5 ತಿಂಗಳು, 400 ಸಾವು.... ಯಾಕೆ ಲೆಕ್ಕವಿಟ್ಟಿಲ್ಲ ನಾವು?

Update: 2021-04-28 07:07 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶಾದ್ಯಂತ ಹೆಣಗಳ ಲೆಕ್ಕ ಶುರುವಾಗಿದೆ. ಆಸ್ಪತ್ರೆಗಳನ್ನು, ಆಕ್ಸಿಜನ್‌ಗಳನ್ನು ಒದಗಿಸುವ ಭರವಸೆಗಳಿಂದ ಹಿಂದೆ ಸರಿದಿರುವ ರಾಜಕೀಯ ನಾಯಕರು, ಅಡ್ಡಿ ಆತಂಕಗಳಿಲ್ಲದ ಹೆಣ ಸುಡುವುದಕ್ಕೆ ವ್ಯವಸ್ಥೆ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಇರುವ ಸ್ಮಶಾನಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಇನ್ನಷ್ಟು ಸ್ಮಶಾನಗಳನ್ನು ಒದಗಿಸುವ ಆಶ್ವಾಸನೆ ಕೊಡುತ್ತಿದ್ದಾರೆ. ಬದುಕಿಸುವುದಕ್ಕಿಂತ ಸುಡುವುದರಲ್ಲೇ ಪ್ರವೀಣರಾಗಿರುವ ರಾಜಕಾರಣಿಗಳು, ‘ನೀವು ಸಾಯುವುದಕ್ಕೆ ಸಿದ್ಧರಾಗಿ. ನಾವು ಸುಡುವ ಕೆಲಸವನ್ನು ಮಾಡುತ್ತೇವೆ’ ಎಂದು ಜನರಿಗೆ ಪರೋಕ್ಷ ಸಂದೇಶ ರವಾನಿಸುತ್ತಿದ್ದಾರೆ. ಮಾಧ್ಯಮಗಳೂ ಹೆಣ ಎಣಿಸುವ ಕಾರ್ಯದಲ್ಲಿ ನಿರತವಾಗಿವೆಯೇ ಹೊರತು, ಕೇಂದ್ರ ಮತ್ತು ರಾಜ್ಯ ಸರಕಾರಗಳ ವೈಫಲ್ಯಗಳನ್ನು ಎತ್ತಿ ತೋರಿಸುವ ಸಾಹಸ ಮಾಡುತ್ತಿಲ್ಲ.

ಇದೇ ಸಂದರ್ಭದಲ್ಲಿ ದಿಲ್ಲಿಯ ಗಡಿಭಾಗದಲ್ಲಿ ರೈತರು ಯಾವುದೇ ಕೊರೋನ ಕಾರಣಗಳಿಲ್ಲದೆಯೇ ಸಾಯುತ್ತಿದ್ದಾರೆ. ಕಳೆದ ಐದು ತಿಂಗಳಲ್ಲಿ 400 ಮಂದಿ ರೈತರು ತಮ್ಮ ಹಕ್ಕಿಗೆ ಹೋರಾಡುತ್ತಾ ಪ್ರಾಣ ತ್ಯಾಗ ಮಾಡಿದ್ದಾರೆ. ಹೇಗೆ ಕೊರೋನ ಸಾವುಗಳನ್ನು ಸ್ವತಃ ಸರಕಾರವೇ ಪ್ರಾಯೋಜಿಸಿತೋ, ಹಾಗೆಯೇ ರೈತರ ಈ ಅನ್ಯಾಯದ ಸಾವುಗಳನ್ನೂ ಸರಕಾರವೇ ಪ್ರಾಯೋಜಿಸುತ್ತಿದೆ. ವೈದ್ಯಕೀಯ ವಲಯವನ್ನು ಸದೃಢಗೊಳಿಸದೇ ಇದ್ದರೆ ಏನಾಗುತ್ತದೆ ಎನ್ನುವುದನ್ನು ಈ ಕೊರೋನ ಕಾಲದಲ್ಲಿ ನಾವು ಕಲಿಯುತ್ತಿದ್ದೇವೆ. 