ಬೆಂಗಳೂರು ನಗರದಲ್ಲಿ ಐಸಿಯು ಹಾಸಿಗೆ ಸಿಗದೆ ಸಾವು ಪ್ರಕರಣ ಹೆಚ್ಚಳ

Update: 2021-04-22 19:04 GMT

ಬೆಂಗಳೂರು, ಎ.22: ಬೆಂಗಳೂರು ನಗರದಲ್ಲಿ ಕೋವಿಡ್‍ನಿಂದ ತೀವ್ರ ಸಮಸ್ಯೆಗೆ ಈಡಾಗುತ್ತಿರುವ ರೋಗಿಗಳಿಗೆ ಐಸಿಯು ಹಾಸಿಗೆ ಸಿಗದೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ತಮ್ಮವರನ್ನು ಕಳೆದುಕೊಳ್ಳುತ್ತಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ನಗರದಲ್ಲಿ ದಿನೇ ದಿನೇ ನಗರದಲ್ಲಿ ಐಸಿಯು ಹಾಸಿಗೆಗಳ ಬೇಡಿಕೆ ಹೆಚ್ಚುತ್ತಿದ್ದು, ಕೊರತೆ ಉಂಟಾಗಿದೆಯೆಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್‍ಗುಪ್ತ ಒಪ್ಪಿಕೊಂಡಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ನಗರದ ಪ್ರಮುಖ ಆಸ್ಪತ್ರೆಗಳಿಗೆ ಶೇ.50 ಹಾಸಿಗೆಗಳನ್ನು ಮೀಸಲಿಡಬೇಕೆಂಬ ಸರಕಾರದ ಆದೇಶ ಇದ್ದಾಗಲೂ ಆಸ್ಪತ್ರೆಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಕೋವಿನ ಸಾವಿನ ಪ್ರಕರಣ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಬಿಡುವಿಲ್ಲದ ಚಿತಾಗಾರಗಳು: ಪ್ರತಿದಿನ ಕೋವಿಡ್‍ನಿಂದ ಬೆಂಗಳೂರು ನಗರದಲ್ಲಿಯೇ 70-80 ಮಂದಿ ಸಾವನ್ನಪ್ಪುತ್ತಿದ್ದಾರೆ. ಮೃತ ದೇಹಗಳ ಅಂತ್ಯ ಸಂಸ್ಕಾರವು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ನಗರದಲ್ಲಿರುವ ಪ್ರತಿ ಚಿತಾಗಾರದ ಮುಂದೆ ಅಂಬುಲೆನ್ಸ್‍ಗಳು ಸಾಲುಗಟ್ಟಿ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ.

ನಗರದಲ್ಲಿ ಬೊಮ್ಮನಹಳ್ಳಿ ವಲಯದಲ್ಲಿರುವ ಕೂಡ್ಲು ಚಿತಾಗಾರ, ಮಹಾದೇವಪುರ ವಲಯದ ಪಣತ್ತೂರು ಚಿತಾಗಾರ, ಯಲಹಂಕ ವಲಯದ ಮೇಡಿ ಅಗ್ರಹಾರ ಚಿತಾಗಾರ, ಕೆಂಗೇರಿ ವಲಯದ ಆರ್.ಆರ್.ನಗರ ಚಿತಾಗಾರ, ಬನಶಂಕರಿ ಚಿತಾಗಾರ, ಸುಮನಹಳ್ಳಿ ಚಿತಾಗಾರ ಹಾಗೂ ದಾಸರಹಳ್ಳಿಯ ಚಿತಾಗಾರಗಳಲ್ಲಿ ಇಡೀ ರಾತ್ರಿ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಯುತ್ತಿವೆ.

ನಾನು ಕಳೆದ 25 ವರ್ಷಗಳಿಂದ ಚಿತಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಿತಾಗಾರಗಳಿಗೆ ಹೀಗೆ ರಾಶಿ ರಾಶಿ ಮೃತದೇಹಗಳು ಒಮ್ಮೆಲೆ ಬರುತ್ತವೆ ಎಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ನಾವು ದಿನಪೂರ್ತಿ ಕಾರ್ಯನಿರ್ವಹಿಸಿದರು ಪ್ರತಿದಿನ ಬರುವ ಎಲ್ಲ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ನಮಗೂ ಹೆಚ್ಚಿನ ಒತ್ತಡ ಆಗುತ್ತಿದೆ. ಆದರೂ ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇವೆಂದು ಕೂಡ್ಲು ಚಿತಾಗಾರದ ಕಾರ್ಮಿಕರೊಬ್ಬರು ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

ಪೋಷಕರ ಆಕ್ರಂದನ: ಒಂದು ದಿನದ ಹಿಂದೆ ಸರಿಯಿದ್ದ ಮಕ್ಕಳು ಕೆಲವೇ ಗಂಟೆಗಳಲ್ಲಿ ತಮ್ಮ ಕಣ್ಣೆದುರಲ್ಲೇ ಸಾವನ್ನಪ್ಪುತ್ತಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮವರಿಗೆ ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿದ್ದಾರೇನೋ. ಆದರೆ, ಸರಕಾರ ಕೋವಿಡ್‍ಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡದೆ ತಮ್ಮವರನ್ನು ಕಳೆದಕೊಳ್ಳುತ್ತಿದ್ದೇವೆಂಬ ಭಾವನೆ ಪೋಷಕರಲ್ಲಿ ಮೂಡಿದೆ. ಈ ಸಂಬಂಧ ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಬಿಗಿ ನಿಲುವು ತಾಳಬೇಕಿದೆ: ರಾಜ್ಯ ಸರಕಾರ ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕೆಂಬ ಆದೇಶ ನೀಡಿ ಹಲವು ದಿನಗಳೇ ಕಳೆದಿವೆ. ಆದರೂ ಶೇ.90ರಷ್ಟು ಖಾಸಗಿ ಆಸ್ಪತ್ರೆಗಳು ಸರಕಾರದ ನಿಯಮವನ್ನು ಪಾಲಿಸುತ್ತಿಲ್ಲ. ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ ಸಾವಿಗೆ ಇದು ಸಹ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ವಿರುದ್ಧ ರಾಜ್ಯ ಸರಕಾರ ಕಠಿಣ ನಿಲುವು ತಾಳಬೇಕೆಂಬ ಒತ್ತಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ರಾಜ್ಯ ಸರಕಾರ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ಖಾಸಗಿ ಆಸ್ಪತ್ರೆಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡು ಕೋವಿಡ್ ಸೋಂಕಿತ ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ ಒದಗಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಇದನ್ನು ಹೊರತುಪಡಿಸಿದರೆ ಅನ್ಯ ಮಾರ್ಗವಿಲ್ಲ.

-ಪುರುಷೋತ್ತಮ, ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News