ಉಸ್ತುವಾರಿ ಮಂತ್ರಿಗಳನ್ನು ಆಯಾ ಜಿಲ್ಲೆಗಳಲ್ಲೇ ಠಿಕಾಣಿ ಹೂಡಿಸಿ: ಕಾಂಗ್ರೆಸ್ ಸಲಹೆ

Update: 2021-05-04 06:54 GMT

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಉಸ್ತುವಾರಿ ಮಂತ್ರಿಗಳನ್ನು ಆಯಾ ಜಿಲ್ಲೆಗಳಲ್ಲೇ ಠಿಕಾಣಿ ಹೂಡಿಸಿ, ಪ್ರತಿ ಕುಂದು ಕೊರತೆಗಳನ್ನು ನಿಭಾಯಿಸುವಂತೆ ಆದೇಶ ಹೊರಡಿಸಿ. ಆಶಾ ಕಾರ್ಯಕರ್ತೆಯರ ಮೂಲಕ ಹಳ್ಳಿಗಳಿಗೆ ತೆರಳಿದವರನ್ನು ಗುರುತಿಸಿ ಟೆಸ್ಟ್ ಮಾಡಿಸಿ, ಐಸೋಲೇಶನ್ ವ್ಯವಸ್ಥೆ ಮಾಡಿ. ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿನ ಸ್ಥಿತಿಗತಿಯ ವರದಿ ಪಡೆಯಿರಿ ಎಂದು ಕಾಂಗ್ರೆಸ್ ಸಲಹೆ ನೀಡಿದೆ.

ಸರಕಾರ ಲಾಕ್‌ಡೌನ್ ಒಂದೇ ಮದ್ದು ಎಂದು ನಂಬಿಕೊಂಡಂತಿದೆ, ಪೂರ್ವ ತಯಾರಿ, ಸ್ಪಷ್ಟ ಕಾರ್ಯತಂತ್ರವಿಲ್ಲದ ಏಕಾಏಕೀಯ ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಸೂಕ್ತ ತಪಾಸಣೆ, ಐಸೋಲೇಶನ್, ಚಿಕಿತ್ಸೆಯ ವ್ಯವಸ್ಥೆ ಮಾಡದ ಪರಿಣಾಮ ಈಗ ಜಿಲ್ಲಾ ಕೇಂದ್ರಗಳಲ್ಲೂ ಸೋಂಕು ಉಲ್ಬಣಗೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ನಾವು ಈ ಹಿಂದೆಯೇ ಜಿಲ್ಲಾ ಕೇಂದ್ರಗಳತ್ತ ಗಮನ ಹರಿಸಿ ಎಂದು ಎಚ್ಚರಿಸಿದ್ದೆವು, ಸರಕಾರ ಎಚ್ಚರಗೊಳ್ಳದ ಪರಿಣಾಮ ಈಗ ರಾಜ್ಯಾದ್ಯಾಂತ ಬೆಂಗಳೂರಿನ ಸ್ಥಿತಿಯೇ ನಿರ್ಮಾಣವಾಗಿ ಎಲ್ಲೆಡೆಯಿಂದಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಆಕ್ಸಿಜನ್, ಬೆಡ್, ಔಷಧಗಳಿಲ್ಲದ ಸುದ್ದಿಗಳು ಬರತೊಡಗಿದೆ. ಮೂಲಸೌಕರ್ಯಗಳಿಲ್ಲದ ಜಿಲ್ಲೆಗಳ ಸ್ಥಿತಿ ಶೋಚನೀಯವಾಗಿದೆ ಎಂದು ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News