ಬೆಂಗಳೂರು ಬೆಡ್ ಬುಕ್ಕಿಂಗ್ ಹಗರಣ: ತೇಜಸ್ವಿ ಸೂರ್ಯ ಆರೋಪದ ಬೆನ್ನಲ್ಲೇ ರೋಹಿತ್, ನೇತ್ರಾ ಎಂಬವರ ಬಂಧನ

Update: 2021-05-04 16:10 GMT

ಬೆಂಗಳೂರು, ಮೇ 4: ಕೊರೋನ ಸೋಂಕಿತರಿಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಬೆಂಗಳೂರು ದಕ್ಷಿಣ ಕೋವಿಡ್ ವಾರ್ ರೂಂ ಮೂಲಕ ಹಾಸಿಗೆ ವ್ಯವಸ್ಥೆ ಕಲ್ಪಿಸುವ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಜಯನಗರ ಠಾಣಾ ಪೊಲೀಸರು ರೋಹಿತ್ ಹಾಗೂ ನೇತ್ರಾ ಎಂಬವರನ್ನು ದಿಢೀರ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಈ ಸಂಬಂಧ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದು, ಈ ಹಗರಣದ ಹಿಂದಿರುವ ಇನ್ನೂ ಕೆಲ ಆರೋಪಿಗಳ ಬಂಧನಕ್ಕೆ ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ಗೊತ್ತಾಗಿದೆ.

ಹಾಸಿಗೆ ಕೃತಕ ಅಭಾವ ಸೃಷ್ಟಿ: ಹೋಮ್ ಐಸೋಲೇಷನ್‍ನಲ್ಲಿರುವವರ ಹೆಸರಿನಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ(ಬೆಡ್) ಬ್ಲಾಕ್ ಮಾಡುವ ಹಗರಣ ನಡೆಯುತ್ತಿದ್ದು, ತುರ್ತು ಚಿಕಿತ್ಸೆ ಅಗತ್ಯವಿರುವ ಸೋಂಕಿತರಿಗೆ ಹಾಸಿಗೆ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿರುವ ಸಂಸದ ತೇಜಸ್ವಿ ಸೂರ್ಯ, ದಕ್ಷಿಣ ಕೋವಿಡ್ ವಾರ್ ರೂಂಗೆ ಮಂಗಳವಾರ ಖುದ್ಧು ಭೇಟಿ ಮಾಡಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದಲ್ಲಿ ಹಾಸಿಗೆ ಬ್ಲಾಕ್ ಮಾಡಲಾಗುತ್ತಿದ್ದು, ಒಬ್ಬ ವ್ಯಕ್ತಿಯ ಹೆಸರಿನಲ್ಲಿ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ಕಿಂಗ್ ಆಗಿದೆ. ರಾತ್ರೋರಾತ್ರಿ ಈ ಅವ್ಯವಹಾರ ನಡೆಯುತ್ತಿದೆ. ಇದು ಭ್ರಷ್ಟಾಚಾರ ಅಲ್ಲ, ವ್ಯವಸ್ಥಿತ ಕೊಲೆ. ಕೋವಿಡ್ ಪಾಸಿಟಿವ್ ಒಂದು 'ಬಿಯು' ನಂಬರ್ ವಾರ್ ರೂಂಗೆ ಬರುತ್ತದೆ. ಆ ವಿವರ ವಾರ್ ರೂಂಗೆ ಹೋಗುತ್ತೆ. ತಕ್ಷಣ ವಾರ್ ರೂಂನಿಂದ ಸೋಂಕಿತರಿಗೆ ಕರೆ ಮಾಡಿ ಸೋಂಕಿನ ಲಕ್ಷಣಗಳು ಇವೆಯೇ ಎಂದು ವಿಚಾರಿಸಲಾಗುತ್ತದೆ. ಹೋಂ ಐಸೋಲೆಶನ್‍ನಲ್ಲಿ ಇರುವವರ ಹೆಸರಲ್ಲಿ ಬಿಬಿಎಂಪಿ ವಾರ್ ರೂಂನಲ್ಲಿ ಕುಳಿತ ಅಧಿಕಾರಿಗಳು ಆಸ್ಪತ್ರೆಗಳ ಬೆಡ್‍ಗಳನ್ನು ಬ್ಲಾಕ್ ಮಾಡ್ತಾರೆ. ಅವರು ಯಾರು ಸರಕಾರಿ ಅಧಿಕಾರಿಗಳಲ್ಲ ಎಂದು ಆರೋಪಿಸಿದ್ದಾರೆ.

