ಕೊರೋನ ಅಲೆ, ಹಸಿವಿನ ಬಲೆಯಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರು !

Update: 2021-04-24 09:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋವಾಕ್ಸಿನ್, ರೆಮ್‌ಡೆಸಿವಿರ್, ಆಕ್ಸಿಜನ್, ಆಸ್ಪತ್ರೆ ಬೆಡ್ ಇವೆಲ್ಲವುಗಳ ಕುರಿತಂತೆ ಯಾವುದೇ ಚಿಂತೆ ಇಲ್ಲದೆ, ದೈನಂದಿನ ಬದುಕಿನ ಕುರಿತಂತೆ ತಲೆಕೆಡಿಸಿಕೊಳ್ಳುತ್ತಿರುವ ವಲಸೆ ಕಾರ್ಮಿಕರು ಈ ಬಾರಿಯೂ ಸರಕಾರದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ‘ನಾವು ಕೊರೋನಕ್ಕೆ ಹೆದರುವುದಿಲ್ಲ, ಹಸಿವಿಗೆ ಹೆದರುತ್ತೇವೆ’ ಎಂದು ದೊಡ್ಡ ಧ್ವನಿಯಲ್ಲಿ ಇವರು ಮಾತನಾಡುತ್ತಿದ್ದರೂ, ಮಾಧ್ಯಮಗಳು ಕಿವುಡಾಗಿವೆ. ಆ ಧ್ವನಿಯನ್ನು ಸರಕಾರದೆಡೆಗೆ ತಲುಪಿಸುವ ವಾಹಕಗಳೇ ಇಲ್ಲವಾಗಿವೆ. ಎರಡನೇ ಅಲೆಯಲ್ಲಿ ಮತ್ತೆ ಕೊಚ್ಚಿ ಹೋಗುವ ಭೀತಿಯಲ್ಲಿದ್ದಾರೆ ವಲಸೆ ಕಾರ್ಮಿಕರು. ಊರಿನಿಂದ ಮರಳಿ ನಗರ ಸೇರಿ ತಮ್ಮ ಬದುಕೆಂಬ ಕಟ್ಟಡವನ್ನು ಮರು ನಿರ್ಮಾಣ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ ಕೊರೋನದ ಎರಡನೇ ಅಲೆಗೆ ಸಿಲುಕಿಕೊಂಡಿದ್ದಾರೆ. ಅತ್ತ ಹಳ್ಳಿಗೆ ಮರಳಲಾಗದೆ, ಇತ್ತ ನಗರದಲ್ಲಿ ಉಳಿಯಲಾಗದೆ ಅತಂತ್ರವಾಗಿದ್ದಾರೆ. ಕೊರೋನ ವಿರುದ್ಧ ನಿರ್ಬಂಧಗಳನ್ನು ಹೇರುತ್ತಿರುವ ಸಂದರ್ಭಗಳಲ್ಲಿ ವಲಸೆ ಕಾರ್ಮಿಕರನ್ನು ಈ ಬಾರಿಯೂ ಸರಕಾರ ಮರೆತಿದೆ.

