ಬೆಂಗಳೂರಿನ ಚಿತಾಗಾರಗಳ ಮುಂದೆ ಸರತಿ ಸಾಲಿನಲ್ಲಿ ಆಂಬ್ಯುಲೆನ್ಸ್ ಗಳು: ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

Update: 2021-04-22 14:56 GMT

ಬೆಂಗಳೂರು, ಎ.22: ಪಾಲಿಕೆಯ ಎಲ್ಲ 12 ವಿದ್ಯುತ್ ಚಿತಾಗಾರಗಳ ಮುಂದೆಯೂ ಕೊರೋನ ಸೋಂಕಿನಿಂದ ಜೀವ ಕಳೆದುಕೊಂಡವರ ಶವಗಳನ್ನು ಹೊತ್ತ ಆಂಬ್ಯುಲೆನ್ಸ್ ಗಳು ಸಾಲು ಸಾಲಾಗಿ ನಿಂತಿದ್ದು, ಮತ್ತೊಂದು ಕಡೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಜತೆಗೆ ಅಂತಿಮ ಸಂಸ್ಕಾರಕ್ಕೆ ರಾತ್ರಿ, ಹಗಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೋನ ಸೋಂಕಿತರು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ ಹಾಗೂ ಮೃತರನ್ನು ಸಕಾಲದಲ್ಲಿ ಸುಡಲು ಸ್ಮಶಾನದಲ್ಲಿ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ/

ಕೆಂಗೇರಿ, ಸುಮನಹಳ್ಳಿ, ಪೀಣ್ಯ, ಮೇಡಿ ಅಗ್ರಹಾರ, ಹೆಬ್ಬಾಳ ಕೆಂಪಾಪುರ, ಕೂಡ್ಲು, ಪಣತ್ತೂರು, ಕಲ್ಲಹಳ್ಳಿ, ಹರಿಶ್ಚಂದ್ರಘಾಟ್, ಮೈಸೂರು ರಸ್ತೆ, ಬನಶಂಕರಿ, ವಿಲ್ಸನ್ ಗಾರ್ಡನ್ ಚಿತಾಗಾರಗಳ ಮುಂದೆ ಸರತಿ ಸಾಲಿನಲ್ಲಿ ಆಂಬ್ಯುಲೆನ್ಸ್ ಗಳು ನಿಂತಿವೆ. ಚಿತಾಗಾರಗಳ ಸಿಬ್ಬಂದಿಗಳು ಶವಗಳನ್ನು ಸುಡುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇದರ ಮಧ್ಯೆ ವಿದ್ಯುತ್ ಪದೇ ಪದೇ ಕೈಕೊಡುತ್ತಿದೆ. ಮೃತದೇಹ ದಹನ ಮಾಡಲು ಅಧಿಕಾರಿಗಳು, ರಾಜಕಾರಣಿಗಳು ಕರೆ ಮಾಡಿ ಪ್ರಭಾವ ಬಳಸಿ ತಮ್ಮ ಸಂಬಂಧಿಕರ ಮೃತದೇಹ ಮೊದಲು ದಹನ ಮಾಡಿ ಎನ್ನುತ್ತಿದ್ದಾರೆ ಎಂದು ದೂರಲಾಗಿದ್ದು, ಇದರಿಂದ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಸಿಬ್ಬಂದಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಜನಸಾಮಾನ್ಯರು ದಿನಗಟ್ಟಲೇ ಕಾದು ಕುಳಿತುಕೊಂಡರೂ ಮೃತದೇಹಗಳು ದಹನ ಆಗುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 'ಹತ್ತಾರು ಆಸ್ಪತ್ರೆ ತಿರುಗಿದರೂ ಬೆಡ್ ಸಿಗಲಿಲ್ಲ. ಒಂದು ಆಸ್ಪತ್ರೆಯಲ್ಲಿ ಕಾಲಿಗೆ ಬಿದ್ದರೂ ಬೆಡ್ ಕೊಡಲಿಲ್ಲ. ಕೊನೆಗೆ ವಿಜಯನಗರದ ಆಸ್ಪತ್ರೆಗೆ ದಾಖಲಿಸಿದರೆ ಒಂದೇ ದಿನಕ್ಕೆ 1.14 ಲಕ್ಷ ಬಿಲ್ ಮಾಡಿದ್ದಾರೆ. ಆದರೂ ಆಕ್ಸಿಜನ್ ಸಿಗದೆ ಸಾವನ್ನಪ್ಪಿದರು. ಎ.21ರ ರಾತ್ರಿ 10 ಗಂಟೆಯಿಂದ ಸುಮನಹಳ್ಳಿ ಚಿತಾಗಾರದ ಬಳಿ ಬಂದು ಪೊಲೀಸ್ ಸಿಬ್ಬಂದಿ ಕಾಯುತ್ತಿದ್ದರು. ಆದರೂ ಎ.22ರ ಮಧ್ಯಾಹ್ನ ಆದರೂ ಅಂತ್ಯಕ್ರಿಯೆ ನೆರವೇರಿಸಲು ಆಗಲಿಲ್ಲ ಎಂದು ಚಿತಾಗಾರದ ಬಳಿ ಇದ್ದವರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಒಂದು ಶವವನ್ನು ದಹನ ಮಾಡಲು ಕನಿಷ್ಠ 2 ರಿಂದ 3 ಗಂಟೆ ಬೇಕಾಗುತ್ತದೆ. ಈ ಹಿಂದೆ 2 ರಿಂದ 3 ಶವಗಳ ಸಂಸ್ಕಾರ ನಡೆಯುತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ಪ್ರತಿ ಚಿತಾಗಾರದಲ್ಲೂ 20 ರಿಂದ 30 ಶವಗಳನ್ನು ಸುಡುತ್ತಿದ್ದರೂ ಸಾಕಾಗುತ್ತಿಲ್ಲ. ಚಿತಾಗಾರದ ಸಿಬ್ಬಂದಿ ಅಂತ್ಯ ಸಂಸ್ಕಾರ ನೆರವೇರಿಸಿ ಹೈರಾಣಾಗುತ್ತಿದ್ದಾರೆ.

