ಮೆಟ್ರೋ ರೈಲಿಗೆ ಕೇಂದ್ರದ ಅನುಮೋದನೆ; ಬೆಂಗಳೂರು ನಗರದ ಚಿತ್ರಣವೇ ಬದಲು: ಸಂಸದ ತೇಜಸ್ವಿ ಸೂರ್ಯ

Update: 2021-04-21 12:37 GMT

ಬೆಂಗಳೂರು, ಎ. 21: ಸಂಚಾರ ದಟ್ಟಣೆ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರು ಮಹಾನಗರದ ಜನತೆಗೆ ಕೇಂದ್ರ ಸರಕಾರವು ಸಿಹಿಸುದ್ದಿ ನೀಡಿದ್ದು, ಔಟರ್ ರಿಂಗ್ ರೋಡ್ ಮತ್ತು ಏರ್‍ಪೋರ್ಟ್ ಮಾರ್ಗಗಳ ಮೆಟ್ರೋ ಹಾಗೂ ಸಬರ್ಬನ್ ರೈಲು ಯೋಜನೆಯ ಅನುಮೋದನೆಯಿಂದ ನಗರವು `ಫಾಸ್ಟ್ ಟ್ರಾಕ್'ಗೆ ಅಡಿಯಿಡಲಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟ ಬೆಂಗಳೂರು ಮೆಟ್ರೋ ಹಂತದ ಯೋಜನೆಗೆ ಅನುಮೋದನೆ ನೀಡಿದ್ದು, ಸಿಲ್ಕ್ ಬೋರ್ಡ್‍ನಿಂದ ಕೆ.ಆರ್. ಪುರಂ ಮತ್ತು ಕೆ.ಆರ್.ಪುರಂನಿಂದ ಹೆಬ್ಬಾಳ ಮಾರ್ಗವಾಗಿ ಏರ್‍ಪೋರ್ಟ್ ಮಾರ್ಗವು 14,788 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.

167 ಬಿಲಿಯನ್ ಡಾಲರ್ ಗಳ ಐಟಿ ಆದಾಯದಲ್ಲಿ ಬೆಂಗಳೂರು ನಗರವು ಶೇ.40ರಷ್ಟು ಪಾಲು ಹೊಂದಿದ್ದು, ಔಟರ್ ರಿಂಗ್ ರೋಡ್‍ನಲ್ಲಿರುವ ಐಟಿ ಕಂಪೆನಿಗಳಿಂದಲೇ ಶೇ.32ರಷ್ಟು ಕೊಡುಗೆ ಇದ್ದು, ಸದರಿ 17 ಕಿಮೀ ಮಾರ್ಗವು ಮೆಟ್ರೋ ರೈಲು ಸೌಲಭ್ಯದಿಂದ ವಂಚಿತವಾಗಿತ್ತು. ನಿಯಮಿತ ಸಾರಿಗೆ ಆಯ್ಕೆಗಳ ಅನ್ವಯ ಬೆಂಗಳೂರು ನಗರದಲ್ಲಿ 2008-2020ರ ಅವಧಿಯಲ್ಲಿ 53 ಲಕ್ಷ ಖಾಸಗಿ ವಾಹನಗಳ ಸೇರ್ಪಡೆಯಾಗಿದ್ದನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಬಹುದು ಎಂದರು.

ಈ ಕುರಿತು ಸಂಸತ್ತಿನಲ್ಲಿಯೂ ಮಾತನಾಡಿ, ತ್ವರಿತಗತಿಯಲ್ಲಿ ಈ ಎರಡೂ ಮೆಟ್ರೋ ಮಾರ್ಗಗಳಿಗೆ ಅನುಮೋದನೆ ನೀಡುವಂತೆ ಗಮನ ಸೆಳೆದಿದ್ದು, 2025ರ ಹೊತ್ತಿಗೆ ಈ ಮಾರ್ಗಗಳಲ್ಲಿ ಪ್ರತಿನಿತ್ಯ 7.5 ಲಕ್ಷ ಪ್ರಯಾಣಿಕರು ಸಂಚರಿಸುವ ಅಂದಾಜಿದೆ. ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆಯ ಬಹುಮುಖ್ಯ `ಜೀವನಾಡಿ'ಯಾಗಿ ಈ 2 ಮಾರ್ಗಗಳು ಕಾರ್ಯನಿರ್ವಹಿಸಲಿದ್ದು, ಯೋಜನೆಗೆ ಅನುಮೋದನೆ ನೀಡಿದೆ ಎಂದರು. ಸಬರ್ಬನ್ ರೈಲು ಮತ್ತು ಮೆಟ್ರೋ ಮಾರ್ಗಗಳ ಅನುಷ್ಠಾನದಿಂದ ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಕಾಣಲಿದೆ ಎಂದರು.

ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಇವೆರಡೂ ಮೆಟ್ರೋ ಮಾರ್ಗಗಳ ಅನುಷ್ಠಾನದಿಂದ, ಬೆಂಗಳೂರಿನ ಸಮಗ್ರ, ಔದ್ಯೋಗಿಕ, ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರಕಲಿದ್ದು, ಸಂಚಾರ ದಟ್ಟಣೆಗೆ ಬ್ರೇಕ್ ಬೀಳಲಿದೆ. ಮಾತ್ರವಲ್ಲ, ನಗರದ ಜನರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ತೇಜಸ್ವಿ ಸೂರ್ಯ ವಿವರಿಸಿದರು.

ಸಚಿವರಾದ ಆರ್. ಅಶೋಕ್, ಡಾ.ಕೆ.ಸುಧಾಕರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News