ನಗರಗಳಿಗೆ ವಾಪಸಾಗಿರುವ ಕೆಲವು ವಲಸೆ ಕಾರ್ಮಿಕರಿಗೆ ಕಳೆದ ವರ್ಷ ಲಾಕ್‌ಡೌನ್ ಸಂದರ್ಭ ಎದುರಾದ ಅಮಾನವೀಯ ಪರಿಸ್ಥಿತಿಯನ್ನು ಮತ್ತೊಮ್ಮೆ ಎದುರಿಸಬೇಕಾಗಿದೆ ಎನ್ನುವ ಅಂಶ ಮನದಟ್ಟಾಗತೊಡಗಿದೆ. ಕೆಲವು ಕಾರ್ಮಿಕರು ಈಗಾಗಲೇ ತಮ್ಮ ಹಳ್ಳಿಗಳಿಗೆ ತೆರಳಿದ್ದರೆ, ಇನ್ನು ಕೆಲವರು ಅದೇ ದಾರಿ ಹಿಡಿಯಲು ನಿರ್ಧರಿಸಿದ್ದಾರೆ.ಕರ್ಫ್ಯೂ ಹಾಗೂ ಲಾಕ್‌ಡೌನ್ ಭೀತಿ ಕಾರ್ಮಿಕರಿಗೆ ವಲಸೆ ಹೋಗಲು ಪ್ರೇರೇಪಿಸಿರುವ ಪ್ರಮುಖ ಕಾರಣಗಳಾಗಿವೆ. ಮಹಾರಾಷ್ಟ್ರ, ಗುಜರಾತ್,ದಿಲ್ಲಿ, ಪಂಜಾಬ್, ಹರ್ಯಾಣ, ಕೇರಳ, ರಾಜಸ್ಥಾನ ಹಾಗೂ ಪಶ್ಚಿಮಬಂಗಾಳದಂತಹ ರಾಜ್ಯಗಳಿಂದ ಸಹಸ್ರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾರೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿಯೂ ಅಂತರ್‌ಜಿಲ್ಲಾ ವಲಸೆ ಪ್ರಕರಣಗಳು ವರದಿಯಾಗಿವೆ. ಈ ಕಾರ್ಮಿಕರಲ್ಲಿ ಹೆಚ್ಚಿನವರು ಕಟ್ಟಡ ನಿರ್ಮಾಣ, ಜವಳಿ, ವಜ್ರ ಕಟ್ಟಿಂಗ್, ಕಬ್ಬಿಣ ಮತ್ತು ಪ್ಲಾಸ್ಟಿಕ್ ಕಾರ್ಖಾನೆ, ದಿನಗೂಲಿ ಕಾರ್ಮಿಕರು, ಅಂಗಡಿಗಳು, ಹೊಟೇಲ್‌ಗಳು ಮತ್ತು ಸಣ್ಣ ಕೈಗಾರಿಕೆಗಳಲ್ಲಿ ದುಡಿಯುವವರಾಗಿದ್ದಾರೆ.

ಕಳೆದ ಬಾರಿ ತಮ್ಮ ಹಳ್ಳಿಗಳಿಗೆ ವಾಪಸಾದ ವಲಸೆ ಕಾರ್ಮಿಕರಿಗೆ ಎದುರಾದುದು ಬೃಹತ್ ನಿರುದ್ಯೋಗ ಸಮಸ್ಯೆ. ಹೀಗಾಗಿ ಸಾಲ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಯಿತು. ತಮ್ಮ ಸಾಲಗಳನ್ನು ಚುಕ್ತಾ ಮಾಡುವ ಉದ್ದೇಶದಿಂದ ಅವರು ಬೇರೆ ದಾರಿ ಕಾಣದೆ ದುಡಿಮೆಗಾಗಿ ನಗರಗಳಿಗೆ ಮರಳಬೇಕಾಯಿತು. ಆದರೆ ನಗರದಲ್ಲಿ ಹೆಚ್ಚು ಸಮಯ ಉಳಿಯಲಾಗುವುದಿಲ್ಲ ಎನ್ನುವುದು ಅವರಿಗೆ ಈಗ ಅರ್ಥವಾಗಿದೆ. ಹಾಗೆಂದು ಒಮ್ಮೆಲೆ ಎದ್ದು ಊರಿನೆಡೆಗೆ ಮುಖಮಾಡುವ ಸ್ಥಿತಿಯಲ್ಲೂ ಅವರಿಲ್ಲ. ಹಳ್ಳಿಗಳಿಗೆ ಮರಳಿದರೆ ಸಾಲಗಾರರನ್ನು ಅವರು ಎದುರಿಸಬೇಕಾಗುತ್ತದೆ. ಆದರೂ ಅವರಿಗೆ ಮರಳಿ ಊರಿಗೆ ತೆರಳುವುದು ಅನಿವಾರ್ಯವಾಗಿದೆ. ಈ ಬಾರಿ ಊರಿಗೆ ಹೊರಟವರು ಮತ್ತೆ ನಗರಕ್ಕೆ ಮರಳುವ ಸಾಧ್ಯತೆ ಕಡಿಮೆ.

