ದೇಶದಲ್ಲಿ 3.16 ಲಕ್ಷ ಹೊಸ ಕೊರೋನ ಸೋಂಕು

Update: 2021-04-22 03:45 GMT

ಹೊಸದಿಲ್ಲಿ : ಭಾರತವನ್ನು ಅಪ್ಪಳಿಸಿರುವ ಎರಡನೇ ಕೋವಿಡ್-19 ಅಲೆ ಮತ್ತೊಂದು ಮೈಲುಗಲ್ಲು ತಲುಪಿದ್ದು, ಬುಧವಾರ ದೇಶದಲ್ಲಿ 3.16 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ.

ವಿಶ್ವದ ಯಾವುದೇ ದೇಶದಲ್ಲಿ ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಕರಣ ದಾಖಲಾಗಿರುವುದು ಇದೇ ಮೊದಲು. ಕಳೆದ 24 ಗಂಟೆಗಳಲ್ಲಿ 2102 ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಒಂದೇ ದಿನ ದಾಖಲಾದ ಗರಿಷ್ಠ ಸಾವು ಇದಾಗಿದೆ.

ಭಾರತದಲ್ಲಿ ಬುಧವಾರ 3,15,925 ಹೊಸ ಪ್ರಕರಣಗಳು ವರದಿಯಾಗಿದ್ದು, ಮೊದಲ ಬಾರಿಗೆ 3 ಲಕ್ಷದ ಗಡಿ ದಾಟಿದೆ. ಇದಕ್ಕೂ ಮೊದಲು ವಿಶ್ವದಲ್ಲೇ ಅತ್ಯಧಿಕ ಎಂದರೆ 3,07,581 ಪ್ರಕರಣಗಳು ಅಮೆರಿಕದಲ್ಲಿ ಜ.8ರಂದು ವರದಿಯಾಗಿದ್ದವು.

ಭಾರತದಲ್ಲಿ ಎ. 4ರಂದು ದೈನಿಕ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದು, ಕೇವಲ 17 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಮೂರು ಲಕ್ಷವನ್ನು ದಾಟಿದೆ. ಈ ಅವಧಿಯಲ್ಲಿ ಪ್ರತಿದಿನ ಶೇಕಡ 6.76ರಷ್ಟು ಏರಿಕೆ ಕಂಡಿದೆ. ಇದು ಅಮೆರಿಕದಲ್ಲಿ ದೈನಿಕ ಪ್ರಕರಣಗಳ ಏರಿಕೆ ಪ್ರಮಾಣದ ನಾಲ್ಕು ಪಟ್ಟು ಅಧಿಕ.

ಆದರೆ ಪ್ರತಿ 10 ಲಕ್ಷ ಮಂದಿಯ ಪೈಕಿ ಕೋವಿಡ್ ಸೋಂಕು ತಗುಲಿದ ಪ್ರಮಾಣ ಅಮೆರಿಕದಲ್ಲಿ ಅತ್ಯಧಿಕ. ಅಮೆರಿಕದಲ್ಲಿ 10 ಲಕ್ಷ ಮಂದಿ ಪೈಕಿ 97881 ಮಂದಿಗೆ ಸೋಂಕು ತಗುಲಿದ್ದು, ಭಾರತದಲ್ಲಿ ಈ ಪ್ರಮಾಣ 11418. ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 132 ಮಂದಿ ಸೋಂಕಿನಿಂದ ಮೃತಪಟ್ಟಿದ್ದರೆ, ಅಮೆರಿಕದಲ್ಲಿ 1752 ಮಂದಿ ಬಲಿಯಾಗಿದ್ದಾರೆ ಎಂದು worldometers.info ಹೇಳಿದೆ.

ಆದರೆ ಕಳೆದ ಮೂರು ದಿನಗಳಿಂದ ದೇಶದಲ್ಲಿ ಪ್ರಕರಣಗಳ ಧನಾತ್ಮಕತೆ ದರ 19.2% ಇರುವುದು ಆತಂಕಕ್ಕೆ ಕಾರಣವಾಗಿದೆ. ಬುಧವಾರ ಉತ್ತರ ಪ್ರದೇಶದಲ್ಲಿ 33214 ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಹೊರತುಪಡಿಸಿದರೆ ರಾಜ್ಯವೊಂದರಲ್ಲಿ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ. 17 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗಿನ ಗರಿಷ್ಠ ಪ್ರಕರಣ ಬುಧವಾರ ವರದಿಯಾಗಿದೆ. ಕರ್ನಾಟಕ (23558), ಕೇರಳ (22414) ಇತರ ರಾಜ್ಯಗಳಲ್ಲೂ 20 ಸಾವಿರಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News