#ResignModi ಹ್ಯಾಶ್ ಟ್ಯಾಗ್ ಬ್ಲಾಕ್ ಮಾಡಿ ಪೇಚಿಗೀಡಾದ ನಂತರ ಮರುಸ್ಥಾಪಿಸಿದ ಫೇಸ್ ಬುಕ್

Update: 2021-04-29 18:27 GMT

ಹೊಸದಿಲ್ಲಿ, ಎ.29: ಕೊರೋನ ಸೋಂಕನ್ನು ಭಾರತ ನಿರ್ವಹಿಸುತ್ತಿರುವುದನ್ನು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿರುವ #resignmodi ಹ್ಯಾಶ್ಟ್ಯಾಗ್ ಅನ್ನು ಬುಧವಾರ ರಾತ್ರಿ ಫೇಸ್ಬುಕ್ ತಾತ್ಕಾಲಿಕವಾಗಿ ಬ್ಲಾಕ್ ಮಾಡಿತ್ತು. ಈ ಬಗ್ಗೆ ಬಳಕೆದಾರರು ಟ್ವಿಟರ್ನಲ್ಲಿ ಗಮನ ಸೆಳೆದ ಬಳಿಕ ‘ಪ್ರಮಾದವಶಾತ್ ಹೀಗಾಗಿದೆ’ ಎಂದು ಸಮಜಾಯಿಷಿ ನೀಡಿ ಮರುಸ್ಥಾಪಿಸಿದೆ. ಭಾರತ ಸರಕಾರ ಹೇಳಿದೆ ಎಂದು ಬ್ಲಾಕ್ ಮಾಡಿಲ್ಲ, ಪ್ರಮಾದವಶಾತ್ ಹ್ಯಾಶ್ಟ್ಯಾಗ್ ಬ್ಲಾಕ್ ಆಗಿದೆ ಎಂದು ಫೇಸ್ಬುಕ್ ನ ವಕ್ತಾರರು ಹೇಳಿರುವುದಾಗಿ ‘ದಿ ಗಾರ್ಡಿಯನ್’ 
ವರದಿ ಮಾಡಿದೆ. 

ಈ ಹ್ಯಾಶ್ಟ್ಯಾಗ್ಗೆ ಬಳಕೆದಾರರು ಹುಡುಕಾಟ ನಡೆಸಿದಾಗ ಫೇಸ್ಬುಕ್ನಲ್ಲಿ ಪ್ರಕಟವಾದ ಸಂದೇಶದಲ್ಲಿ ‘ಈ ಪೋಸ್ಟ್ನಲ್ಲಿರುವ ಕೆಲವು ಅಂಶಗಳು ನಮ್ಮ ಸಮುದಾಯ ಮಾನದಂಡ’ಕ್ಕೆ ವಿರುದ್ಧವಾಗಿರುವ ಕಾರಣ ಅವರನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಬಳಕೆದಾರರು ಟ್ವಿಟರ್ನಲ್ಲಿ ಗಮನ ಸೆಳೆದಾಗ ‘ ಹ್ಯಾಶ್ಟ್ಯಾಗ್ ಅನ್ನು ಮರುಸ್ಥಾಪಿಸಲಾಗಿದೆ. ಏನಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಫೇಸ್ಬುಕ್ ಸಂವಹನ ನೀತಿ ನಿರ್ದೇಶಕ ಆ್ಯಂಡಿ ಸ್ಟೋನ್ ಟ್ವೀಟ್ ಮಾಡಿದ್ದಾರೆ.