2020ರಲ್ಲಿ ಭಾರತಕ್ಕೆ ಕೊರೋನ ಸೋಂಕು ಅಪ್ಪಳಿಸಿದಾಗ ಜನತೆಯಲ್ಲಿ ರೋಗದ ಕುರಿತಂತೆ ವ್ಯಾಪಕ ಭೀತಿ ನೆಲೆಸಿತ್ತು. ರೋಗದ ಬಗ್ಗೆ ಸಾಮಾಜಿಕವಾಗಿ ಕಳಂಕಿತ ಭಾವನೆಯಿತ್ತು. ಆದರೆ ಈ ಸಲದ ವಲಸೆ ಕಾರ್ಮಿಕರಲ್ಲಿ ರೋಗದ ಬಗ್ಗೆ ಅಂತಹ ಭೀತಿಯಿಲ್ಲ. ಅವರಿಗೆ ಈಗ ರೋಗದ ಕುರಿತು ತಿಳುವಳಿಕೆ ಹೆಚ್ಚಿದೆ ಹಾಗೂ ಸೋಂಕಿನಿಂದ ಹಲವರು ಚೇತರಿಸಿಕೊಳ್ಳುತ್ತಿರುವುದನ್ನು ಅವರು ಕಂಡಿದ್ದಾರೆ. ಅವರು ಹಸಿವಿನ ಕುರಿತಂತೆ ಹೆಚ್ಚು ಆತಂಕಿತರಾಗಿದ್ದಾರೆ. ಕಾರ್ಮಿಕರು ಈ ಬಾರಿ ಹಿಂದಿನಂತೆ ಕಾಲ್ನಡಿಗೆಯಿಂದ ಊರು ತಲುಪಬೇಕಾಗಿಲ್ಲ. ಬಸ್ ಹಾಗೂ ರೈಲಿನಂತಹ ರಸ್ತೆ ಸಾರಿಗೆ ಸೌಲಭ್ಯಗಳು ಇವೆ. ಆದರೂ, ರಾಜ್ಯಗಳು ತಮ್ಮ ಗಡಿ ಪ್ರದೇಶಗಳಲ್ಲಿ ಕಠಿಣವಾದ ನಿರ್ಬಂಧಗಳನ್ನು ಹೇರತೊಡಗಿವೆ. ಮಣಿಪುರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳು ತಮ್ಮ ಗಡಿಭಾಗಗಳಲ್ಲಿ ಜನರು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿವೆೆ. ಈ ಮಧ್ಯೆ ಮಧ್ಯಪ್ರದೇಶ ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆಯನ್ನು ಆರಂಭವಾಗಿದೆ. ಇದರ ಅರಿವಿಲ್ಲದ ಕಾರ್ಮಿಕರು ಈ ಸ್ಥಳಗಳನ್ನು ತಲುಪಿದಾಗ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ವಲಸೆ ಕಾರ್ಮಿಕರ ಮಹಾಪಲಾಯನ ನಡೆದಾಗ ಅವರನ್ನು ಗಡಿಪ್ರದೇಶಗಳಲ್ಲಿ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಮತ್ತು ಈ ಸ್ಥಳಗಳು ಸೋಂಕಿನ ಮಹಾಕೇಂದ್ರಗಳಾಗಿ ಬದಲಾಗುತ್ತವೆ.

