ಉತ್ತರಪ್ರದೇಶ: ಕೋವಿಡ್‌ ನಿಂದ ಮತೃಪಟ್ಟ ಅನಾಥ ಮಹಿಳೆಯ ಅಂತ್ಯಸಂಸ್ಕಾರ ನಡೆಸಿದ ಮೆಹರಾಜುದ್ದೀನ್‌ ಖಾನ್‌

Update: 2021-05-05 16:26 GMT
ಸಾಂದರ್ಭಿಕ ಚಿತ್ರ

ಶಾಹಜಹಾನ್ಪುರ (ಉ.ಪ್ರ),ಮೇ 5: ಕೊರೋನವೈರಸ್ ನಿಂದಾಗಿ ಮೃತಪಟ್ಟ ಬಳಿಕ ಹಲವಾರು ದಿನಗಳಿಂದ ಶವಾಗಾರದಲ್ಲಿ ಅನಾಥವಾಗಿದ್ದ ಮಹಿಳೆಯ ಅಂತ್ಯ ಸಂಸ್ಕಾರವನ್ನು ಹೃದಯವಂತ ವ್ಯಕ್ತಿಯೋರ್ವರು ನೆರವೇರಿಸುವ ಮೂಲಕ ಮಾನವತೆಯೇ ಶ್ರೇಷ್ಠ ಧರ್ಮ ಎನ್ನುವುದನ್ನು ಸಾಬೀತುಗೊಳಿಸಿದ್ದಾರೆ.

ನಿರ್ಗತಿಕರ ಆಶ್ರಯಧಾಮದಲ್ಲಿ ವಾಸವಾಗಿದ್ದ ಸುನಿತಾ ದೇವಿ(70) ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು,ಆಕೆಯನ್ನು ಎ.5ರಂದು ಇಲ್ಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಎಮರ್ಜನ್ಸಿ ವಾರ್ಡ್ನಲ್ಲಿ ದಾಖಲಿಸಲಾಗಿತ್ತು. ಆಕೆಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಎ.29ರಂದು ಕೊನೆಯುಸಿರೆಳೆದಿದ್ದರು ಎಂದು ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪೂಜಾ ತ್ರಿಪಾಠಿ ಸುದ್ದಿಗಾರರಿಗೆ ತಿಳಿಸಿದರು.

ಮೃತ ಮಹಿಳೆಯ ಶವವನ್ನು ಸ್ವೀಕರಿಸಲು ಯಾರೂ ಮುಂದೆ ಬರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಮತ್ತು ಶವವನ್ನು ಕಳೆದ ಆರು ದಿನಗಳಿಂದ ಶವಾಗಾರದಲ್ಲಿರಿಸಲಾಗಿತ್ತು. ಮಂಗಳವಾರ ಮೆರಾಝುದ್ದೀನ್ ಖಾನ್ ಎನ್ನುವವರು ಮುಂದೆ ಬಂದು ಆ್ಯಂಬುಲನ್ಸ್ ಚಾಲಕ ಬೀರು ನೆರವಿನಿಂದ ಸುನಿತಾ ದೇವಿಯ ಅಂತ್ಯಸಂಸ್ಕಾರವನ್ನು ನಡೆಸಿದ್ದಾರೆ.

ಸ್ಥಳೀಯ ಪತ್ರಕರ್ತರಾಗಿರುವ ಖಾನ್ ಇನ್ನೋರ್ವ ಮೃತಮಹಿಳೆ ಸುದಾಮಾ ದೇವಿ(60)ಯ ಅಂತ್ಯಸಂಸ್ಕಾರಕ್ಕೂ ಹಣಕಾಸು ಒದಗಿಸುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News