ಕೋವಿಡ್‌ ವಾರ್ಡ್‌ ನೊಳಗೆ ತೆರಳಿ, ಆಕ್ಸಿಜನ್‌ ಪೈಪ್‌ ತೆಗೆದು ರೋಗಿಗಳಿಗೆ ಜ್ಯೂಸ್‌ ನೀಡಿದ ಎಬಿವಿಪಿ ಕಾರ್ಯಕರ್ತರು !

Update: 2021-04-30 07:37 GMT

ಡೆಹ್ರಾಡೂನ್:‌ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಕೋವಿಡ್‌ ಸೋಂಕಿತ ರೋಗಿಗಳಿದ್ದ ವಾರ್ಡ್‌ ಗೆ ತೆರಳಿ ರೋಗಿಗಳ ಆಕ್ಸಿಜನ್‌ ಪೈಪ್‌ ತೆಗೆದು ಜ್ಯೂಸ್‌ ವಿತರಿಸಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಪಿಪಿಇ ಕಿಟ್‌ ಧರಿಸಿ ಡೂನ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ ಪ್ರವೇಶಿಸಿ ಜ್ಯೂಸ್‌ ನೀಡುತ್ತಿರುವ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಈ ಕುರಿತು ಮಾತನಾಡಿದ ಡೂನ್‌ ಮೆಡಿಕಲ್‌ ಕಾಲೇಜ್‌ ನ ಪ್ರಿನ್ಸಿಪಾಲ್‌ ಅಶುತೋಷ್‌ ಸಯಾನಾ, "ಎಬಿವಿಪಿಯ ಕಾರ್ಯಕರ್ತರು ನಮ್ಮಲ್ಲಿ ಆಸ್ಪತ್ರೆಯ ಆಡಳಿತಕ್ಕೆ ಸಹಾಯ ಮಾಡುತ್ತೇವೆಂದು ಅನುಮತಿ ಕೇಳಿದ್ದರು. ಆದರೆ ಕೋವಿಡ್‌ ವಾರ್ಡ್‌ ಗೆ ಪ್ರವೇಶಿಸಲು ಅವರಿಗೆ ಅನುಮತಿ ನೀಡಿರಲಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಎಬಿವಿಪಿಯ ಸ್ಟಿಕರ್‌ ಧರಿಸಿರುವ ಕಾರ್ಯಕರ್ತರು ಪಿಪಿಇ ಕಿಟ್‌ ಧರಿಸಿಕೊಂಡು ಕೋವಿಡ್‌ ವಾರ್ಡ್‌ ಪ್ರವೇಶಿಸಿ ರೋಗಿಗಳ ಆಕ್ಸಿಜನ್‌ ಮಾಸ್ಕ್‌ ಅನ್ನು ತೆಗೆದು ಜ್ಯೂಸ್‌ ನೀಡುತ್ತಿರುವ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಕೋವಿಡ್‌ ಮಾರ್ಗಸೂಚಿಗಳ ಪ್ರಕಾರ, ಆರೋಗ್ಯ ಕಾರ್ಯಕರ್ತರಲ್ಲದೇ ಬೇರೆ ಯಾರೂ ಕೋವಿಡ್‌ ರೋಗಿಗಳಿರುವ ವಾರ್ಡ್‌ ಪ್ರವೇಶಿಸುವುದು ನಿಷಿದ್ಧವಾಗಿದೆ. "ನಮ್ಮ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡುತ್ತೇವೆಂದು ಅನುಮತಿ ಕೇಳಿದ್ದರು. ಕೋವಿಡ್‌ ವಾರ್ಡ್‌ ಹೈ ರಿಸ್ಕ್‌ ಪ್ರದೇಶ ಆಗಿರುವ ಕಾರಣ ನಾವು ಅನುಮತಿ ನೀಡಿರಲಿಲ್ಲ. ಅವರು ಕೋವಿಡ್‌ ವಾರ್ಡ್‌ ಹೇಗೆ ಪ್ರವೇಶಿಸಿದ್ದಾರೆಂದು ನಾವು ತನಿಖೆ ನಡೆಸುತ್ತೇವೆ" ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಈ ವಿಚಾರವು ಬೆಳಕಿಗೆ ಬರುತ್ತಿದ್ದಂತೆಯೇ ಆಸ್ಪತ್ರೆಯ ಮುಖ್ಯಸ್ಥರು ಎಬಿವಿಪಿ ಕಾರ್ಯಕರ್ತರಿಗೆ ಆಸ್ಪತ್ರೆ ಪ್ರವೇಶ ನಿಷೇಧಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News