2017ರಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಆಕ್ಸಿಜನ್ ಕೊರತೆಯಿಂದ 150ಕ್ಕೂ ಅಧಿಕ ಮಕ್ಕಳು ಸತ್ತರು. ಈ ಸಂದರ್ಭದಲ್ಲಿ, ಸ್ವಯಂ ಪ್ರೇರಿತರಾಗಿ ಖಾಸಗಿ ಸಂಸ್ಥೆಗಳಿಂದ ಆಕ್ಸಿಜನ್ ತಂದು ನೂರಾರು ಮಕ್ಕಳ ಪ್ರಾಣವನ್ನು ಡಾ. ಕಫೀಲ್ ಖಾನ್ ಅವರು ಉಳಿಸಿದರು. ಮಾತ್ರವಲ್ಲ, ಸರಕಾರದ ವೈಫಲ್ಯವನ್ನು ಮಾಧ್ಯಮಗಳ ಮುಂದೆ ತಂದರು. ಆದರೆ ಇದರ ಪ್ರತಿಫಲವಾಗಿ ಅವರಿಗೆ ದೊರಕಿದ್ದು ಜೈಲು ವಾಸ. ಯಾರು ಮಕ್ಕಳ ಪ್ರಾಣವನ್ನು ಉಳಿಸಲು ಹೋರಾಟ ನಡೆಸಿದರೋ, ಯಾರು ಆಕ್ಸಿಜನ್ ಕೊರತೆಯನ್ನು ದೇಶದ ಮುಂದೆ ಬಹಿರಂಗಪಡಿಸಿದರೋ ಅವರೇ ಅಷ್ಟೂ ಮಕ್ಕಳ ಸಾವಿನ ಹೊಣೆಯನ್ನು ಹೊರಬೇಕಾಯಿತು. ಇದೀಗ ದೇಶಾದ್ಯಂತ ಆಕ್ಸಿಜನ್ ಕೊರತೆ, ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿದೆ. ಕಫೀಲ್ ಖಾನ್ ಅಂದು ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಆತನನ್ನೇ ‘ಉಗ್ರ’ನೆಂದು ಬಿಂಬಿಸಿ ಜೈಲಿಗೆ ತಳ್ಳಿದವರೇ ಈ ಸಾವುಗಳ ಹೊಣೆಗಾರರಾಗಿದ್ದಾರೆ.

   ಕೃಷಿ ವಲಯವೂ ಆರೋಗ್ಯವಲಯದಂತೆ ಮಹತ್ವಪೂರ್ಣವಾದುದು. ರೈತರು ಕೃಷಿಯನ್ನು ಬೃಹತ್ ಕಂಪೆನಿಗಳಿಗೆ ಬಿಟ್ಟುಕೊಟ್ಟರೆ, ಭಾರತದ ಆಹಾರ ಭದ್ರತೆಯ ಮೇಲೆ ಅದು ಭಾರೀ ದುಷ್ಪರಿಣಾಮವನ್ನು ಬೀರಲಿದೆ. ಇಂತಹ ಸಂದರ್ಭದಲ್ಲಿ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ರೈತರು ಬೀದಿಗಿಳಿದಿದ್ದಾರೆ. ಕೊರೋನ ಇಡೀ ದೇಶವನ್ನು ಆತಂಕಕ್ಕೆ ತಳ್ಳಿದೆಯಾದರೂ, ರೈತರು ತಮ್ಮ ಧರಣಿಯಿಂದ ಹಿಂದೆ ಸರಿದಿಲ್ಲ. ಸರಿಯುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರಕಾರ ಇವರ ಬೇಡಿಕೆಯ ಕುರಿತಂತೆ ಗಾಢ ನಿರ್ಲಕ್ಷವನ್ನು ತಾಳಿದೆ. ಈ ನಿರ್ಲಕ್ಷಕ್ಕೆ ಸರಕಾರ ಭಾರೀ ದಂಡ ತೆರುವ ದಿನ ದೂರವಿಲ್ಲ. ಇದೇ ಸಂದರ್ಭದಲ್ಲಿ ಕೊರೋನವನ್ನು ಬಳಸಿಕೊಂಡು ರೈತರ ವಿರುದ್ಧ ಜನರನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಮಾಸ್ಕ್ ಧರಿಸುತ್ತಿಲ್ಲ, ಕೊರೋನ ಹರಡುತ್ತಿದ್ದಾರೆ ಎಂಬಿತ್ಯಾದಿ ಆರೋಪಗಳನ್ನು ಸರಕಾರ ಮಾಧ್ಯಮಗಳ ಮೂಲಕ ಮಾಡಿಸುತ್ತಿದೆ. ಕುಂಭಮೇಳ, ಚುನಾವಣಾ ರ್ಯಾಲಿಗಳ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಕೊರೋನಾ ಸಮಸ್ಯೆಯಾಗಲಿಲ್ಲ. ಆದರೆ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ಕೊರೋನ ಹರಡುವುದಕ್ಕೆ ಕಾರಣವಾಗುತ್ತಿದೆ ಎಂದು ಇವರು ಆತಂಕಪಡುತ್ತಿದ್ದಾರೆ. ಒಂದು ವೇಳೆ ಆತಂಕದಲ್ಲಿ ಪ್ರಾಮಾಣಿಕತೆಯಿದೆ ಎಂದಾದರೆ, ರೈತರ ಬೇಡಿಕೆಗೆ ಸರಕಾರ ಕಿವಿಯಾಗಬೇಕು. ಕಾರ್ಪೊರೇಟ್‌ಗಳ ಪರವಾಗಿರುವ, ಜನತೆಗೆ ವಿರುದ್ಧವಾಗಿರುವ ಕೃಷಿ ಕಾಯ್ದೆ ರದ್ದಾದರೆ ರೈತರು ತಕ್ಷಣ ತಮ್ಮ ಮನೆಗೆ ಹಿಂದಿರುಗಲಿದ್ದಾರೆ. ಯಾಕೆಂದರೆ ಅವರಿಗೆ ಮನೆಯಲ್ಲಿ ಮಾಡಲು ಸಾಕಷ್ಟು ಕಾರ್ಯವಿದೆ. ಇದು ಗೋಧಿ ಬೆಳೆಯ ಸುಗ್ಗಿಯ ಕಾಲವಾಗಿದೆ. ಬಳಿಕ ಟನ್ ಗಟ್ಟಲೆ ಧಾನ್ಯವನ್ನು ಪ್ಯಾಕ್ ಮಾಡಿ ಅವನ್ನು ಮಳೆಯಿಂದ ರಕ್ಷಿಸಿ ದಾಸ್ತಾನಿಡಬೇಕಿದೆ. ಮಂಡಿ(ಮಾರುಕಟ್ಟೆ)ಗೆ ರವಾನಿಸಬೇಕಿದೆ. ಇದೆಲ್ಲಾ ಕೆಲಸ ಮೇ ತಿಂಗಳಿನಲ್ಲಿ ನಡೆದ ಬಳಿಕ ಜೂನ್‌ನಲ್ಲಿ ಅವರು ಭತ್ತ ಬೆಳೆಯಲು ಸಿದ್ಧತೆ ನಡೆಸಬೇಕಿದೆ. ಭಾರತವನ್ನು ಆಹಾರ ಧಾನ್ಯದ ವಿಷಯದಲ್ಲಿ ಸ್ವಾವಲಂಬಿಯನ್ನಾಗಿಸಲು ಮತ್ತು ಉತ್ತಮ ಜೀವನೋಪಾಯಕ್ಕಾಗಿ ಅವರು ಇದನ್ನು ವರ್ಷಾನುಗಟ್ಟಲೆಯಿಂದ ಮಾಡುತ್ತಾ ಬಂದಿದ್ದಾರೆ. ಇದನ್ನು ಸರಕಾರ ಮರೆಯಬಾರದು. ಕೆಲ ವರ್ಷದ ಹಿಂದೆ ದೇಶಕ್ಕೆ ಮತ್ತೊಂದು ಬರದ ಛಾಯೆ ಆವರಿಸಿದಾಗ ‘ಹೆಚ್ಚು ಆಹಾರ ಬೆಳೆಯಿರಿ’ ಎಂಬ ಕಾರ್ಯಕ್ರಮವನ್ನು ಇದೇ ಸರಕಾರ ಆರಂಭಿಸಿತ್ತು. ಆಗ ರೈತರು, ಕೃಷಿ ಕಾರ್ಮಿಕರು ಅಪಾರ ಪರಿಶ್ರಮ ಪಟ್ಟು ಇದನ್ನು ಸಾಧಿಸಿದರು. ಕನಿಷ್ಠ ಇದಕ್ಕೆ ಕೃತಜ್ಞತೆ ಅರ್ಪಿಸಲಾದರೂ ರೈತರನ್ನು ಮತ್ತು ಕೃಷಿ ಕಾರ್ಮಿಕರ ಸರ್ವನಾಶ ಮಾಡುವ ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕಾಗಿದೆ. ಆದರೆ ಕೇಂದ್ರ ಸರಕಾರ ಬಲ ಪ್ರಯೋಗದಿಂದ ರೈತರ ಪ್ರತಿಭಟನೆಯನ್ನು ಸಮಾಪ್ತಿಗೊಳಿಸಲು ನಿರ್ಧರಿಸಿದಂತಿದೆ.

