ಬಿಬಿಎಂಪಿ ವಾರ್ ರೂಮ್ ಗೂ ನನಗೂ ಸಂಬಂಧವೇ ಇಲ್ಲ, ನನ್ನ ವಿರುದ್ಧದ ಆರೋಪ ಆಘಾತಕಾರಿ: ಜಂಟಿ ಆಯುಕ್ತ ಸರ್ಫರಾಝ್ ಖಾನ್

Update: 2021-05-05 07:37 GMT

ಬೆಂಗಳೂರು, ಮೇ 5: ''ಕೋವಿಡ್ ಪೀಡಿತರಿಗೆ ಬೆಡ್ ಹಂಚುವ ಬಿಬಿಎಂಪಿ ವಾರ್ ರೂಮಿನಲ್ಲಿ ನಡೆದಿದೆ ಎನ್ನಲಾದ ಅವ್ಯವಸ್ಥೆಯಲ್ಲಿ  ನನ್ನ ಯಾವುದೇ ಪಾತ್ರವಿಲ್ಲ ಮಾತ್ರವಲ್ಲ ಅಲ್ಲಿ ಯಾವುದೇ ವೈದ್ಯರೂ ನನಗೆ ಗೊತ್ತಿಲ್ಲ. ಹೀಗಿದ್ದರೂ ನನ್ನನ್ನೂ ಹೆಸರನ್ನು ವಿನಾಕಾರಣ ಎಳೆದು ತಂದಿರುವುದು ಆಘಾತ ತಂದಿದೆ.‌ ವಾರ್ ರೂಮನ್ನು ನಡೆಸುತ್ತಿರುವುದು ವಿಶೇಷ ಆರೋಗ್ಯ ಆಯುಕ್ತರು. ನನ್ನ ಕಾರ್ಯವೇನಿದ್ದರೂ ಬಿಬಿಎಂಪಿ ಕೊವಿಡ್ ಕೇರ್ ಸೆಂಟರ್ ಗಳ ಉಸ್ತುವಾರಿ ಮತ್ತು ಘನ ತ್ಯಾಜ್ಯ ಇಲಾಖೆಯ ನಿರ್ವಹಣೆ ಮಾತ್ರ'' ಎಂದು ಬಿಬಿಎಂಪಿ ಜಂಟಿ ಆಯುಕ್ತರಾಗಿರುವ ಸರ್ಫರಾಝ್ ಖಾನ್ ಹೇಳಿದ್ದಾರೆ.

ಕೊರೋನ ಬೆಡ್ ಬ್ಲಾಕ್ ದಂಧೆಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಹೆಸರನ್ನೂ ಸೇರಿಸಿಕೊಂಡು ಹರಿದಾಡುತ್ತಿರುವ ಸಂದೇಶದ ಹಿನ್ನೆಲೆಯಲ್ಲಿ ಸರ್ಫರಾಝ್ ಖಾನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ರೀತಿ ತಮ್ಮ ನೋವು ತೋಡಿಕೊಂಡಿದ್ದಾರೆ.

ವಾರ್ ರೂಮ್ ಗೆ ಬೇಕಾದ ವೈದ್ಯರು ಅಥವಾ ಸಿಬ್ಬಂದಿಯ ನೇಮಕ ಮಾಡಿಕೊಳ್ಳುವುದು ಕೆಲಸ ಆರೋಗ್ಯ ಇಲಾಖೆಯ ಮತ್ತು ಆಯಾ ಬಿಬಿಎಂಪಿ ವಲಯಗಳ ಕೆಲಸವಾಗಿದೆ. ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಈ ವಿಷಯಕ್ಕೆ ಕೋಮು ಬಣ್ಣ ಹಚ್ಚಿರುವುದು ಮತ್ತು ಅದರಲ್ಲಿ ಆ ಇಲಾಖೆಗೆ ಯಾವ ರೀತಿಯಲ್ಲೂ ಸಂಬಂಧವೇ ಇರದ ತನ್ನ ಹೆಸರು ಸೇರಿಸಿರುವುದು ನಿಜಕ್ಕೂ ನೋವು ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

