ಗುಜರಾತ್ ; ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 18 ಮಂದಿ ಕೊರೋನ ಸೋಂಕಿತರು ಮೃತ್ಯು

Update: 2021-05-01 02:13 GMT

ಬರೂಚ್ : ಅಹ್ಮದಾಬಾದ್ ನಿಂದ ಸುಮಾರು 190 ಕಿಮೀ ದೂರದಲ್ಲಿರುವ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 18 ಮಂದಿ ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ.

ಹಾಸಿಗೆ ಮತ್ತು ಸ್ಟ್ರೆಚರ್‌ಗಳಲ್ಲೇ ಕೋವಿಡ್ ರೋಗಿಗಳು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ದೃಶ್ಯಗಳು ಮನ ಕಲುಕುತ್ತಿವೆ. ನಾಲ್ಕು ಮಹಡಿಗಳ ವೆಲ್ಫೇರ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಬಳಿಕ ದುರ್ಘಟನೆ ಸಂಭವಿಸಿದಾಗ 50 ಮಂದಿ ಇತರ ರೋಗಿಗಳೂ ಇದ್ದರು ಎಂದು ತಿಳಿದು ಬಂದಿದೆ. ಅವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಪಾರು ಮಾಡಿದರು.

"ಮುಂಜಾನೆ 6.30ಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಘಟನೆಯಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 18. ಘಟನೆ ನಡೆದ ತಕ್ಷಣ 12 ಮಂದಿ ಮೃತಪಟ್ಟಿರುವುದು ದೃಢಪಟ್ಟಿತ್ತು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋವಿಡ್-19 ಚಿಕಿತ್ಸಾ ಘಟಕದಲ್ಲಿದ್ದ 12ಮಂದಿ ರೋಗಿಗಳು ಬೆಂಕಿ ಮತ್ತು ತೀವ್ರ ಹೊಗೆಯಿಂದ ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎಂದು ಬರೂಚ್ ಎಸ್ಪಿ ರಾಜೇಂದ್ರ ಸಿಂಗ್ ಚೂಡಾಸಮ ವಿವರ ನೀಡಿದ್ದಾರೆ.

ಇತರ ಆರು ಮಂದಿ ವೆಲ್ಫೇರ್ ಆಸ್ಪತ್ರೆಯಲ್ಲೇ ಜೀವ ಕಳೆದುಕೊಂಡಿದ್ದಾರೆಯೇ ಅಥವಾ ಇತರ ಆಸ್ಪತ್ರೆಗಳಿಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ.

ಬರೂಚ್- ಜಮ್‌ಬೂಸರ್ ಹೆದ್ದಾರಿಯ ಪಕ್ಕದಲ್ಲಿ ಈ ಆಸ್ಪತ್ರೆ ಇದೆ. ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ. ಒಂದು ಗಂಟೆಯ ಒಳಗಾಗಿ ಬೆಂಕಿ ನಂದಿಸಲಾಗಿದ್ದು, 50 ರೋಗಿಗಳನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News