 ಆರೋಗ್ಯವಲಯ ಕಾರ್ಪೊರೇಟೀಕರಣವಾದ ಪರಿಣಾಮಗಳನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಕೊರೋನದಲ್ಲಿ ಎಷ್ಟು ದುಡ್ಡು ಬಾಚಲು ಸಾಧ್ಯ ಎಂದು ಆರೋಗ್ಯ ವಲಯದ ಬೃಹತ್ ಉದ್ಯಮಿಗಳು ಯೋಚಿಸುತ್ತಿದ್ದಾರೆ. ಲಸಿಕೆ, ಆಕ್ಸಿಜನ್, ಆಸ್ಪತ್ರೆಯ ಬೆಡ್‌ಗಳ ಬೆಲೆಗಳನ್ನು ಮಧ್ಯವರ್ತಿಗಳು ನಿರ್ಧರಿಸುತ್ತಿದ್ದಾರೆ. ಸರಕಾರ ಸಾರ್ವಜನಿಕ ಆಸ್ಪತ್ರೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರೆ ಇಂದು ಜನರು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಕೃಷಿಯ ನಿಯಂತ್ರಣ ಸಂಪೂರ್ಣ ಕಾರ್ಪೊರೇಟ್ ಪಾಲಾದರೆ ಅದರ ಪರಿಣಾಮವನ್ನು ದೇಶದ ರೈತರು ಮಾತ್ರವಲ್ಲ, ಅನ್ನ ತಿನ್ನುವ ಪ್ರತಿಯೊಬ್ಬರೂ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ, ರೈತರ ಬೇಡಿಕೆಯನ್ನು ಈಡೇರಿಸುವುದೆಂದರೆ, ದೇಶದ ಭವಿಷ್ಯವನ್ನು ಸದೃಢಗೊಳಿಸುವುದು. ಕೊರೋನದ ಈ ಆಪತ್ಕಾಲದಲ್ಲಿ ತಕ್ಷಣ ರೈತರ ಬೇಡಿಕೆಗಳಿಗೆ ಸ್ಪಂದಿಸಿ, ಅವರನ್ನೂ ದೇಶವನ್ನೂ ಸರಕಾರ ರಕ್ಷಿ ಬೇಕಾಗಿದೆ.

    ಮಳೆ, ಬಿಸಿಲು, ಚಳಿ ಮಾತ್ರವಲ್ಲದೆ ಕೊರೋನದಂತಹ ಸಾಂಕ್ರಾಮಿಕರೋಗಕ್ಕೂ ಮಣಿಯದೆ, 150ಕ್ಕೂ ಅಧಿಕ ದಿನಗಳಿಂದ ನಡೆಸುತ್ತಿರುವ ಈ ಧರಣಿ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಕೊರೋನ ನಿರ್ವಹಣೆಯ ವೈಫಲ್ಯದಿಂದ ಭಾರತ ವಿಶ್ವದ ಮುಂದೆ ತಲೆತಗ್ಗಿಸಬೇಕಾಯಿತು. ರೈತರ ಪ್ರತಿಭಟನೆಯ ವಿಷಯದಲ್ಲಿ ಸರಕಾರ ಇನ್ನಾದರೂ ಎಚ್ಚರಗೊಳ್ಳಬೇಕು. ಬಲವಂತದಿಂದ ಅವರನ್ನೇನಾದರೂ ಎಬ್ಬಿಸುವ ಪ್ರಯತ್ನ ನಡೆಸಿದರೆ ಅದು ದೊಡ್ಡ ದುರಂತವೊಂದಕ್ಕೆ ಕಾರಣವಾಗಬಹುದು. ಅನ್ನ ನೀಡಿದ ಕೈಗಳನ್ನು ಕತ್ತರಿಸಿದರೆ, ಅದರ ಪಾಪ ದೇಶದ ಬೆನ್ನ್ನುಹತ್ತದೇ ಬಿಡದು. ಪರಿಸ್ಥಿತಿ ಪ್ರತಿಕೂಲವಾಗಿದ್ದರೂ ರೈತರು ಬೆವರು ಸುರಿಸಿ ದೇಶದ ಜನರ ಬಳಕೆಗಾಗಿ ಆಹಾರ ಧಾನ್ಯ ಬೆಳೆಯುತ್ತಿದ್ದಾರೆ. ಅದರ ಋಣ ಆಳುವವರ ಮೇಲಿದೆ. ಅನ್ನ ಉಣ್ಣುವ ಪ್ರತಿಯೊಬ್ಬರ ಮೇಲೂ ಇದೆ. ಭಾರತದ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದೆ ನಿಜ. ಆದರೆ ಅದನ್ನು ರೈತರು ಮತ್ತು ಕಾರ್ಮಿಕರು ಜಂಟಿಯಾಗಿ ತೀರ್ಮಾನಿಸಬೇಕು. ಕೃಷಿ ಕಾಯ್ದೆಯನ್ನು ರದ್ದುಗೊಳಿಸಿದರೆ ಅಷ್ಟೇ ಸಾಕು. ಅದುವೇ ರೈತರ ಪಾಲಿಗೆ ಸರಕಾರ ಒದಗಿಸಬಹುದಾದ ತಕ್ಷಣದ ಆಕ್ಸಿಜನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News