ಇದರ ಮಧ್ಯೆ ಆಂಬ್ಯುಲೆನ್ಸ್ ನವರು ಮೃತದೇಹಗಳನ್ನು ಸಾಗಿಸಲು ಬೇಕಾಬಿಟ್ಟಿ ಹಣ ಕೇಳುತ್ತಿರುವ ಘಟನೆಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ರಾಜಧಾನಿಯಲ್ಲಿ ಕೊರೋನ ಸಾವುಗಳು ಒಂದೆಡೆಯಾದರೆ ಈ ಪರಿಸ್ಥಿತಿಯ ಲಾಭ ಪಡೆಯಲು ಆಂಬ್ಯುಲೆನ್ಸ್ ಚಾಲಕರು 15 ರಿಂದ 20 ಸಾವಿರ ರೂ.ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಹೆಣ ಸಾಗಿಸಲು ಎ.21ರಂದು ಮಹಿಳೆಯೊಬ್ಬರಿಂದ 60 ಸಾವಿರ ರೂ. ಬೇಡಿಕೆ ಇಟ್ಟಾಗ ಆ ಮಹಿಳೆ ತನ್ನ ತಾಳಿ ಮಾರಲು ಮುಂದಾಗಿದ್ದುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಅನೇಕ ಮನಕಲಕುವ ಘಟನೆಗಳು ನಡೆದಿವೆ.

ಪ್ರತಿ ಚಿತಾಗಾರದ ಮುಂದೆ ಸಂಬಂಧಿಕರ ಆಕ್ರಂದನ ಹೇಳ ತೀರದಾಗಿದೆ. ತಾಯಿಯನ್ನು ಕಳೆದುಕೊಂಡ ಮಗಳು, ಅಪ್ಪನನ್ನು ಕಳೆದುಕೊಂಡ ಮಗ, ಸಂಬಂಧಿಕರನ್ನು ಕಳೆದುಕೊಂಡವರು, ಸತ್ತವರನ್ನು ಸಮಾಧಾನವಾಗಿ ಕಳುಹಿಸಿಕೊಡಲೂ ಸಾಧ್ಯವಾಗುತ್ತಿಲ್ಲ ಎಂಬ ಗೋಳು ಅಲ್ಲಲ್ಲಿ ಕಂಡುಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News