ಅತಿ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ಉತ್ತರಪ್ರದೇಶದಂತಹ ರಾಜ್ಯಗಳು ವಲಸೆ ಆಯೋಗದ ರಚನೆಯನ್ನು ಘೋಷಿಸಿವೆ ಹಾಗೂ ವಲಸೆ ಕಾರ್ಮಿಕರ ದತ್ತಾಂಶವನ್ನು ಸಂಗ್ರಹಿಸಿವೆ. ಆದರೆ ಗಡಿಪ್ರದೇಶಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ನೆರವಾಗಲು ಯಾವುದೇ ವಿಶೇಷ ಸಹಾಯಕೇಂದ್ರಗಳಾಗಲಿ ಅಥವಾ ಹೆಲ್ಪ್‌ಡೆಸ್ಕ್‌ಗಳಾಗಲಿ ಎಲ್ಲಿಯೂ ಸ್ಥಾಪನೆಯಾಗಿಲ್ಲ. ಅಲ್ಲದೆ ವಲಸೆ ಕಾರ್ಮಿಕರಿಗೆ ಆಹಾರ ಅಥವಾ ಆರೋಗ್ಯ ಸೇವೆಗಳನ್ನು ಒದಗಿಸುವ ವ್ಯವಸ್ಥೆಯು ಅವರು ಗುಳೇ ಹೋಗುತ್ತಿರುವ ರಾಜ್ಯಗಳಲ್ಲಾಗಲಿ ಅಥವಾ ಅವರ ತವರು ರಾಜ್ಯಗಳಲ್ಲಾಗಲಿ ಸ್ಥಾಪಿಸಲಾಗಿಲ್ಲ.ಇತ್ತ ವಲಸೆ ಕಾರ್ಮಿಕರಿಗೆ ಅವರ ಉದ್ಯೋಗದಾತರಿಂದಲೂ ಯಾವುದೇ ರೀತಿಯ ಬೆಂಬಲ, ನೆರವು ದೊರೆಯುತ್ತಿಲ್ಲ. ಕುತೂಹಲಕರವೆಂದರೆ ಕೆಲವು ತಿಂಗಳುಗಳ ಹಿಂದೆ, ಈ ಉದ್ಯೋಗದಾತರಲ್ಲಿ ಹಲವರು ತಮ್ಮ ಉದ್ಯಮಗಳ ಕಾರ್ಯಚಟುವಟಿಕೆಗಳನ್ನು ಪುನಾರಂಭಿಸುವುದಕ್ಕಾಗಿ, ಈ ಕಾರ್ಮಿಕರನ್ನು ಅವರ ಹಳ್ಳಿಗಳಿಂದ ಮರಳಿ ಕರೆತರಲು ಹವಾನಿಯಂತ್ರಿತ ಬಸ್‌ಗಳು ಹಾಗೂ ಏರ್‌ಟಿಕೆಟ್‌ಗಳ ಏರ್ಪಾಡು ಮಾಡಿದ್ದರು. ಆದರೆ ಈ ಬಾರಿ ಈ ಬಡಪಾಯಿ ವಲಸೆ ಕಾರ್ಮಿಕರ ನೆರವಿಗೆ ಯಾರೂ ಬರುತ್ತಿಲ್ಲ. ಇತ್ತ ಸರಕಾರ ಕೂಡಾ ಅವರ ಪ್ರಯಾಣಕ್ಕೆ .ಯಾವುದೇ ರಿಯಾಯಿತಿ ಅಥವಾ ಆಹಾರ ಸಬ್ಸಿಡಿಗಳನ್ನು ಒದಗಿಸುತ್ತಿಲ್ಲ.

ಹಳ್ಳಿ ಸೇರಿರುವ ವಲಸೆ ಕಾರ್ಮಿಕರ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಕಾರ್ಮಿಕರ ನೆರವಿಗೆ ಸರಕಾರ ತುರ್ತಾಗಿ ಧಾವಿಸಬೇಕಾಗಿದೆ. ವಲಸೆಕಾರ್ಮಿಕರಿಗೆ ಅವರ ಹಳ್ಳಿಗಳಲ್ಲೇ ಉದ್ಯೋಗ ಒದಗಿಸುವುದಕ್ಕಾಗಿ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂನರೇಗಾ)ಯನ್ನು ಬಲಪಡಿಸಬೇಕಾಗಿದೆ. ಈ ಯೋಜನೆಗೆ ಹೆಚ್ಚುವರಿ ಅನುದಾನವನ್ನು ಘೋಷಿಸಬೇಕಾಗಿದ್ದು,ಕೆಲಸದ ಅವಧಿಯವನ್ನು 100ರಿಂದ 200 ದಿನಗಳಿಗೆ ಹೆಚ್ಚಿಸಬೇಕಾಗಿದೆ. ನಿರುದ್ಯೋಗ ಭತ್ತೆಯ ಪಾವತಿಯನ್ನು ಖಾತರಿಪಡಿಸಬೇಕಾಗಿದೆ ಹಾಗೂ ಒಂದು ಕುಟುಂಬದ ಎಲ್ಲಾ ವಯಸ್ಕ ಸದಸ್ಯರಿಗೆ ಪ್ರತ್ಯೇಕ ಉದ್ಯೋಗ ಕಾರ್ಡ್‌ಗಳನ್ನು ಜಾರಿಗೊಳಿಸುವುದಕ್ಕೆ ಅನುಮತಿ ನೀಡಬೇಕಾಗಿದೆ.