ಹಣ ಪಡೆದು ಬೆಡ್ ಮಾರಾಟ ಆರೋಪ: ಆರೋಗ್ಯ ಮಿತ್ರ ಸಿಬ್ಬಂದಿ ಸೇರಿ ಮೂವರ ಬಂಧನ

Update: 2021-05-05 18:21 GMT

ಬೆಂಗಳೂರು, ಮೇ.5: ಕೋವಿಡ್ ರೋಗಿಗೆ ಹಾಸಿಗೆ ಮೀಸಲಿಡಲು 1.20 ಲಕ್ಷ ಹಣ ಪಡೆದಿದ್ದ ಆರೋಪದ ಮೇಲೆ ಮೂವರನ್ನು ಇಲ್ಲಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಆರೋಗ್ಯ ಮಿತ್ರ ಸಿಬ್ಬಂದಿ ಪುನೀತ್ ಮತ್ತು ವೆಂಕಟ್ ಸುಬ್ಬರಾವ್, ಮಂಜುನಾಥ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಈ ಮೂವರ ಪೈಕಿ ಪುನೀತ್ ಎಂಬಾತ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ 'ಆರೋಗ್ಯ ಮಿತ್ರ'ರಾಗಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಬುಧವಾರ ಮಧ್ಯಾಹ್ನ ವೇಳೆ ಲಕ್ಷ್ಮೀದೇವಮ್ಮ ಎಂಬವರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ಲಕ್ಷ್ಮೀದೇವಮ್ಮ ಅವರ ಪುತ್ರ ಲಕ್ಷ್ಮೀಶನಿಂದ ಈ ಮೂವರು ಒಟ್ಟು 1.20 ಲಕ್ಷ ಪಡೆದಿದ್ದರು. 50 ಸಾವಿರ ಗೂಗಲ್ ಪೇ ಮೂಲಕ ಮತ್ತು 70 ಸಾವಿರ ನಗದು ಪಡೆದಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸೋಂಕಿತ ಲಕ್ಷ್ಮೀದೇವಮ್ಮ ಮೃತಪಟ್ಟಿದ್ದರು ಎನ್ನಲಾಗಿದೆ.

ಆರೋಪಿಗಳು ಹಣ ಪಡೆದು ಹಾಸಿಗೆ ನೀಡಿದ್ದ ಬಗ್ಗೆ ಪುತ್ರ ಲಕ್ಷ್ಮೀಶ ಪೊಲೀಸರಿಗೆ ದೂರು ನೀಡಿದ್ದರು. ಇದರ ಅನ್ವಯ ಕೇಂದ್ರ ವಿಭಾಗದ ಪೊಲೀಸರ‌ ತಂಡ ಆರೋಪಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News