ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ 142ನೇ ಸ್ಥಾನ: ವರದಿ

Update: 2021-04-21 06:46 GMT

ಹೊಸದಿಲ್ಲಿ: ರಿಪೋಟ್ರ್ಸ್ ವಿದೌಟ್ ಬಾರ್ಡರ್ಸ್ ಎಂಬ ಅಂತರಾಷ್ಟ್ರೀಯ ಸಂಸ್ಥೆ ಮಂಗಳವಾರ ಬಿಡುಗಡೆಗೊಳಿಸಿದ ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 142ನೇ ಸ್ಥಾನದಲ್ಲಿದೆ.

2016ರಿಂದೀಚೆಗೆ ಭಾರತವು ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಕೆಳಕ್ಕೆ ತಳ್ಳಲ್ಪಡುತ್ತಲೇ ಇದೆ. ``ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ,'' ಎಂದು  ವರದಿ ಹೇಳಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸರಕಾರ ಪುನರಾಯ್ಕೆಗೊಂಡ ನಂತರ ಮಾಧ್ಯಮಗಳ ಮೇಲಿನ ಒತ್ತಡ ಇನ್ನಷ್ಟು ಅಧಿಕವಾಗಿದೆ ಎಂದು ವರದಿ ಹೇಳಿದೆಯಲ್ಲದೆ ಹಿಂದುತ್ವ ಅನುಯಾಯಿಗಳ ಆಕ್ರೋಶಕ್ಕೆ ತುತ್ತಾಗುವ ಪತ್ರಕರ್ತರಿಗೆ ಭಾರತದಲ್ಲಿ ಬೆದರಿಕೆಗಳೂ ಬರುತ್ತವೆ ಎಂದು ವರದಿ ತಿಳಿಸಿದೆ.

ವರದಿಯಲ್ಲಿ ಕಾಶ್ಮೀರದ ಸ್ಥಿತಿಯೂ ಉಲ್ಲೇಖವಾಗಿದೆ. "ಕಾಶ್ಮೀರದ  ಸ್ಥಿತಿ ಆತಂಕಕಾರಿಯಾಗಿದೆ. ಅಲ್ಲಿ ಪತ್ರಕರ್ತರಿಗೆ ಆಗಾಗ ಪೊಲೀಸರು ಮತ್ತು ಅರೆಸೇನಾ ಪಡೆಗಳಿಂದ ಕಿರುಕುಳವಾಗುತ್ತಿದೆ,'' ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಸೂಚ್ಯಂಕದಲ್ಲಿ ನಾರ್ವೇ ಅಗ್ರ ಸ್ಥಾನದಲ್ಲಿದ್ದು ನಂತರದ ಸ್ಥಾನಗಳಲ್ಲಿ ಫಿನ್‍ಲ್ಯಾಂಡ್ ಹಾಗೂ ಡೆನ್ಮಾರ್ಕ್ ದೇಶಗಳು ಇವೆ. ಎರಿಟ್ರಿಯಾ ದೇಶ ಕೊನೆಯ ಸ್ಥಾನದಲ್ಲಿದ್ದು ಅದಕ್ಕಿಂತ ಮೊದಲಿನ ಸ್ಥಾನಗಳಲ್ಲಿ ಉತ್ತರ ಕೊರಿಯಾ ಮತ್ತು ಟುರ್ಕ್‍ಮೆನಿಸ್ತಾನ್ ಇವೆ. ಚೀನಾ ಈ ಸೂಚ್ಯಂಕದಲ್ಲಿ 177ನೇ ಸ್ಥಾನದಲ್ಲಿದೆ.

ದಕ್ಷಿಣ ಏಷ್ಯಾದ ದೇಶಗಳ ಪೈಕಿ ನೇಪಾಳ 106ನೇ ಸ್ಥಾನದಲ್ಲಿ, ಶ್ರೀಲಂಕಾ 127ನೇ ಸ್ಥಾನದಲ್ಲಿ, ಪಾಕಿಸ್ತಾನ 145 ಹಾಗೂ ಬಾಂಗ್ಲಾದೇಶ 152ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News