ಬೆಂಗಳೂರು ಬೆಡ್ ಬ್ಲಾಕಿಂಗ್ ಹಗರಣ ಆರೋಪ: ನಾಲ್ವರನ್ನು ಬಂಧಿಸಿದ ಸಿಸಿಬಿ ಪೊಲೀಸರು

Update: 2021-05-05 15:44 GMT

ಬೆಂಗಳೂರು, ಮೇ 5: ಕೋವಿಡ್ ಸಂಬಂಧ ರೋಗಿಗಳಿಗೆ ಹಾಸಿಗೆ ಮೀಸಲು ವಿಚಾರವಾಗಿ ನಡೆದಿದೆ ಎನ್ನಲಾದ ಬೆಡ್ ಬ್ಲಾಕಿಂಗ್ ಅವ್ಯವಹಾರ ಪ್ರಕರಣ ಸಂಬಂಧ ವೈದ್ಯರಿಬ್ಬರು ಸೇರಿದಂತೆ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಾದ ರೋಹಿತ್ ಹಾಗೂ ನೇತ್ರಾ ನೀಡಿದ ಮಾಹಿತಿ ಆಧಾರದ ಮೇಲೆ ಬುಧವಾರ ನಾಲ್ವರನ್ನು ಬಂಧಿಸಿದ ಸಿಸಿಬಿ ಪೊಲೀಸರು, ಆನಂತರ, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಮಾಹಿತಿ ಕಲೆಹಾಕಿದರು.

ಮಂಗಳವಾರ ತಡರಾತ್ರಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಕಲೆಹಾಕಿದ್ದರು. ಆನಂತರ, ಇಬ್ಬರು ವೈದ್ಯರು, ಡೇಟಾ ಎಂಟ್ರಿ ಆಪರೇಟರ್ ಗಳು, ಸಹಾಯಕರು ಸೇರಿ 8 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪೈಕಿ ವೈದ್ಯರ ಪಾತ್ರವೇನು ಎಂಬುದರ ಬಗ್ಗೆ ಸಿಸಿಬಿ ಕೂಲಂಕಷವಾಗಿ ತನಿಖೆ ನಡೆಸುತ್ತಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿವೆ.

ಹಣ ವಸೂಲಿ?: ಇದುವರೆಗೂ ಸಾಮಾನ್ಯ ಬೆಡ್‍ಗೆ 40 ಸಾವಿರ ರೂ, ಮತ್ತೊಂದು ಆಕ್ಸಿಜನ್ ಬೆಡ್‍ಗೆ 67 ಸಾವಿರದಂತೆ ಒಟ್ಟು 1.07 ಲಕ್ಷ ಹಣವನ್ನು ವಸೂಲಿ ಮಾಡಿದ್ದರು ಎನ್ನುವ ಮಾಹಿತಿಯನ್ನು ಆರೋಪಿಗಳಿಬ್ಬರು ಬಾಯಿಬಿಟ್ಟಿದ್ದಾರೆ. ಸದ್ಯ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ನಗರ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಪ್ರತಿಕ್ರಿಯಿಸಿದ್ದು, ಕೆಲವು ವಾಟ್ಸಪ್ ಗ್ರೂಪ್‍ ಗಳಲ್ಲಿ ಬೆಡ್ ಕೊಡಿಸುವುದಾಗಿ ಹೇಳಿ ಆರೋಪಿಗಳ ಮೊಬೈಲ್ ಸಂಖ್ಯೆ ಹರಿದಾಡುತ್ತಿತ್ತು. ಈ ವೇಳೆ ಇವರಿಗೆ ಕರೆ ಬಂದಾಗ ಅವರಿಂದ ಹಣ ಪಡೆದು ಬೆಡ್ ಮೀಸಲು ಮಾಡುತ್ತಿದ್ದರು. ಆರೋಪಿಗಳು ಒಟ್ಟು ಐದು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಗಿದೆ ಎಂದರು.

ಸಾಫ್ಟ್ ವೇರ್ ಬಗ್ಗೆ ಬೆಡ್ ಲಾಕಿಂಗ್ ಮತ್ತು ಅನ್‍ಲಾಕಿಂಗ್ ಬಗ್ಗೆ ಕೆಲವು ಅಡಚಣೆ ಇತ್ತು. ಇದರ ಬಗ್ಗೆ ಸಂಶಯ ಬಂದಿದ್ದು, ಪ್ರತ್ಯೇಕ ಎಫ್‍ಐಆರ್ ಮಾಡಲಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಏನಿದು ಪ್ರಕರಣ?: ಬೆಂ.ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ಅವ್ಯವಹಾರ ನಡೆಯುತ್ತಿದೆ ಎಂದು ಮಂಗಳವಾರ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವರ್ಗಾಯಿಸಿದ್ದಾರೆ.

ಆಯುಕ್ತರನ್ನು ಭೇಟಿ ಮಾಡಿದ ಸೂರ್ಯ

ಬೆಡ್‍ಗಳನ್ನು ಬ್ಲಾಕ್ ಮಾಡಿ ಅವ್ಯವಹಾರ ಬಯಲಿಗೆಳೆದಿರುವ ಸಂಸದ ತೇಜಸ್ವಿ ಸೂರ್ಯ ಅವರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ಮಾಡಿ ಕೆಲ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, ಬೆಡ್ ಬ್ಲಾಕಿಂಗ್ ಹಗರಣ ಕುರಿತು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಮುಖ್ಯಮಂತ್ರಿ ಸಹ ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಂಧಿಸುವಂತೆ ಹೇಳಿದ್ದಾರೆ. ನನಗೆ ಬಂದಿರುವ ಮಾಹಿತಿಯನ್ನು ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ ಎಂದರು. ಪ್ರಕರಣ ಕುರಿತಂತೆ ರಾಜಕೀಯ ಮಾಡುತ್ತಿಲ್ಲ. ಸಮಸ್ಯೆಗಳ ಜೊತೆಗೆ ಪರಿಹಾರ ಸಹ ಕೇಳುವಂತೆ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ನುಡಿದರು.

ವಾರ್ ರೂಂಗಳ ಮೇಲೆ ದಾಳಿ

ಬೆಡ್ ಬ್ಲಾಕಿಂಗ್ ಅವ್ಯವಹಾರ ಆರೋಪ ಸಂಬಂಧ ನಗರದ ಎಲ್ಲ ವಲಯಗಳ ಕೊರೋನ ವಾರ್ ರೂಂಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News