#resignmodi ಹ್ಯಾಶ್ಟ್ಯಾಗ್ ಇರುವ ಪೋಸ್ಟ್ಗಳು ಮಾತ್ರ ಸ್ಥಗಿತವಾಗಿದೆ. ಬಳಕೆದಾರರು ಕಂಟೆಂಟ್ಗಳನ್ನು ಪೋಸ್ಟ್ ಮಾಡಬಹುದಾಗಿತ್ತು. ಭಾರತ, ಅಮೆರಿಕ, ಕೆನಡಾ, ಇಂಗ್ಲೆಂಡ್ನಲ್ಲಿ ಹ್ಯಾಶ್ಟ್ಯಾಗ್ ಬ್ಲಾಕ್ ಆಗಿತ್ತು ಎಂದು ವರದಿ ಹೇಳಿದೆ. ದೇಶದಲ್ಲಿ ಈಗ ಕೊರೋನ ಸೋಂಕಿನ ಎರಡನೇ ಅಲೆ ಉಲ್ಬಣಾವಸ್ಥೆಗೆ ತಲುಪಿದ್ದು ಸೋಂಕು ಪ್ರಕರಣ ಅಪಾಯಕಾರಿ ಮಟ್ಟಕ್ಕೇರಿದೆ. ಸತತ 7ನೇ ದಿನ 3 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣ ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,79,97,267ಕ್ಕೇರಿದೆ.

ಸೋಂಕಿನ ಸಮಸ್ಯೆಯನ್ನು ಸರಕಾರ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸುತ್ತಿದ್ದು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದು ಹ್ಯಾಶ್ಟ್ಯಾಗ್ ಬಳಸಿ ಆಗ್ರಹಿಸುತ್ತಿದ್ದಾರೆ.
 
ಫೇಸ್ಬುಕ್ನ ಕಾರ್ಯನಿರ್ವಹಣೆ ಈ ಹಿಂದೆಯೂ ವ್ಯಾಪಕ ಟೀಕೆಗೆ ಒಳಗಾದ ಉದಾಹರಣೆಗಳಿವೆ. ಆಗಸ್ಟ್ 14ರಂದು ವಾಲ್ಸ್ಟ್ರೀಟ್ ಜರ್ನಲ್ ಮಾಧ್ಯಮದಲ್ಲಿ ಪ್ರಕಟವಾದ ವರದಿಯಲ್ಲಿ ‘ 2014ರ ಲೋಕಸಭಾ ಚುನಾವಣೆ ಸಂದರ್ಭ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಮುಖಂಡರ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಫೇಸ್ಬುಕ್ ಕ್ರಮ ಕೈಗೊಂಡಿಲ್ಲ. ಹೀಗೆ ಮಾಡಿದರೆ ಫೇಸ್ಬುಕ್ನ ವಾಣಿಜ್ಯ ಹಿತಾಸಕ್ತಿಗೆ ತೊಂದರೆಯಾಗಬಹುದು ಎಂದು ಫೇಸ್ಬುಕ್ನ ಭಾರತದ ಅಧಿಕಾರಿಯಾಗಿದ್ದ ಆಂಖಿ ದಾಸ್ ಎಚ್ಚರಿಸಿದ್ದರು’ 
ಎಂದು ಪ್ರಕಟವಾಗಿತ್ತು. 

ಕಳೆದ ವಾರ, ಕೊರೋನ ಸೋಂಕಿನ ದ್ವಿತೀಯ ಅಲೆಯನ್ನು ಭಾರತ ಸರಕಾರ ನಿರ್ವಹಿಸುವುದನ್ನು ಟೀಕಿಸಿದ್ದ 52 ಟ್ವೀಟ್ಗಳನ್ನು ಕೇಂದ್ರ ಸರಕಾರದ ಕೋರಿಕೆಯಂತೆ ಫೇಸ್ಬುಕ್ ಡಿಲೀಟ್ ಮಾಡಿತ್ತು. ಕಳೆದ ಫೆಬ್ರವರಿಯಲ್ಲಿ, ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರ ಪ್ರತಿಭಟನೆ ಉತ್ತುಂಗ ಸ್ಥಿತಿಯಲ್ಲಿದ್ದ ಸಮಯದಲ್ಲಿ ‘ಕಾರವಾನ್ ಮಾಧ್ಯಮ, ಕಿಸಾನ್ ಏಕತಾ ಮೋರ್ಛಾ’ದ ಸಹಿತ ಹಲವು ಬಳಕೆದಾರರ ಖಾತೆಗಳನ್ನು ಟ್ವಿಟರ್ ಸ್ಥಗಿತಗೊಳಿಸಿತ್ತು. ಕಾನೂನಿನ ಆಗ್ರಹದಂತೆ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದ ಟ್ವಿಟರ್ ಬಳಿಕ ಈ ಖಾತೆಗಳನ್ನು ಮರುಸ್ಥಾಪಿಸಿತ್ತು. 