ಓರ್ವ ವ್ಯಕ್ತಿಗೆ ಕೊರೋನ ಬಂದು 20 ದಿನಗಳ ನಂತರ 12 ಆಸ್ಪತ್ರೆಗಳಲ್ಲಿ ಬೆಡ್‍ಬುಕ್ ಮಾಡಲಾಗಿತ್ತು. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವಾರ್ ರೂಂ ಏಜೆನ್ಸಿಗಳು ಬೆಡ್‍ಗಳ ಕೃತಕ ಅಭಾವ ಸೃಷ್ಟಿಸುತ್ತಿವೆ. ಈ ಅವ್ಯವಹಾರದ ಬಗ್ಗೆ ರಾತ್ರಿ 2 ಗಂಟೆ 3 ಗಂಟೆಯವರೆಗೆ ಬೆನ್ನು ಬಿದ್ದು ಈ ಡೇಟಾ ಸಂಗ್ರಹಿಸಿದ್ದೇವೆ. ಯಾವ ಅಧಿಕಾರಿಗಳು ಸರಿಯಾದ ವಿವರ ಕೊಡುತ್ತಿಲ್ಲ. 5 ಸಾವಿರ ಬೆಡ್‍ಗಳ ಮಾಹಿತಿ ಸಿಗುತ್ತಿಲ್ಲ. ಮಧ್ಯರಾತ್ರಿ 12 ಗಂಟೆಗೆ ಬೆಡ್ ಬುಕ್ ಆಗಿ 12 ಗಂಟೆ ಒಂದು ನಿಮಿಷಕ್ಕೆ ರೋಗಿ ದಾಖಲಾಗುತ್ತಾನೆ. ಇದು ಹೇಗೆ ಸಾಧ್ಯ ಎಂದು ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದರು.

ಒಬ್ಬ ಸಂಸದನಾಗಿ ನಾನು ಸೋಂಕಿತರಿಗೆ ಒಂದು ಬೆಡ್ ಕೊಡಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ದೂರವಾಣಿ ಮೂಲಕ ವಿವರಿಸಿದ್ದೇನೆ. ಈ ಅವ್ಯವಹಾರದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದ ಅವರು, ಈ ದಂಧೆಯಲ್ಲಿ ಅಮಿತ್ ಎಂಬ ವ್ಯಕ್ತಿ ಇದ್ದಾನೆ ಎಂದು ಆರೋಪಿಸಿದ್ದರು.

ಸುದ್ದಿಗೋಷ್ಟಿಯಲ್ಲಿ ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಹಾಜರಿದ್ದರು.

'ಬೆಂಗಳೂರು ದಕ್ಷಿಣ ಕೋವಿಡ್ ವಾರ್ ರೂಂಗೆ ಒಂದೇ ಸಮುದಾಯದ 17 ಮಂದಿಯನ್ನು ನೇಮಕ ಮಾಡಿದ್ದು, ಯಾವ ಆಧಾರದ ಮೇಲೆ ಅವರನ್ನು ನೇಮಕ ಮಾಡಲಾಗಿದೆ ಮತ್ತು ನೇಮಕ ಮಾಡಿದ ಏಜೆನ್ಸಿ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಬಿಜೆಪಿ ಸರಕಾರ ಮತ್ತು ಬಿಜೆಪಿ ಶಾಸಕರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಎಲ್ಲರೂ ಶಾಮೀಲಾಗಿ ಕೋವಿಡ್ ಹಾಸಿಗೆ ಕಾಯ್ದಿರುವ ದಂಧೆ ನಡೆಸಲಾಗುತ್ತಿದೆ' ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News