ರೆಮ್‍ಡೆಸಿವಿರ್ ಅಕ್ರಮ ಮಾರಾಟ ಆರೋಪ: ಆಯುರ್ವೇದ ವೈದ್ಯ ಸೇರಿ ಹಲವರ ಬಂಧನ

Update: 2021-04-29 14:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.29: ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮ್‍ಡೆಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪ ಸಂಬಂಧ ಪ್ರತ್ಯೇಕ ಮೂರು ಸ್ಥಳಗಳಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆಯುರ್ವೇದ ವೈದ್ಯ ಸೇರಿ ಹಲವರನ್ನು ಬಂಧಿಸಿದ್ದಾರೆ.

ಆಯುರ್ವೇದ ವೈದ್ಯ ಅಭಿಷೇಕ್ ಚೌಧರಿ, ವಿನೋದ್, ಕುಮಾರಸ್ವಾಮಿ, ಲಿಂಗರಾಜ್, ಬಸವರಾಜ್ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಿ, ಪ್ರತ್ಯೇಕ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಕೋವಿಡ್ ಸೋಂಕಿನ ಪರಿಣಾಮ ಉಸಿರಾಟ ಸಮಸ್ಯೆ ತೀವ್ರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ಪ್ರತಿಷ್ಠಿತ ಆಸ್ಪತ್ರೆಯ ಮೆಡಿಕಲ್‍ಗೆ ಬರುತ್ತಿದ್ದ ಔಷಧಗಳನ್ನು ತರಿಸಿಕೊಂಡು 15 ರಿಂದ 20 ಸಾವಿರ ರೂಪಾಯಿಗೆ ಆರೋಪಿಗಳು ಕೋವಿಡ್ ರೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಒಟ್ಟು ಆರೋಪಿಗಳಿಂದ ಒಟ್ಟು 18 ರೆಮ್‍ಡೆಸಿವಿರ್ ಔಷಧ ವಶಕ್ಕೆ ಪಡೆಯಲಾಗಿದ್ದು, ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News