ಕೇಂದ್ರದ ಸ್ಪಷ್ಟನೆ
#resignmodi ಹ್ಯಾಶ್ಟ್ಯಾಗ್ ಅನ್ನು ಬ್ಲಾಕ್ ಮಾಡಿರುವುದು ಸಾರ್ವಜನಿಕರ ಧ್ವನಿಯನ್ನು ಅಡಗಿಸುವ ಕೇಂದ್ರ ಸರಕಾರದ ಉಪಕ್ರಮವಾಗಿದೆ ಎಂಬ ಅಮೆರಿಕಾ ದಿನಪತ್ರಿಕೆಯ ವರದಿಯನ್ನು ಭಾರತ ನಿರಾಕರಿಸಿದೆ. ಇದು ತಪ್ಪು ಅಭಿಪ್ರಾಯ ಮೂಡಿಸುವ ಉದ್ದೇಶದ ವರದಿಯಾಗಿದೆ. ಹ್ಯಾಶ್ಟ್ಯಾಗ್ ಬ್ಲಾಕ್ ಮಾಡುವಂತೆ ಕೇಂದ್ರ ಸರಕಾರ ಕೋರಿಲ್ಲ. ದುರುದ್ದೇಶದ ವರದಿ ಇದಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. 

ವಾಲ್ ಸ್ಟ್ರೀಟ್ ಜರ್ನಲ್ ನ ವರದಿ ದುರುದ್ದೇಶಪೂರಿತ ಮತ್ತು ದಾರಿ ತಪ್ಪಿಸುವ ವಿಷಯವನ್ನು ಒಳಗೊಂಡಿದೆ. ಹ್ಯಾಶ್ಟ್ಯಾಗ್ ಬ್ಲಾಕ್ ಮಾಡುವಂತೆ ಭಾರತ ಸರಕಾರ ವಿನಂತಿಸಿಲ್ಲ ಮತ್ತು ಇದು ಪ್ರಮಾದವಶಾತ್ ಆದ ಘಟನೆ ಎಂದು ಫೇಸ್ಬುಕ್ ಕೂಡಾ ಸ್ಪಷ್ಟನೆ ನೀಡಿದೆ. 2021ರ ಮಾರ್ಚ್ 5ರಂದು ಕೂಡಾ ವಾಲ್ ಸ್ಟ್ರೀಟ್ ಜರ್ನಲ್ ‘ಭಾರತವು ಫೇಸ್ಬುಕ್, ವಾಟ್ಸ್ಯಾಪ್ ಮತ್ತು ಟ್ವಿಟರ್ ಉದ್ಯೋಗಿಗಳನ್ನು ಬಂಧಿಸುವುದಾಗಿ ಬೆದರಿಸಿದೆ’ ಎಂಬ ಸುಳ್ಳು ವರದಿ ಪ್ರಕಟಿಸಿತ್ತು. ಈ ಸುಳ್ಳು ಮತ್ತು ಕಪೋಲಕಲ್ಪಿತ ಸುದ್ಧಿಯ ಹಿನ್ನೆಲೆಯಲ್ಲಿ ಸರಕಾರ ಅಧಿಕೃತ ಖಂಡನೆ ರವಾನಿಸಿತ್ತು ಎಂದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News