ಕೋವಿಡ್ ಗೆ ಬಲಿಯಾದ ಕವಿ ಜರಗನಹಳ್ಳಿ ಶಿವಶಂಕರ್

Update: 2021-05-05 03:47 GMT

ಬೆಂಗಳೂರು, ಮೇ 5: ನಾಡಿನ ಖ್ಯಾತ ಕವಿ, ಚಿಂತಕ, ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಜರಗನಹಳ್ಳಿ ಶಿವಶಂಕರ್ (72)  ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಕೋವಿಡ್ ಪೀಡಿತರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಕೊನೆಯುಸಿರೆಳೆದಿದ್ದಾರೆ.

 1949ರ ಸೆಪ್ಟಂಬರ್ 8ರಂದು  ಜರಗನಹಳ್ಳಿಯಲ್ಲಿ ಜನಿಸಿದ ಶಿವಶಂಕರ್, ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದರು. ಸಾಹಿತ್ಯ ಅವರ ಒಲವಿನ ಕ್ಷೇತ್ರವಾಗಿತ್ತು. ಇದೇ ಕಾರಣಕ್ಕೆ ಬ್ಯಾಂಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅವರು, ಸ್ವಯಂ ನಿವೃತ್ತಿ ಪಡೆದ ಬಳಿಕವೂ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು, ಸಾವಿರಕ್ಕೂ ಹೆಚ್ಚು ಹನಿಗವನಗಳನ್ನು ಬರೆದು ಪ್ರಕಟಿಸಿದ್ದಾರೆ. 'ಮಳೆ', 'ಆಲಿಕಲ್ಲು', 'ದೇವರ ನೆರಳು' ಮೊದಲಾದ ಕವನ ಸಂಕಲಗಳು ಅವರ ಸಾಹಿತ್ಯ ಕೃಷಿಯ ಮಜಲುಗಳು. ಇವರ ಹನಿಗವನಗಳ ಸಂಕಲನ ‘'ಶುಭಾಂಗಿ ಝರಿ’ ಉರ್ದು, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೂ ಅನುವಾದಗೊಂಡಿವೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News