ಕೋವಿಡ್ ಹಾಸಿಗೆ ಬ್ಲಾಕಿಂಗ್ ಹಗರಣ: ನ್ಯಾಯಾಂಗ ತನಿಖೆಗೆ ಜನವಾದಿ ಮಹಿಳಾ ಸಂಘಟನೆ ಒತ್ತಾಯ

Update: 2021-05-05 10:31 GMT

ಬೆಂಗಳೂರು, ಮೇ 6: ಕೋವಿಡ್ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಕಲ್ಪಿಸುವ ಅವ್ಯವಹಾರ ಸಂಬಂಧ 'ಬೆಡ್ ಬ್ಲಾಕ್ ದಂಧೆ' ಯನ್ನು ಸಂಪೂರ್ಣವಾಗಿ ಬಯಲಿಗೆಳೆಯಲು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಸಂಘಟನೆಯ ಅಧ್ಯಕ್ಷೆ ಗೌರಮ್ಮ, ಪ್ರತಿನಿತ್ಯ ರಾಜ್ಯ ಸರಕಾರ ದಿನದ ಅಗತ್ಯ ಮತ್ತು ಲಭ್ಯವಿರುವ ಆಕ್ಸಿಜನ್ ಪ್ರಮಾಣ, ರೆಮ್ಡೆಸಿವಿರ್ ಔಷಧಿ ದಾಸ್ತಾನು ಬೇಡಿಕೆ ಮತ್ತು ಪೂರೈಕೆ, ರಾಜ್ಯದಲ್ಲಿ ಲಭ್ಯವಿರುವ ಆರೋಗ್ಯ ಸಿಬ್ಬಂದಿಯ ಸಂಖ್ಯೆ ಮತ್ತು ಕೊರತೆ, ಆಸ್ಪತ್ರೆಗಳಲ್ಲಿ ದಾಖಲಾದ‌‌ ಮತ್ತು ಬಿಡುಗಡೆಯಾದವರ ಪಟ್ಟಿಯ ಜೊತೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಗಳ ವಿವರಗಳನ್ನು ನೀಡಬೇಕು. ನೆರೆಯ‌ ಕೇರಳದ ಮಾದರಿಯನ್ನು ಅನುಸರಿಸಿ‌ ಕನಿಷ್ಠ ಆರೋಗ್ಯ ವ್ಯವಸ್ಥೆಯನ್ನು ಜನರಿಗೆ‌ ಕೊಡಲು‌ ಮುಂದಾಗಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಕೊರೋನದಿಂದ ತತ್ತರಿಸಿ ಆಸ್ಪತ್ರೆ ಯ ಬೆಡ್ ಗಳಿಗಾಗಿ ಜನ‌ ಬೀದಿ ಬೀದಿ ಅಲೆಯುತ್ತಿದ್ದಾರೆ. ಉಳ್ಳವರಿಗೆ ಯಾವ ಸಮಸ್ಯೆಯೂ ಇಲ್ಲದೇ ಬೆಡ್, ಆಕ್ಸಿಜನ್, ಔಷಧಿ ಎಲ್ಲವೂ ಸಿಗುವಾಗ ಜನ ಸಾಮಾನ್ಯರು ಪರದಾಡಿ ಸಾಯುತ್ತಿದ್ದಾರೆ. ಈ ಹೊತ್ತಿನಲ್ಲಿ ಬಿ.ಬಿ.ಎಂ.ಪಿ ವಾರ್ ರೂಂ ಗಳು ಬೆಡ್ ಬ್ಲಾಕ್ ದಂಧೆಯಲ್ಲಿ ತೊಡಗಿವೆ. ಸುಮಾರು 4,065 ಬೆಡ್ ಗಳನ್ನು ಅಕ್ರಮವಾಗಿ ಕಾಯ್ದಿರಿಸಲಾಗಿದೆ ಎಂಬ ಮಾಹಿತಿಯನ್ನು ಸ್ವತಃ ಬಿಜೆಪಿ ಸಂಸದ, ಶಾಸಕರೇ ಬಯಲಿಗೆಳೆದರೆಂಬ ಮಾಹಿತಿಗಳು ಹಲವು ಅನುಮಾನಗಳನ್ನು ಹುಟ್ಟಿಸುತ್ತಿವೆ ಎಂದು ಹೇಳಿದ್ದಾರೆ.

ಇಂತಹ ದಂಧೆಕೋರತನವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅತ್ಯುಗ್ರವಾಗಿ ಖಂಡಿಸುತ್ತದೆ. ಸತ್ಯವನ್ನು  ಬಯಲಿಗೆಳೆಯಲು ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತದೆ.

