ದಿಲ್ಲಿಯಲ್ಲಿ ಆಕ್ಸಿಜನ್ ಕೊರತೆಯಿಂದ ಹೆಚ್ಚುತ್ತಿರುವ ಕೋವಿಡ್ ಸಾವುಗಳ ಕುರಿತು ಕೆಂದ್ರದ ವಿರುದ್ಧ ಹೈಕೋರ್ಟ್ ಆಕ್ರೋಶ

Update: 2021-05-04 12:17 GMT

ಹೊಸದಿಲ್ಲಿ : “ರಾಷ್ಟ್ರ ರಾಜಧಾನಿಗೆ 700 ಎಂಟಿ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹೊರತಾಗಿಯೂ ಇಲ್ಲಿಯ ತನಕ ಕೇವಲ 433 ಎಂಟಿ ಆಕ್ಸಿಜನ್ ಲಭಿಸಿದೆ, ಜನರು ಸಾಯುತ್ತಿದ್ದಾರೆ,'' ಎಂದು ದಿಲ್ಲಿ ಸರಕಾರದ ಪರ ವಕೀಲ ರಾಹುಲ್ ಮೆಹ್ರಾ ಇಂದು ಹೈಕೊರ್ಟಿಗೆ ತಿಳಿಸಿದಾಗ ಇದಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮ ಆಕ್ಷೇಪಿಸಿದ ಸಂದರ್ಭ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, “ಇದೇನು ಸುಮ್ಮನೆ ನೀಡಿದ ಹೇಳಿಕೆಯಲ್ಲ, ಬದಲು ವಾಸ್ತವ, ನೀವು ಕುರುಡರಾಗಿರಬಹುದು, ನಾವಲ್ಲ, ನಾವು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಇದು ದುರದೃಷ್ಟಕರ,'' ಎಂದು ಹೇಳಿದೆ.

ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿರುವ  ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಬಳಕೆಯಾಗದೇ ಉಳಿದಿರುವ ಆಕ್ಸಿಜನ್ ಟ್ಯಾಂಕರ್‌ಗಳನ್ನು ದಿಲ್ಲಿಗೆ ಕಳುಹಿಸಿಕೊಡುವಂತೆ ಕೇಂದ್ರ ಸರಕಾರಕ್ಕೆ ದಿಲ್ಲಿ ಹೈಕೋರ್ಟ್ ಇಂದು ಸೂಚನೆ ನೀಡಿದೆ.

“ಇದೇನು ಖಾಯಂ ಏರ್ಪಾಟು ಅಲ್ಲ, ಮತ್ತೆ ಆ ರಾಜ್ಯಗಳಿಗೆ ಅಗತ್ಯ ಬಿದ್ದರೆ ವಾಪಸ್ ಕಳುಹಿಸಬಹುದು,'' ಎಂದು  ಅಮಿಕಸ್ ಕ್ಯೂರಿ ಅವರ ಸಲಹೆಯನ್ನು ಮನ್ನಿಸಿ ಇಂದು ನ್ಯಾಯಾಲಯ ಹೇಳಿದೆ.

ಈ ಕುರಿತಂತೆ ಕೇಂದ್ರ ಸರಕಾರ ಈಗಾಗಲೇ ಯೋಚಿಸುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮ ಹೇಳಿದರು. ಸುಪ್ರೀಂ ಕೋರ್ಟ್ ಈಗಾಗಲೇ ನೀಡಿದ ಸೂಚನೆಯಂತೆ ದಿಲ್ಲಿಗೆ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News