ಸರ್ಫರಾಝ್ ಖಾನ್ ಗೆ ಫೋನ್ ಮಾಡಿ ಸಂತೈಸಿದ ತೇಜಸ್ವಿ ಸೂರ್ಯ

Update: 2021-05-05 13:24 GMT

ಬೆಂಗಳೂರು, ಮೇ 5: ಕೊರೋನ ಸೋಂಕಿತರಿಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಬೆಂಗಳೂರು ದಕ್ಷಿಣ ಕೋವಿಡ್ ವಾರ್ ರೂಂ ಮೂಲಕ ಹಾಸಿಗೆ ವ್ಯವಸ್ಥೆ ಕಲ್ಪಿಸುವ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದು, 'ಇದನ್ನು ಬಿಬಿಎಂಪಿ ವಾರ್ ರೂಮ್ ನಲ್ಲಿರುವವರೇ ಮಾಡುತ್ತಾರೆ. ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ' ಎಂದು ಹೇಳಿದ್ದರು.

ಹಗರಣಕ್ಕೆ ಸಂಬಂಧಿಸಿದಂತೆ ಸಂಸದರ ಆರೋಪದ ಬೆನ್ನಲ್ಲೇ ಹಲವರ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆ ಬಳಿಕ ಬಿಬಿಎಂಪಿ ಜಂಟಿ ಆಯುಕ್ತರಾಗಿರುವ ಸರ್ಫರಾಝ್ ಖಾನ್ ಹೇಳಿಕೆ ನೀಡಿ, 'ಕೋವಿಡ್ ಪೀಡಿತರಿಗೆ ಬೆಡ್ ಹಂಚುವ ಬಿಬಿಎಂಪಿ ವಾರ್ ರೂಮಿನಲ್ಲಿ ನಡೆದಿದೆ ಎನ್ನಲಾದ ಅವ್ಯವಸ್ಥೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ' ಎಂದು ಸ್ಪಷ್ಟನೆ ನೀಡಿದ್ದರು.

'ಅಲ್ಲಿನ ಯಾವುದೇ ವೈದ್ಯರೂ ನನಗೆ ಗೊತ್ತಿಲ್ಲ. ಹೀಗಿದ್ದರೂ ನನ್ನ ಹೆಸರನ್ನು ವಿನಾಕಾರಣ ಎಳೆದು ತಂದಿರುವುದು ಆಘಾತ ತಂದಿದೆ.‌ ವಾರ್ ರೂಮನ್ನು ನಡೆಸುತ್ತಿರುವುದು ವಿಶೇಷ ಆರೋಗ್ಯ ಆಯುಕ್ತರು. ನನ್ನ ಕಾರ್ಯವೇನಿದ್ದರೂ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ ಗಳ ಉಸ್ತುವಾರಿ ಮತ್ತು ಘನ ತ್ಯಾಜ್ಯ ಇಲಾಖೆಯ ನಿರ್ವಹಣೆ ಮಾತ್ರ' ಸರ್ಫರಾಝ್ ಖಾನ್ ಹೇಳಿದ್ದರು.

ಇದರ ನಂತರ ಸಂಸದ ತೇಜಸ್ವಿ ಸೂರ್ಯ ಅವರು ಸರ್ಫರಾಝ್ ಖಾನ್ ಗೆ ಕರೆ ಮಾಡಿ ಸಂತೈಸಿದ್ದಾರೆ. ''ನಮ್ಮ ಆರೋಪದ ಬಳಿಕ ನಿಮ್ಮನ್ನು, ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಸಂದೇಶಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ನಮ್ಮ ವಿಡಿಯೋ ಕ್ಲಿಪ್ ನಲ್ಲಿ ನಿಮ್ಮ ಬಗ್ಗೆ ನಾನು ಯಾವುದೇ ಆರೋಪ ಮಾಡಿಲ್ಲ. ನಿಮ್ಮನ್ನು ಟಾರ್ಗೆಟ್ ಮಾಡುವ ಯಾವುದೇ ಹೇಳಿಕೆ ಅದರಲ್ಲಿ ಇಲ್ಲ. ನಿಮ್ಮ ಬಗ್ಗೆ ಎಲ್ಲರಲ್ಲೂ ಒಳ್ಳೆಯ ಅಭಿಪ್ರಾಯ, ಗೌರವವಿದೆ. ಈ ವಿಷಯದಲ್ಲಿ ನಾನು ನಿಮ್ಮ ಜೊತೆಗಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಫರಾಝ್ ಖಾನ್ 'ನಾವು ನಿಮ್ಮ ಜೊತೆಗಿದ್ದೇವೆ. ನಿಮ್ಮ ಎಲ್ಲಾ ಕೆಲಸದಲ್ಲಿ ಜೊತೆಗಿರುತ್ತೇವೆ. ನಾವು ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News