ಮಂಗಳವಾರದ ಸಂಪುಟ ಸಭೆಯಲ್ಲಿ ಕೆಲವು ಸಚಿವರಿಗೆ ಜವಾಬ್ದಾರಿ ಹಂಚಲಾಗಿದೆ. ಆದ್ದರಿಂದ ಪ್ರತಿ ದಿನ ಅವರ ಕೆಲಸಗಳ ಮತ್ತು ಲಭ್ಯವಿರುವ ವ್ಯವಸ್ಥೆಯ ಮಾಹಿತಿಯನ್ನು ಕಡ್ಡಾಯವಾಗಿ ಜನರಿಗೆ ತಿಳಿಸಬೇಕು.

ಸುಳ್ಳಿನ‌ ಸರದಾರರಾಗಿರುವ ಮುಖ್ಯಮಂತ್ರಿ, ಸಚಿವರು, ಶಾಸಕರು ಸಭೆ ಸಮಾಲೋಚನೆ ಗಳನ್ನು ಪ್ರಚಾರದ ತಂತ್ರವಾಗಿ ಬಳಸುತ್ತಿದ್ದು ಜನರನ್ನು ಮರುಳು‌ ಮಾಡುತ್ತಿದ್ದಾರೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಮೃತ ಪಟ್ಟಿದ್ದರೆ ಆರೋಗ್ಯ ಸಚಿವರು ಕೇವಲ‌ ಮೂರು ಸಾವೆಂದು ಪತ್ರಿಕಾಗೋಷ್ಟಿ ನಡೆಸಿದ ಘಟನೆಯೂ ಖಂಡನಾರ್ಹ. ಕಣ್ಣೊರೆಸುವ ತಂತ್ರವಾಗಿ‌ ನೇಮಿಸಿದ ತನಿಖಾ‌ ಮಾದರಿ ಯಾರಾದರೂ 'ಡಿ' ಗ್ರೂಪ್‌‌ ನೌಕರರನ್ನು ಅಥವಾ ಕೆಲವು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಪ್ರಕರಣ ಮುಚ್ಚಿ‌ ಹಾಕುವ ಎಲ್ಲ ಅಪಾಯಗಳಿವೆ. ಇವು ಒಂದು ಸರಕಾರವೇ‌ ಕೊಲೆಗಡುಕತನಕ್ಕೆ ನಿಂತ‌ ಉದಾಹರಣೆ. ಮೇ 1 ರಿಂದ ಎಲ್ಲರಿಗೂ ಲಸಿಕೆ ಎಂದು ವಿಜೃಂಬಿಸಿ ಈಗ ಎರಡನೇ‌ ಡೋಸ್‌ ಪಡೆಯುವವರಿಗೂ‌ ಲಸಿಕೆ ಸಿಗದ ಸ್ಥಿತಿ ನಿರ್ಮಾಣದ‌ ಹೊಣೆಯನ್ನು ಪ್ರಚಾರ ಪ್ರಿಯ‌ ಪ್ರಧಾನಿಯವರೇ ಹೊರಬೇಕು.

ಜೀವ ರಕ್ಷಕ ಆಮ್ಲಜನಕವಿಲ್ಲ, ಕೊವಿಡ್ ಗೆ ಬಳಸಲಾಗುತ್ತಿರುವ ರೆಮ್ಡೆಸಿವಿರ್ ಆಸ್ಪತ್ರೆ ಗಳಲ್ಲಿ ಲಭ್ಯವಿಲ್ಲ ಆದರೆ ಬ್ಲಾಕ್ ಮಾರ್ಕೆಟ್ ನಲ್ಲಿ ರಾಜಾರೋಷವಾಗಿ‌ ಮಾರಾಟವಾಗುತ್ತಿದೆ ಎಂಬುದು ಸ್ವತಃ ಸಚಿವರುಗಳೇ ಅವರ‌ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ ಘಟನೆಗಳಿಂದ ದೃಢಪಟ್ಟಿದೆ. ತೀರಾ ಅಗತ್ಯವಾದ ಆಕ್ಸಿಮಿಟರ್ ಗಳ ಬೆಲೆಗಳೂ ವಿಪರೀತವಾಗಿ ಏರಿದ್ದು ಜನ ಸಾಮಾನ್ಯರು ಕಂಗಾಲಾಗುವ ಸ್ಥಿತಿ ಇದೆ. ಇಂಥಹ ಹೊಣೆಗೇಡಿ ಸರಕಾರದಿಂದ‌ ಜನೋಪಯೋಗಿ ಕೆಲಸಗಳು ಜರುಗಲಾರವು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News