವನ್ನು ಬಹಿರಂಗಗೊಳಿಸಿರುವ ಝಾಂಗ್ ಸಮಸ್ಯೆಯನ್ನು ತೃಪ್ತಿಕರವಾಗಿ ನಿಭಾಯಿಸುವಲ್ಲಿ ಫೇಸ್ಬುಕ್ನ ಅದಕ್ಷತೆಯ ಮೇಲೆ ಬೆಳಕು ಚೆಲ್ಲಲು ಮುಂದಾಗಿದ್ದಾರೆ.

ಶ್ರೀಮಂತರು ಮತ್ತು ಪ್ರತಿಷ್ಠಿತರಿಗಾಗಿ ಒಂದು ಮತ್ತು ಇತರರಿಗಾಗಿ ಇನ್ನೊಂದು ನೀತಿಯನ್ನು ಹೊಂದಿರುವುದು ನ್ಯಾಯವಲ್ಲ,ಆದರೆ ಫೇಸ್ಬುಕ್ ಇದೇ ಕೆಲಸವನ್ನು ಮಾಡುತ್ತಿದೆ ಎಂದು ಝಾಂಗ್ ಹೇಳಿರುವುದನ್ನು ವರದಿಯು ಉಲ್ಲೇಖಿಸಿದೆ.

ಭಾರತದ ಮಾತ್ರವಲ್ಲ,ವಿಶ್ವಾದ್ಯಂತದ ರಾಜಕೀಯ ನಾಯಕರು ಮತ್ತು ಗಣ್ಯರು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಇಂತಹ ನಕಲಿ ಖಾತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಝಾಂಗ್ ಕಳೆದ ಸೆಪ್ಟೆಂಬರ್ನಲ್ಲಿ 6,600 ಶಬ್ದಗಳ ಪತ್ರದಲ್ಲಿ ನಿದರ್ಶನಗಳ ಸಹಿತ ಫೇಸ್ಬುಕ್ನ ಗಮನಕ್ಕೆ ತಂದಿದ್ದರು. ಈ ಬಗ್ಗೆ ಚೆನ್ನಾಗಿ ಅರಿವಿದ್ದರೂ ಫೇಸ್ಬುಕ್ ವೇದಿಕೆಯ ದುರುಪಯೋಗವನ್ನು ತಡೆಯಲು ಯಾವುದೇ ದೃಢವಾದ ಕ್ರಮವನ್ನು ಕೈಗೊಂಡಿಲ್ಲ.

ಈ ಆರೋಪಗಳ ಬಗ್ಗೆ ಗಾರ್ಡಿಯನ್ ಫೇಸ್ಬುಕ್ಗೆ ಪ್ರಶ್ನಿಸಿದ್ದು,ಅದರ ವಕ್ತಾರರು ಉತ್ತರದೊಂದಿಗೆ ಸಿದ್ಧವಾಗಿಯೇ ಇದ್ದರು. ‘ನಮ್ಮ ವೇದಿಕೆಯ ದುರುಪಯೋಗವನ್ನು ತಡೆಯಲು ನಮ್ಮ ಆದ್ಯತೆಗಳು ಮತ್ತು ಪ್ರಯತ್ನಗಳ ಬಗ್ಗೆ ಝಾಂಗ್ ಬೇರೆಯೇ ಆದ ಚಿತ್ರಣವನ್ನು ನೀಡಿದ್ದಾರೆ ಮತ್ತು ಇದನ್ನು ನಾವು ಎಷ್ಟಕ್ಕೂ ಒಪ್ಪಿಕೊಳ್ಳುವುದಿಲ್ಲ. ವಿಶ್ವಾದ್ಯಂತ ನಮ್ಮ ವೇದಿಕೆಯ ದುರುಪಯೋಗದ ಬಗ್ಗೆ ನಾವು ತೀವ್ರ ನಿಗಾ ವಹಿಸಿದ್ದೇವೆ ಮತ್ತು ಇದಕ್ಕಾಗಿಯೇ ವಿಶೇಷ ತಂಡಗಳನ್ನು ಹೊಂದಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ತಂಡಗಳು ಭಾರತದಲ್ಲಿ ಇಂತಹ ದುರ್ಬಳಕೆಗಳನ್ನು ಪತ್ತೆಹಚ್ಚಿದ್ದು,ಅದನ್ನು ನಾವು ಸಾರ್ವಜನಿಕವಾಗಿ ಹಂಚಿಕೊಂಡಿದ್ದೇವೆ. ನಮ್ಮ ನೀತಿಗಳಿಗೆ ಅನುಗುಣವಾಗಿ ಭಾರತದಲ್ಲಿ ಸ್ಪಾಮ್ ಮತ್ತು ಫೇಕ್ ಎಂಗೇಜ್ಮೆಂಟ್ಗಳನ್ನು ನಾವು ನಿರಂತರವಾಗಿ ಪತ್ತೆ ಹಚ್ಚಿದ್ದೇವೆ ಮತ್ತು ಅವುಗಳ ವಿರುದ್ಧ ಕ್ರಮಗಳನ್ನು ಕೈಗೊಂಡಿದ್ದೇವೆ ’ಎಂದು ಅವರು ತಿಳಿಸಿದರು.