ಎಂನರೇಗಾದಡಿ ವಲಸೆ ಕಾರ್ಮಿಕರಿಗೆ ಉದ್ಯೋಗಗಳನ್ನು ಒದಗಿಸುವ ಮೂಲಕ ಆರೋಗ್ಯ, ಶಿಕ್ಷಣ, ಮಾರುಕಟ್ಟೆ, ದಾಸ್ತಾನು ಮಳಿಗೆಗಳು, ಗೋದಾಮುಗಳ ಮೂಲಸೌಕರ್ಯವನ್ನು ಬಲಪಡಿಸಬಹುದಾಗಿದೆ. ನಗರಗಳನ್ನು ತೊರೆದು ಹಳ್ಳಿಗಳಿಗೆ ವಾಪಸಾಗಿರುವ ಹಾಗೂ ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗಿಗಳಾಗಿರುವ ಕಾರ್ಮಿಕರಿಗೆ ಉದ್ಯೋಗವನ್ನು ಕೊಡಿಸುವುದು ಅತ್ಯಂತ ಮುಖ್ಯವಾಗಿದೆ. ಇಲ್ಲದೆ ಇದ್ದಲ್ಲಿ ಗ್ರಾಮೀಣ ಮಟ್ಟದ ಸಾಮಾಜಿಕ ವ್ಯವಸ್ಥೆಯೇ ಕುಸಿಯುವ ಅಪಾಯವುಂಟಾಗಬಹುದು.

2020ರಲ್ಲಿ ಕೋವಿಡ್ ಹಾವಳಿ ಸಂದರ್ಭ ಹಳ್ಳಿಗಳಿಗೆ ಗುಳೇ ಹೋಗುತ್ತಿದ್ದ ವಲಸೆ ಕಾರ್ಮಿಕರಿಗೆ ಆಹಾರ ಹಾಗೂ ಪ್ರಯಾಣದ ವ್ಯವಸ್ಥೆ ಮಾಡಲು ಹಲವಾರು ನಾಗರಿಕ ಸಂಘಟನೆಗಳು ಹಾಗೂ ಸಹೃದಯಿಗಳು ಕೈಜೋಡಿಸಿದ್ದರು. ಆದರೆ ಎರಡನೇ ಅಲೆಯ ಸಂದರ್ಭ ಅಂತಹ ಯಾವುದೇರಚನಾತ್ಮಕ ಕಾರ್ಯಗಳು ಕಂಡುಬರದೆ ಇರುವುದು ವಿಷಾದಕರವಾಗಿದೆ.ಇಂತಹ ತ್ರಿಶಂಕು ಪರಿಸ್ಥಿತಿಯಿಂದ ವಲಸೆ ಕಾರ್ಮಿಕರನ್ನು ಪಾರು ಮಾಡಲು ರಾಜ್ಯಗಳ ನಡುವೆ ಪರಸ್ಪರ ಸಮನ್ವಯತೆ ಏರ್ಪಡಬೇಕಾಗಿದೆ. ಊರುಗಳಿಗೆ ವಾಪಸಾಗಿರುವ ವಲಸೆ ಕಾರ್ಮಿಕರು, ಅದರಲ್ಲೂ ವಿಶೇಷವಾಗಿ ಅವರ ಮಕ್ಕಳು ಜೀತಪದ್ಧತಿ ಅಥವಾ ಬಾಲ್ಯವಿವಾಹದಂತಹ ಸಾಮಾಜಿಕ ಅನಿಷ್ಠಗಳಿಗೆ ಸಿಲುಕದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ.ಈ ಸಂಕಷ್ಟಕರ ಸಮಯದಲ್ಲಿ ಸರಕಾರ ಹಾಗೂ ಸಾರ್ವಜನಿಕರು ತಮ್ಮ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ವಲಸೆ ಕಾರ್ಮಿಕರನ್ನು ಮಹಾಬಿಕ್ಕಟ್ಟಿನಿಂದ ಪಾರು ಮಾಡಲು ಶ್ರಮಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News