ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರ: ಎಪ್ರಿಲ್‌ನಲ್ಲಿ 70 ಲಕ್ಷಕ್ಕೂ ಅಧಿಕ ಉದ್ಯೋಗ ನಷ್ಟ; ವರದಿ

Update: 2021-05-04 14:33 GMT

ಹೊಸದಿಲ್ಲಿ,ಮೇ 4: ಕೊರೋನವೈರಸ್ ಸಾಂಕ್ರಾಮಿಕದ ಎರಡನೇ ಅಲೆಯ ನಡುವೆ ಎಪ್ರಿಲ್‌ನಲ್ಲಿ 70 ಲಕ್ಷಕ್ಕೂ ಅಧಿಕ ಉದ್ಯೋಗ ನಷ್ಟವಾಗಿದ್ದು,ಭಾರತದ ನಿರುದ್ಯೋಗ ದರ ಕಳೆದ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಸುಮಾರು ಶೇ.8ಕ್ಕೇರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ತನ್ನ ವರದಿಯಲ್ಲಿ ತಿಳಿಸಿದೆ ಎಂದು ndtv.com ವರದಿ ಮಾಡಿದೆ.

ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಶೇ.6.89 ಮತ್ತು 6.5ರಷ್ಟಿದ್ದ ರಾಷ್ಟ್ರೀಯ ನಿರುದ್ಯೋಗ ದರವು ಎಪ್ರಿಲ್‌ನಲ್ಲಿ ಶೇ.7.97ಕ್ಕೇರಿದೆ ಮತ್ತು ಮಾರ್ಚ್‌ನಲ್ಲಿ ಶೇ.7.27ರಷ್ಟಿದ್ದ ನಗರ ನಿರುದ್ಯೋಗ ದರವು ಎಪ್ರಿಲ್‌ನಲ್ಲಿ ಶೇ.9.78ಕ್ಕೇರಿದೆ. 73.5 ಲಕ್ಷ ಉದ್ಯೋಗಗಳ ನಷ್ಟದೊಂದಿಗೆ ಮಾರ್ಚ್‌ನಲ್ಲಿ 39.81 ಕೋ.ಇದ್ದ ವೇತನದಾರ ಮತ್ತು ವೇತನೇತರ ಉದ್ಯೋಗಿಗಳ ಸಂಖ್ಯೆ ಸತತ ಮೂರನೇ ತಿಂಗಳಿಗೆ ಇಳಿಕೆಯಾಗಿದ್ದು,ಎಪ್ರಿಲ್‌ನಲ್ಲಿ 39.08 ಕೋ.ಗೆ ಕುಸಿದಿದೆ. ಜನವರಿಯಲ್ಲಿ ದೇಶದಲ್ಲಿ 40.07 ಕೋ.ಉದ್ಯೋಗಿಗಳಿದ್ದರು. ಇದೇ ವೇಳೆ ಮಾರ್ಚ್‌ನಲ್ಲಿ ಶೇ.37.56ರಷ್ಟಿದ್ದ ಉದ್ಯೋಗ ದರವು ಎಪ್ರಿಲ್‌ನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇ.36.79ಕ್ಕೆ ಕುಸಿದಿದೆ. ನಿರುದ್ಯೋಗಿಗಳಾಗಿದ್ದರೂ ಕೆಲಸಗಳನ್ನು ಹುಡುಕುವಲ್ಲಿ ಸಕ್ರಿಯರಾಗಿಲ್ಲದ ಜನರ ಸಂಖ್ಯೆಯು ಮಾರ್ಚ್‌ನಲ್ಲಿ 1.60 ಕೋ.ಇದ್ದುದು ಎಪ್ರಿಲ್‌ನಲ್ಲಿ 1.94 ಕೋ.ಗೇರಿದೆ ಎಂದು ಮಾಸಿಕ ವರದಿಯು ಹೇಳಿದೆ.

ಕೊರೋನವೈರಸ್ ಎರಡನೇ ಅಲೆಯನ್ನು ತಡೆಯಲು ಲಾಕ್‌ಡೌನ್‌ಗಳು ಸೇರಿದಂತೆ ರಾಜ್ಯ ಸರಕಾರಗಳು ಪ್ರಕಟಿಸಿದ ಸರಣಿ ನಿರ್ಬಂಧಗಳು ಉದ್ಯೋಗ ನಷ್ಟಕ್ಕೆ ಕಾರಣವಾಗಿವೆ. ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ದುಡಿಯುತ್ತಿದ್ದ ಹಲವಾರು ಜನರು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಜೊತೆಗೆ ಕಳೆದ ವರ್ಷದ ಅಂತ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾದ ನಂತರ ಕಂಡು ಬಂದಿದ್ದ ಆರ್ಥಿಕ ಚಟುವಟಿಕೆಗಳ ಚೇತರಿಕೆಯ ಆಶಯಗಳಿಗೂ ಪೆಟ್ಟು ನೀಡಿದೆ ಎಂದು ಸಿಎಂಐಇ ತನ್ನ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News