2019ರಷ್ಟು ಹಿಂದೆಯೇ ಶಂಕಾಸ್ಪದ ಖಾತೆಗಳ (ಇವು ನಕಲಿ ಎನ್ನುವುದು ನಂತರ ತಿಳಿದುಬಂದಿತ್ತು) ನಾಲ್ಕು ಭಿನ್ನ ನೆಟ್ವರ್ಕ್ಗಳು ಝಾಂಗ್ ಅವರ ಕಣ್ಣಿಗೆ ಬಿದ್ದಿದ್ದು, ಆಡಳಿತಾರೂಢ ಬಿಜೆಪಿಯ ಕೆಲವರು ಸೇರಿದಂತೆ ರಾಜಕೀಯ ನಾಯಕರ ಖಾತೆಗಳೊಂದಿಗೆ ಲೈಕ್ಗಳು,ಕಮೆಂಟ್ ಗಳು ಮತ್ತು ಶೇರ್ ಗಳು ಸೇರಿದಂತೆ ನಕಲಿ ಸಂವಹನದಲ್ಲಿ ಇವು ತೊಡಗಿಕೊಂಡಿದ್ದನ್ನು ಅವರು ಗಮನಿಸಿದ್ದರು. ಬಿಜೆಪಿಯೊಂದೇ ರಾಡಾರ್ನಡಿಯ ರಾಜಕೀಯ ಪಕ್ಷವಲ್ಲ, ಮುಖ್ಯ ಪ್ರತಿಪಕ್ಷ ಕಾಂಗ್ರೆಸ್ನ ಕೆಲವು ನಾಯಕರೊಂದಿಗೂ ನಕಲಿ ಸಂವಹನದಲ್ಲಿ ತೊಡಗಿಕೊಂಡಿದ್ದ ನೆಟ್ವರ್ಕ್ಗಳು ಪತ್ತೆಯಾಗಿದ್ದವು. ಖಾತೆದಾರ ಗುರುತಿನ ರುಜುವಾತನ್ನು ಒದಗಿಸುವವರೆಗೆ ಇಂತಹ ಖಾತೆಗಳನ್ನು ತಡೆಹಿಡಿಯುವಂತೆ ತಾನು ಮಾಡಿಕೊಂಡಿದ್ದ ಮನವಿಗಳನ್ನು ಫೇಸ್ಬುಕ್ ಕಿವಿಗೇ ಹಾಕಿಕೊಂಡಿರಲಿಲ್ಲ ಮತ್ತು ಈ ನಕಲಿ ಸಂವಹನಗಳನ್ನು ತಡೆಯಲು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಝಾಂಗ್ ಹೇಳಿದ್ದಾರೆ.

ಬಿಜೆಪಿಯತ್ತ ಅನಗತ್ಯ ಒಲವು ತೋರಿಸುತ್ತಿರುವ ಆರೋಪವನ್ನು ಎದುರಿಸುತ್ತಿರುವ ಫೇಸ್ಬುಕ್ ಇದಕ್ಕೆ ವಿವರಣೆಯನ್ನು ನೀಡಬೇಕಾಗಿದೆ.

ಭಾರತದಲ್ಲಿ ಫೇಸ್ಬುಕ್ ವಿರುದ್ಧ ಇಂತಹ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷದ ಆಗಸ್ಟ್ನಲ್ಲಿ ಬಿಜೆಪಿಯ ಸಂಸದರು ಮತ್ತು ನಾಯಕರಿಂದ ದ್ವೇಷಭಾಷಣಗಳಿಗೆ ಸಂಬಂಧಿಸಿದಂತೆ ಉಲ್ಲಂಘನೆಗಳ ವಿರುದ್ಧ ಯಾವುದೇ ಕ್ರಮವನ್ನು ಫೇಸ್ಬುಕ್ ಕೈಗೊಳ್ಳುತ್ತಿಲ್ಲ ಎಂದು ವಾಲ್ಸ್ಟ್ರೀಟ್ ಜರ್ನಲ್ ತನ್ನ ವರದಿಯಲ್ಲಿ ಬೆಟ್ಟು ಮಾಡಿತ್ತು. ಇದು ಅಂತಿಮವಾಗಿ ಫೇಸ್ಬುಕ್ನ ಭಾರತೀಯ ಮುಖ್ಯಸ್ಥೆ ಅಂಖಿ ದಾಸ್ ಅವರು ಕಂಪನಿಯನ್ನು ತೊರೆಯುವಂತೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News