ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ: ಡಿ.ಕೆ. ಶಿವಕುಮಾರ್

Update: 2021-05-04 11:17 GMT

ಬೆಂಗಳೂರು, ಮೇ 4: ಇಡೀ ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಈ ಸಮಯದಲ್ಲಿ ನಾವು ಜನರ ಜತೆ ಇರಬೇಕು. ಜನರ ನೋವು, ಕಷ್ಟ ಎಲ್ಲ ವಿಚಾರದಲ್ಲೂ ಅವರಿಗೆ ಧ್ವನಿಯಾಗಿರಬೇಕು. ಏನಾಯ್ತು, ಹೇಗಾಯ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪಿಡುಗಿನ ಸಂಕಷ್ಟದ ಸಮಯದಲ್ಲಿ ಎಲ್ಲರೂ ಜಾಗೃತರಾಗಿ ಧೈರ್ಯದಿಂದ ಇರಬೇಕು. ಕೆಲವು ಮೃತದೇಹಗಳನ್ನು ಯಾರೂ ತೆಗೆದುಕೊಂಡು ಹೋಗದ ಕಾರಣ ಪೊಲೀಸ್ ಅಧಿಕಾರಿಗಳು ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ ಎಂದು ತಿಳಿಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಜನರ ಆಕ್ರಂದನ ವಿಪರೀತ ಆಗುತ್ತಿದೆ. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 24 ಮಂದಿ ಸತ್ತಿದ್ದಾರೆ ಎಂದು ಲೆಕ್ಕ ಇದೆ. ಬೇರೆ ಕಡೆಗಳಲ್ಲಿ ಇದೇ ರೀತಿ ಜನ ಸಾಯುತ್ತಿರುವುದನ್ನು ನೋಡುತ್ತಿದ್ದೇವೆ. ಈ ಬಗ್ಗೆ ಜನರೇ ಮಾಹಿತಿ ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಅನೇಕರು ಕೋವಿಡ್ ಆತಂಕದಿಂದ ಸಾಯುತ್ತಿದ್ದಾರೆ. ನಿನ್ನೆ ರಾಜರಾಜೇಶ್ವರಿ ನಗರ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಕೊರತೆ ಇದ್ದಾಗ ಸಂಸದ ಡಿ.ಕೆ.ಸುರೇಶ್ ಮಧ್ಯಪ್ರವೇಶಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಕಾರಣ, ಆಕ್ಸಿಜನ್ ಪೂರೈಸಲಾಯಿತು. ನಾವು ಜಾಗೃತರಾಗದಿದ್ದರೆ ಜನರನ್ನು ಕಳೆದುಕೊಳ್ಳಬೇಕಾಗುತ್ತದೆ. ಈಗ ರಾಜಕಾರಣ ಮುಖ್ಯ ಅಲ್ಲ. ಪ್ರತಿಯೊಬ್ಬರನ್ನು ಉಳಿಸಿ, ಆ ಕುಟುಂಬಕ್ಕೆ ಧೈರ್ಯ ತುಂಬಬೇಕು ಎಂದು ಅವರು ಹೇಳಿದರು.

ಈಗ ಯುವಕರು ಹೆಚ್ಚಾಗಿ ಸಾಯುತ್ತಿರುವುದು ಬಹಳ ಶೋಚನೀಯ. ನಾವು ಈ ಪರಿಸ್ಥಿತಿಯಲ್ಲಿ ಜಾಗೃತರಾಗಿರಬೇಕು. ಆಗ ಮಾತ್ರ ಜೀವ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡೋಣ. ರಾಜ್ಯ 1750 ಟನ್ ಆಕ್ಸಿಜನ್ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿತ್ತು. ಕೇಂದ್ರ 850 ಟನ್ ಕೊಟ್ಟಿದೆ. ಎಲ್ಲವನ್ನೂ ಕೇಂದ್ರ ಸರಕಾರ ನಿಯಂತ್ರಣ ಮಾಡುತ್ತಿದೆ ಎಂದು ಶಿವಕುಮಾರ್ ಕಿಡಿಗಾರಿದರು.

ರಾಜೀನಾಮೆಯಲ್ಲ, ಸರಕಾರವೇ ಹೋಗಬೇಕು

ಆರೋಗ್ಯ ಸಚಿವರ ರಾಜೀನಾಮೆ ಮಾತ್ರವಲ್ಲ, ಈ ಸರಕಾರವೇ ಹೋಗಬೇಕು. 33 ಜನ ಮಂತ್ರಿಗಳು ತಾವು ಉಸ್ತುವಾರಿ ಹೊತ್ತಿರುವ ಜಿಲ್ಲೆಗಳಿಗೆ ಹೋಗಲಿಲ್ಲ ಎಂದರೆ ಹೇಗೆ? ಸಚಿವ ಸುರೇಶ್ ಕುಮಾರ್ ಸತ್ತವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರಾ? ಅವರಿಗೆ ಆಗಲಿಲ್ಲ ಅಂದರೆ ಅಧಿಕಾರ ಬಿಟ್ಟು ಹೋಗಲಿ. ರಾಜ್ಯಪಾಲರ ಆಡಳಿತ ಬಂದ ಮೇಲೆ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣ ಮಾಡುತ್ತಾರೆ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News