 ಎಲ್ಲ ಕೋವಿಡ್ ಕೇರ್ ಕೇಂದ್ರಗಳಿಗೆ ಆಕ್ಸಿಜನ್, ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ವ್ಯವಸ್ಥೆ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ತಾನು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇನೆ. ಹಜ್ ಭವನವನ್ನು  140 ಬೆಡ್ ವ್ಯವಸ್ಥೆಯುಳ್ಳ ಆಕ್ಸಿಜನ್ ಸೌಲಭ್ಯವುಳ್ಳ ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತಿಸಿದ್ದೇನೆ.‌ ಹಾಗೂ ಹಜ್ ಕಮಿಟಿ ನಿಧಿಯಿಂದಲೇ 50 ಐಸಿಯುಗಳನ್ನು ಇಲ್ಲಿ ಹಾಕಿಸಿದ್ದೇನೆ. ಈ ಹಜ್ ಭವನದಲ್ಲಿ ಸೇರಿಸಿಕೊಂಡು ಆರೈಕೆ ಮಾಡುತ್ತಿರುವ ಕೋವಿಡ್ ರೋಗಿಗಳಲ್ಲಿ 90 ಶೇ. ರೋಗಿಗಳು ಇತರ ಧರ್ಮದ ನನ್ನ ಸಹೋದರರಾಗಿದ್ದಾರೆ, ಕೇವಲ 10 ಶೇ. ರೋಗಿಗಳು ಮಾತ್ರ ಮುಸ್ಲಿಮರಾಗಿದ್ದಾರೆ ಎಂದವರು ತಿಳಿಸಿದ್ದಾರೆ.

ಕಳೆದ ವರ್ಷ ತಾನು ಬಡವರಿಗೆ ಮತ್ತು ಅಗತ್ಯವಿರುವ ಜನರಿಗೆ ಆಹಾರದ ಕಿಟ್ ಗಳನ್ನು ಒದಗಿಸಲು ಕೆಲಸ ಮಾಡಿದ್ದೆ. ಆಗ ಅವರೆಲ್ಲಾ ಯಾವ ಧರ್ಮದವರು, ಯಾವ ಪ್ರದೇಶದವರು ಎಂದು ನೋಡಲಿಲ್ಲ. ಸಾವಿರಾರು ವಲಸೆ ಕಾರ್ಮಿಕರೊಂದಿಗೆ ನಿಂತು ಅವರಿಗೆ ಅಗತ್ಯ ಆಹಾರ ನೀಡಿ ಧೈರ್ಯ ಹೇಳುವ ಕೆಲಸ ಮಾಡಿದೆ.‌ ಅವರಿಗೆ ತಂತಮ್ಮ ಊರುಗಳಿಗೆ ತಲುಪುವಂತೆ ರೈಲು ಪ್ರಯಾಣ ಮಾಡಲು ಸಹಕರಿಸಿದೆ.‌ ಇದೆಲ್ಲಾ ಮಾಡುವಾಗಲೂ ಅವರು ಯಾವ ಧರ್ಮದವರು ಎಂದಾಗಲೀ ಯಾವ ಊರೆಂದಾಲೀ ನೋಡಲಿಲ್ಲ. ತನ್ನ ದೃಷ್ಟಿಯಲ್ಲಿ ಅವರೆಲ್ಲರೂ ಬಹಳ ಕಷ್ಟದಲ್ಲಿರುವ ತನ್ನ ಸಹೋದರ ಸಹೋದರಿಯರಾಗಿದ್ದರು. ಅವರು ಆದಷ್ಟು ಬೇಗ ತಮ್ಮ ಊರುಗಳಿಗೆ ಮರಳಿ ತಮ್ಮ ಪ್ರೀತಿಪಾತ್ರರನ್ನು ಸೇರಿಕೊಳ್ಳಲಿ ಎನ್ನುವುದಷ್ಟೇ ತನ್ನ ಕಾಳಜಿಯಾಗಿತ್ತು. ಇದರ ಪರಿಣಾಮವಾಗಿ ತನ್ನ ಇಡೀ ಕುಟುಂಬದವರಿಗೆ ತನ್ನಿಂದಾಗಿ ಕೋವಿಡ್ ಸೋಂಕು ತಗಲಿತ್ತು ಎಂದು ತಿಳಿಸಿದ್ದಾರೆ.

ಕೆಲವರ ಅಜ್ಞಾನ ಮತ್ತು ಮೂರ್ಖತನ ನಿಜಕ್ಕೂ ನನಗೆ ನೋವುಂಟು ಮಾಡಿದೆ.‌ ಇದರ ಕುರಿತು ಕಾನೂನು ಪ್ರಕಾರ ತನಿಖೆ ನಡೆದು, ಇಂತಹ ಕಷ್ಟದ ಸಮಯದಲ್ಲಿ ಸಹ ವಿಷವನ್ನು ಹರಡುತ್ತಿರುವವರ ಮೇಲೆ ಕ್ರಮ ಜರುಗಿಸಲಿ ಎಂದು ಆಶಿಸುತ್ತೇನೆ ಎಂದು ಸರ್ಫರಾಝ್ ಖಾನ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News